ಪ್ರೊ-ಕಬಡ್ಡಿ ಸೀಸನ್ 4ಗೆ ಭಟ್ಕಳದ ಹರೀಶ್ ನಾಯ್ಕ ಆಯ್ಕೆ

ಭಟ್ಕಳ, ಜೂ.25: ವರ್ಣರಂಜಿತ ಪ್ರೊ-ಕಬಡ್ಡಿ ಸೀಸನ್ 4 ಪಂದ್ಯಾವಳಿಗೆ ತಾಲೂಕಿನ ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್‌ನ ಆಟಗಾರ ಹರೀಶ ನಾಯ್ಕ ಆಯ್ಕೆಯಾಗಿದ್ದಾರೆ.
ಹರೀಶ್ ಪ್ರೊ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿರುವ ಜಿಲ್ಲೆಯ ಏಕೈಕ ಆಟಗಾರರಾಗಿದ್ದು, ಬೆಂಗಳೂರು ಬುಲ್ಸ್ ತಂಡದ ಪರವಾಗಿ ಆಡಲಿದ್ದಾರೆ. ಪ್ರಸ್ತುತ ಧಾರವಾಡದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ವ್ಯಾಸಂಗ ಮಾಡುತ್ತಿರುವ ಹರೀಶ್ ಪಿಯುಸಿಯಲ್ಲಿ ಓದುತ್ತಿರುವಾಗಲೇ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಭಟ್ಕಳದ ಸರ್ಪನಕಟ್ಟೆಯ ಸ್ಪೋರ್ಟ್ಸ್ ಕ್ಲಬ್ ಈತನ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದು, ಇದೀಗ ಫಲ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಟ್ಕಳ ಅಮೆಚೂರ್ ಕಬಡ್ಡಿ ಅಸೋಶಿಯೇಶನ್‌ನ ಪ್ರಮುಖರು, ಹರೀಶ್‌ರ ಆಯ್ಕೆಯೊಂದಿಗೆ ಭಟ್ಕಳ ಕಬಡ್ಡಿಗೆ ಹೆಸರುವಾಸಿಯಾಗಿರುವುದು ಇನ್ನೊಮ್ಮೆ ಸಾಬೀತಾಗಿದೆ. ಯುವ ಪೀಳಿಗೆ ಇದನ್ನು ಸದುಪಯೋಗಪಡಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ.ನಾಯ್ಕ, ಇನಾಯಿತುಲ್ಲಾ ಶಾಬಂದ್ರಿ, ಶ್ರೀಧರ ನಾಯ್ಕ, ಜಾಪರ್, ಗಣೇಶ ನಾಯ್ಕ, ಹನುಮಂತ ನಾಯ್ಕ, ಲಕ್ಷ್ಮೀ ನಾರಾಯಣ ನಾಯ್ಕ, ವಾಸು ನಾಯ್ಕ, ಉಮೇಶ ನಾಯ್ಕ, ತುಳಸೀದಾಸ ನಾಯ್ಕ, ಮೋಹನ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.







