ಕೇಂದ್ರ ವಕ್ಫ್ ಕಾಯ್ದೆಯ ನಿಯಮಾವಳಿಗಳಿಗೆ ಮಂಜೂರಾತಿ: ಸಚಿವ ತನ್ವೀರ್ ಸೇಠ್

ಬೆಂಗಳೂರು, ಜೂ. 25: ಕೇಂದ್ರದ ನೂತನ ವಕ್ಫ್ ಕಾಯ್ದೆಗೆ ಸಂಬಂಧಿಸಿದಂತೆ ರಾಜ್ಯ ವಕ್ಫ್ ಬೋರ್ಡ್ ರಚಿಸಿರುವ ನಿಯಮಾ ವಳಿಗಳಿಗೆ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರೊಂದಿಗೆ ಚರ್ಚಿಸಿ ಶೀಘ್ರವೇ ಮಂಜೂರಾತಿ ನೀಡಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವೀರ್‌ಸೇಠ್ ತಿಳಿಸಿದ್ದಾರೆ.
ಶನಿವಾರ ನಗರದ ವಕ್ಫ್ ಬೋರ್ಡ್‌ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರ ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ವಕ್ಫ್ ಬೋರ್ಡ್ ನಿಯಮಾವಳಿಗಳನ್ನು ರಚನೆ ಮಾಡಿ ಸರಕಾರಕ್ಕೆ ಸಲ್ಲಿಸಿತ್ತು. ಆದರೆ, ಅದಕ್ಕೆ ಈವರೆಗೆ ಮಂಜೂರಾತಿ ಸಿಕ್ಕಿರಲಿಲ್ಲ. ಸಿಎಂ ಹಾಗೂ ಕಾನೂನು ಸಚಿವರೊಂದಿಗೆ ಸಮಾಲೋಚಿಸಿ ಶೀಘ್ರವೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಲು ಬಹುಸದಸ್ಯರನ್ನು ಒಳಗೊಂಡ ನ್ಯಾಯಾಧೀ ಕರಣಗಳನ್ನು ಬೆಂಗಳೂರು ಹಾಗೂ ಕಲಬುರಗಿ ಕಂದಾಯ ವಿಭಾಗ ದಲ್ಲಿ ಆರಂಭಿಸಬೇಕೆಂಬ ಪ್ರಸ್ತಾವನೆಯು ಸರಕಾರದ ಮುಂದಿತ್ತು. ಹಣಕಾಸು ಇಲಾಖೆಯು ಬೆಂಗಳೂರು ವಿಭಾಗದ ನ್ಯಾಯಾಧೀಕರಣ ಆರಂಭಕ್ಕೆ ಅನುಮತಿ ನೀಡಿದ್ದು, ಹಂತಹಂತವಾಗಿ ಉಳಿದ ಕಂದಾಯ ವಿಭಾಗಗಳಲ್ಲಿ ಇದೇ ಮಾದರಿ ನ್ಯಾಯಾಧಿಕರಣ ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು. ವಕ್ಫ್ ಆಸ್ತಿಗಳ ಅಕ್ರಮ ಒತ್ತುವರಿ ತೆರವುಗೊಳಿಸಲು ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚನೆ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮುಂದಿದ್ದ ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಅದರ ಬದಲು ವಕ್ಫ್ ಜೊತೆಗೆ ಜನತೆಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ತಾಲೂಕು ಮಟ್ಟದಲ್ಲಿ ತಾಲೂಕು ವಕ್ಫ್ ಸಂರಕ್ಷಣಾ ಸಮಿತಿಗಳನ್ನು ರಚನೆ ಮಾಡಲು ಉದ್ದೇಶಿಸಲಾಗಿದೆ ಎಂದು ತನ್ವೀರ್ ಸೇಠ್ ತಿಳಿಸಿದರು.
ಬೆಳ್ಳಹಳ್ಳಿಯಲ್ಲಿರುವ ವಕ್ಫ್ ಭೂಮಿಯನ್ನು ಸರಕಾರಿ ನೌಕರರ ಮನೆಗಳಿಗಾಗಿ 15 ಎಕರೆ ಹಾಗೂ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ 9ಎಕರೆ ಮಂಜೂರು ಮಾಡಬೇಕೆಂಬ ಶಿಫಾರಸು ಸಚಿವ ಸಂಪುಟದ ಮುಂದೆ ಬಂದಿದ್ದು, ಈ ವಿಷಯವನ್ನು ಹಿಂಪಡೆಯುವಂತೆ ಸಂಪುಟ ಸಭೆ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗುವುದು. ವಕ್ಫ್ ಆಸ್ತಿಗಳ ಸರ್ವೇ ಕಾರ್ಯ ಶೇ.60ರಷ್ಟು ಪೂರ್ಣಗೊಂಡಿದ್ದು, ಉಳಿದ ಆಸ್ತಿಗಳ ಸರ್ವೆ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಿ, ಅವರ ದಾಖಲಾತಿಗಳನ್ನು ಕಂದಾಯ ಇಲಾಖೆಯ ಮೂಲಕ ಪ್ರಕಟಿಸುವ ಕೆಲಸ ಮಾಡುವುದಾಗಿ ಅವರು ಹೇಳಿದರು. ವಕ್ಫ್ ಬೋರ್ಡ್ ಚುನಾವಣೆ: ರಾಜ್ಯ ವಕ್ಫ್ ಬೋರ್ಡ್‌ನ ಅವಧಿಯು ಆಗಸ್ಟ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ನಿಗದಿತ ಅವಧಿಯಲ್ಲೇ ಚುನಾವಣೆ ನಡೆಯಲಿದೆ. ಚುನಾವಣಾ ಅಧಿಸೂಚನೆ ಹೊರ ಬೀಳುವುದಕ್ಕೆ ಮುಂಚಿತ ವಾಗಿ ಮತದಾರರ ಪಟ್ಟಿಯನ್ನು ಸಿದ್ಧಗೊಳಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್, ಅಲ್ಪಸಂ ಖ್ಯಾತರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಮುಹಮ್ಮದ್ ಮೊಹ್ಸಿನ್, ವಕ್ಫ್ ಬೋರ್ಡ್ ಸದಸ್ಯ ಆರ್.ಅಬ್ದುಲ್ ರಿಯಾಝ್‌ಖಾನ್, ಹಝ್ರತ್ ಮಾಣಿಕ್ ಶಾ ದರ್ಗಾ ಸಮಿತಿ ಅಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಅಕ್ರಮ್‌ಪಾಷ ಉಪಸ್ಥಿತರಿದ್ದರು.







