ಎಐಐಬಿ ಸಾಲಕ್ಕಾಗಿ ಭಾರತದ ಯೋಜನೆಗಳ ಆಯ್ಕೆ: ಜೇಟ್ಲಿ
ಬೀಜಿಂಗ್, ಜೂ. 25: ಭಾರತ ಭಾರೀ ಸಂಖ್ಯೆಯ ಮೂಲಸೌಕರ್ಯ ಯೋಜನೆಗಳನ್ನು ಹೊಂದಿದೆ ಹಾಗೂ ಯಾವ ಯೋಜನೆಗಳಿಗೆ ಏಶ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎಐಐಬಿ)ನಿಂದ ಹಣಕಾಸು ನೆರವು ಪಡೆಯಬೇಕು ಎಂಬ ಬಗ್ಗೆ ಅದು ನಿರ್ಧಾರವೊಂದನ್ನು ತೆಗೆದುಕೊಳ್ಳಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಶನಿವಾರ ಹೇಳಿದ್ದಾರೆ.
ಎಐಐಬಿ ಗವರ್ನರ್‌ಗಳ ಮಂಡಳಿಯ ಮಹತ್ವದ ಸಭೆಯಲ್ಲಿ ಭಾಗವಹಿಸುವ ಮುನ್ನ ಜೇಟ್ಲಿ ಈ ಹೇಳಿಕೆ ನೀಡಿದ್ದಾರೆ. ಬೀಜಿಂಗ್‌ನಲ್ಲಿ ನೆಲೆ ಹೊಂದಿರುವ ಎಐಐಬಿಯನ್ನು ಕಳೆದ ವರ್ಷ ಅಧಿಕೃತವಾಗಿ ಸ್ಥಾಪಿಸಲಾಯಿತು. ಭಾರತ ಮತ್ತು ಇತರ 56 ದೇಶಗಳು ಸ್ಥಾಪಕ ಸದಸ್ಯರಾಗಿರುವ ಈ ಬ್ಯಾಂಕ್ 10,000 ಕೋಟಿ ಡಾಲರ್ ಬಂಡವಾಳ ಹೊಂದಿದೆ.
ಬಂಡವಾಳದ 26.06 ಶೇ. ಪಾಲಿನೊಂದಿಗೆ ಚೀನಾ ಬ್ಯಾಂಕ್‌ನ ಅತ್ಯಂತ ದೊಡ್ಡ ಶೇರುದಾರ ದೇಶವಾಗಿದೆ. 7.5 ಶೇ. ಬಂಡವಾಳ ಹೊಂದಿರುವ ಭಾರತ ಎರಡನೆ ಅತಿ ದೊಡ್ಡ ಪಾಲುದಾರನಾಗಿದೆ. 5.93 ಶೇ. ಪಾಲು ಬಂಡವಾಳ ಹೊಂದಿರುವ ರಶ್ಯ ಮತ್ತು 4.5 ಶೇ. ಪಾಲು ಬಂಡವಾಳ ಹೊಂದಿರುವ ‘ಜರ್ಮನಿ ನಂತರದ ಸ್ಥಾನ ಗಳಲ್ಲಿವೆ.
ಬ್ಯಾಂಕ್ ನಿನ್ನೆ ತನ್ನ ಮೊದಲ ಸುತ್ತಿನ ನಾಲ್ಕು ಸಾಲಗಳನ್ನು ಪ್ರಕಟಿಸಿತು. ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಶ್ಯ ಮತ್ತು ತಜಿಕಿಸ್ತಾನಗಳ ಮೂಲಸೌಕರ್ಯ ಯೋಜನೆ ಗಳಿಗೆ ಒಟ್ಟು 50.9 ಕೋಟಿ ಡಾಲರ್ ಸಾಲ ನೀಡಲಾಗಿದೆ. ‘‘ರೈಲ್ವೆ, ವಿಮಾನ ನಿಲ್ದಾಣ, ಬಂದರುಗಳು, ನೀರು ಪೂರೈಕೆ, ಚರಂಡಿ, ಸ್ಮಾರ್ಟ್ ಸಿಟಿ ನಿರ್ಮಾಣ ಮತ್ತು ನಗರೀಕರಣ ಮುಂತಾದ ಕ್ಷೇತ್ರಗಳಲ್ಲಿ ಬೃಹತ್ ಪ್ರಮಾಣದಲ್ಲಿ ಮೂಲಸೌಕರ್ಯ ಯೋಜನೆಗಳು ಜಾರಿಗೆ ಬರುತ್ತಿವೆ’’ ಎಂದು ಚೀನಾಕ್ಕೆ ಐದು ದಿನಗಳ ಭೇಟಿ ನೀಡಿರುವ ಜೇಟ್ಲಿ ಆ ದೇಶದ ಸರಕಾರಿ ಒಡೆತನದ ಸಿಸಿಟಿವಿಗೆ ತಿಳಿಸಿದರು.







