ಚುಟುಕು ಸುದ್ದಿಗಳು
ಮುಲ್ಕಿ: ಕಾರು ಢಿಕ್ಕಿ ಹೊಡೆದು ಮಹಿಳೆ ಮೃತ್ಯು
ಮುಲ್ಕಿ, ಜೂ.25: ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ರಸ್ತೆ ಬದಿಯಲ್ಲಿ ನಡೆದುಹೋಗುತ್ತಿದ್ದ ದಂಪತಿಗೆ ಢಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಘಟನೆ ವರದಿಯಾಗಿದೆ.
ಮುಲ್ಕಿ ಬಪ್ಪನಾಡು ದೇವಸ್ಥಾನದ ಎದುರು ರಾತ್ರಿ 7:15ಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಕಿಂಗ್ ಬಂದಿದ್ದ ಕಾರ್ನಾಡು ಮೇಘಾ ಪ್ಲಾಟ್ ನಿವಾಸಿ ನಿವೃತ್ತ ಡಿವೈಎಸ್ಪಿ(ವಯರ್ ಲೆಸ್ ವಿಭಾಗ) ಎಂ.ಸಿ. ಹೆಗ್ಡೆ ಮತ್ತು ಅವರ ಪತ್ನಿ ಜ್ಯೋತಿಯವರು ನಡೆದುಕೊಂಡು ಬರುತ್ತಿ ದ್ದಾಗ ಉಡುಪಿ ಕಡೆಯಿಂದ ವೇಗವಾಗಿ ಬಂದ ಕಾರು ಢಿಕ್ಕಿಯಾದ ಪರಿಣಾಮ ಜ್ಯೋತಿಯವರು ತೀವ್ರ ವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಹೆಗ್ಡೆಯವರಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿವೆ. ಅಪಘಾತ ಎಸಗಿದ ಕಾರು ಪರಾರಿಯಾಗಿದ್ದು, ಮಂಗಳೂರು ಉತ್ತರ ವಲಯ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಗರಿಕರ ಆಕ್ರೋಶ
ನನೆಗುದಿಗೆ ಬಿದ್ದಿರುವ ಹೆದ್ದಾರಿ ಕಾಮಗಾರಿ ಸಮಸ್ಯೆಯಿಂದಾಗಿ ಈ ಪ್ರದೇಶದಲ್ಲಿ ಬೀದಿ ದೀಪಗಳಿಲ್ಲದೆ ಕಗ್ಗತ್ತಲು ತುಂಬಿದೆ. ಈ ಕಾರಣದಿಂದಾಗಿ ಈ ಭಾಗದಲ್ಲಿ ಬಹಳಷ್ಟು ಜೀವಹಾನಿಗಳಾಗಿವೆ. ಹೆದ್ದಾರಿ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆರಿಗೆ ಅಧಿಕಾರಿಗಳಿಂದ ದಾಳಿ
ಮಂಗಳೂರು, ಜೂ.25:ಆದಾಯ ತೆರಿಗೆಯನ್ನು ಪಾವತಿಸದೆ ವಂಚಿಸುತ್ತಿರುವ ನಗರದ ಹಲವು ಮಂದಿ ಬಿಲ್ಡರ್‌ಗಳು ಮತ್ತು ಮಾರ್ಬಲ್ ಉದ್ದಿಮೆ ಸಂಸ್ಥೆಯ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖಾಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.
ತೆರಿಗೆ ವಂಚನೆ ಆರೋಪದಲ್ಲಿ ಶುಕ್ರವಾರದಿಂದಲೇ ಈ ದಾಳಿ ಕಾರ್ಯಾಚರಣೆ ನಡೆದಿದೆ ಎಂದು ಹೇಳಲಾಗಿದೆ. ದಿಲ್ಲಿಯಿಂದ ಆಗಮಿಸಿರುವ ಸುಮಾರು 40ಕ್ಕೂ ಅಧಿಕ ಅಧಿಕಾರಿಗಳ ತಂಡ ಕಚೇರಿ ಹಾಗೂ ಸಂಸ್ಥೆಯ ಮಾಲಕರ ಮನೆಗಳಿಗೆ ದಾಳಿ ನಡೆಸಿವೆ ಎನ್ನಲಾಗಿದೆ.
ಬೈಕ್ ಢಿಕ್ಕಿ: ಪಾದಚಾರಿ ಮೃತ್ಯು
ಬೆಳ್ತಂಗಡಿ, ಜೂ.25: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ದ್ವಿಚಕ್ರ ವಾಹನ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಶನಿವಾರ ಮುಂಡಾಜೆಯಲ್ಲಿ ನಡೆದಿದೆ.
ಮಿತ್ತಬಾಗಿಲು ಗ್ರಾಮದ ದಿಡುಪೆ ನಿವಾಸಿ ಶ್ರೀಧರ ಗೌಡ (55) ಮೃತಪಟ್ಟವರು. ಸೋಮಂತಡ್ಕದಲ್ಲಿ ರಸ್ತೆ ದಾಟಲು ಬದಿಯಲ್ಲಿ ನಿಂತಿದ್ದ ವೇಳೆ ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
ಮರಳು ಸಾಗಾಟಗಾರರಿಂದ ಹಣ ವಸೂಲಿ
ತಹಶೀಲ್ದಾರ್ ವಾಹನ ಚಾಲಕನ ಮೇಲೆ ಪ್ರಕರಣ ದಾಖಲು
ಬೆಳ್ತಂಗಡಿ, ಜೂ.25: ತಹಶೀಲ್ದಾರರ ಅನುಮತಿ ಪಡೆಯದೆ ಇಲಾಖಾ ವಾಹನವನ್ನು ರಾತ್ರಿ ವೇಳೆ ತೆಗೆದುಕೊಂಡು ಹೋಗಿ ಮರಳು ಸಾಗಾಟದ ಲಾರಿಗಳನ್ನು ನಿಲ್ಲಿಸಿ, ಅವರಲ್ಲಿ ದಂಡದ ರೂಪದಲ್ಲಿ ಹಣ ವಸೂಲಿ ಮಾಡಿರುವ ಬಗ್ಗೆ ಬೆಳ್ತಂಗಡಿ ತಹಶೀಲ್ದಾರರು ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಹಿನ್ನ್ನೆಲೆಂುಲ್ಲಿ ಚಾಲಕ ರಾಜೇಶ್ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಮೇ 30 ರಂದು ಸಂಜೆ ಕರ್ತವ್ಯ ಮುಗಿಸಿ ಇಲಾಖಾ ವಾಹನವನ್ನು ಶೆಡ್ಡಿನಲ್ಲಿ ನಿಲ್ಲಿಸಿ ತೆರಳಿದ್ದ ರಾಜೇಶ್ ರಾತ್ರಿ ವೇಳೆ ತಹಶೀಲ್ದಾರರ ಅನುಮತಿ ಇಲ್ಲದೆ ಕೊಂಡೊಯ್ದು ಹಣ ವಸೂಲಿಗಿಳಿದಿದ್ದರು. ಈ ಬಗ್ಗೆ ತಹಶೀಲ್ದಾರ್ ನೀಡಿದ ದೂರಿನ ಮೇರೆಗೆ ರಾಜೇಶ್ ಮೇಲೆ ಇಲಾಖಾ ವಾಹನ ದುರ್ಬಳಕೆ ಮಾಡಿ, ನಂಬಿಕೆ ದ್ರೋಹ ಎಸಗಿರುವುದಾಗಿ ಪ್ರಕರಣ ದಾಖಲಾಗಿದೆ.
ಅರ್ಜಿ ಆಹ್ವಾನ
ಮಂಗಳೂರು, ಜೂ.25: ಜಿಲ್ಲಾ ತರಬೇತಿ ಕೇಂದ್ರ, ಸುರತ್ಕಲ್, ಮಂಗಳೂರು, ಇಲ್ಲಿ 2016-17ನೆ ಸಾಲಿಗೆ ಗಣಕಯಂತ್ರ ಆಪರೇಟರ್ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಜುಲೈ 11ರಂದು ನೇರ ಸಂದರ್ಶನ ನಡೆಸಲಾಗುವುದು. ಮಾಹಿತಿಗಾಗಿ ಪ್ರಾಂಶುಪಾಲರ ಕಛೇರಿ, ಜಿಲ್ಲಾ ತರಬೇತಿ ಕೇಂದ್ರ, ಸುರತ್ಕಲ್ ಕಛೇರಿಯ ದೂರವಾಣಿ ಸಂಖ್ಯೆ: 0824-2478930 ಪ್ರಾಂಶುಪಾಲರ ಪ್ರಕಟನೆ ತಿಳಿಸಿದೆ.
ಜಾನುವಾರು ಸಾಗಾಟ: ಬಂಧನ
ಮಂಗಳೂರು, ಜೂ. 25: ಟೆಂಪೋ ಟ್ರಾವೆಲರ್‌ನಲ್ಲಿ ಜಾನುವಾರು ಸಾಗಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಕದ್ರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹಮೀದ್ ಜೋಕಟ್ಟೆ ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ 4 ಗಂಟೆಗೆ ವಾಹನದಲ್ಲಿ 17 ಜಾನುವಾರುಗಳನ್ನು ಸಾಗಿಸುತ್ತಿದ್ದನೆಂದು ಹೇಳಲಾಗಿದ್ದು, ಪೊಲೀಸರು ವಾಹನ ಸಹಿತ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಪರಿಚಿತ ಶವ ಪತ್ತೆ
ಗಂಗೊಳ್ಳಿ, ಜೂ.25: ಕುಂದಾಪುರ ತಾಲೂಕಿನ ನಾಡಾ ಗ್ರಾಪಂ ವ್ಯಾಪ್ತಿಯ ಚುಂಗಿಗುಡ್ಡೆ ಸಮೀಪದ ಸೌಪರ್ಣಿಕಾ ನದಿಯಲ್ಲಿ ಶನಿವಾರ ಬೆಳಗ್ಗೆ 35ರಿಂದ 38 ವರ್ಷ ವಯಸ್ಸಿನ ಅಪರಿಚಿತ ಪುರುಷನ ಶವವೊಂದು ಪತ್ತೆಯಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಕಳವು
ಉಡುಪಿ, ಜೂ.25: ಉಡುಪಿ ಸಮೀಪದ ಗೋಳಿಯಂಗಡಿಯ ಮಂಜುನಾಥ ಹೆಬ್ಬಾರ್‌ರ ಬೈಕ್ ಕಳವು ಆದ ಬಗ್ಗೆ ಪ್ರಕರಣ ದಾಖಲಾಗಿದೆ. ಅವರು ಜೂ.16ರ ಸಂಜೆ ಉಡುಪಿಯ ವಿದ್ಯೋದಯ ಶಾಲೆ ಬಳಿ ಲಾಕ್ ಮಾಡಿ ನಿಲ್ಲಿಸಿದ್ದ ಹೀರೊ ಹೊಂಡಾ ಬೈಕ್ (ಕೆಎ 20ಡಬ್ಲು 7282)ಕಳವು ರಾತ್ರಿ ಬಂದು ನೋಡಿದಾಗ ಕಾಣೆಯಾಗಿತ್ತು.
ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.
ವರದಕ್ಷಿಣೆ ಕಿರುಕುಳ ಪ್ರಕರಣ
ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
ಪುತ್ತೂರು, ಜೂ.25: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಆರೋಪ ಎದುರಿಸುತ್ತಿದ್ದ ಪುತ್ತೂರು ತಾಲೂಕಿನ ಕಡಬದ ಹನೀಫ್ ಮತ್ತು ಆತನ ತಾಯಿ ಆಯಿಷಾರಿಗೆ ಪುತ್ತೂರಿನ 5ನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ಹನೀಫ್ ಮತ್ತು ಆತನ ತಾಯಿ ಆಯಿಷಾ ಸೇರಿಕೊಂಡು ತವರುಮನೆಯಿಂದ ಹೆಚ್ಚುವರಿ ವರದಕ್ಷಿಣೆ ತರುವಂತೆ ್ತ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿ ಪತ್ನಿ ಫೌಝಿಯಾ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗಳ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿಕೊಂಡಿದ್ದರು. ಇದೀಗ ಆರೋಪಿಗಳು ವಕೀಲರ ಮೂಲಕ ಪುತ್ತೂರಿನ 5ನೆ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ಮೊರೆ ಹೋಗಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಆರೋಪಿಗಳ ಪರವಾಗಿ ಪುತ್ತೂರಿನ ವಕೀಲರಾದ ಮಹೇಶ್ ಕಜೆ,ಕಿಶೋರ್ ಕೊಳತ್ತಾಯ, ಪ್ರಸಾದ್ ಕುಮಾರ್ ರೈ ವಾದಿಸಿದ್ದರು.
ನೇಣಿಗೆ ಶರಣು
ಬೆಳ್ತಂಗಡಿ, ಜೂ.25: ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಶಿವಮೊಗ್ಗ ಮೂಲದ ಪ್ರವೀಣ್ (30) ಎಂಬವರು ವಸತಿ ಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೈಕಂಬ-ಮುಳಿಗದ್ದೆ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ: ತನಿಖೆಗೆ ಒತ್ತಾಯ
ಮಂಜೇಶ್ವರ, ಜೂ.25: ಲೋಕೋಪಯೋಗಿ ಇಲಾಖೆಗೊಳಪಟ್ಟ ಕೈಕಂಬ ಮುಳಿಗದ್ದೆ ರಸ್ತೆಯ ಕಾಮಗಾರಿಯಲ್ಲಿ ಅವ್ಯವಹಾರವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಕೆ.ಆರ್.ಜಯಾನಂದ ಒತ್ತಾಯಿಸಿದ್ದಾರೆ.
ಈ ರಸ್ತೆಯನ್ನು ಕಳೆದ 5 ವರ್ಷದಲ್ಲಿ ಅಭಿವೃದ್ಧಿಪಡಿಸದ ಕಾರಣ ಸಂಚರಿಸಲೂ ಸಾಧ್ಯವಿಲ್ಲದಂತಾಗಿದೆ. ಈ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಶಾಸಕರು ಹೇಳಿಕೊಂಡಿದ್ದರೂ ಅದನ್ನು ಈಡೇರಿಸಿಲ್ಲ. ಅಲ್ಪಸ್ವಲ್ಪ ಕಾಮಗಾರಿ ನಡೆಸಲಾಗಿದೆ. ಆದರೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆಯಿದೆ ಎಂದು ಜಯಾನಂದ ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಳವು ಆರೋಪಿಗಳಿಗೆ ಜಾಮೀನು
ಪುತ್ತೂರು, ಜೂ.25: ಬೈಕನ್ನು ಕಳವುಗೈದು ಮಾರಾಟ ಮಾಡಲೆಂದು ತೆರಳುತ್ತಿದ್ದ ವೇಳೆ ಪುತ್ತೂರು ನಗರ ಪೊಲೀಸರ ಕೈಗೆ ಸಿಕ್ಕಿ ಬಿದ್ದು, ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಸಾಮೆತ್ತಡ್ಕ ನಿವಾಸಿ ಪ್ರಸಾದ್ (23) ಮತ್ತು ಪುತ್ತೂರು ನಗರದ ಹೊರವಲಯದ ಪಡೀಲಿನ ಕಾರ್ತಿಕ್ (23)ರನ್ನು ಪುತ್ತೂರು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಆರೋಪಿಗಳ ಪರವಾಗಿ ವಕೀಲರಾದ ಅರಂತನಡ್ಕ ಬಾಲಕೃಷ್ಣ ರೈ, ದುರ್ಗಾಪ್ರಸಾದ್ ರೈ ಕುಂಬ್ರ, ಮಹೇಶ್ ಕಜೆ, ಪ್ರಸಾದ್ ಕುಮಾರ್ ರೈ ವಾದಿಸಿದ್ದರು.







