ರಾಜಕೀಯ ಕುಲೀನರ ವಿರುದ್ಧ ಬಡವರ ಆಕ್ರೋಶ ಕಾರಣ
ಬ್ರೆಕ್ಸಿಟ್ ವಿಶ್ಲೇಷಣೆ

ಪ್ಯಾರಿಸ್, ಜೂ. 25: ಐರೋಪ್ಯ ಒಕ್ಕೂಟದಿಂದ ಬ್ರಿಟನನ್ನು ಹೊರಕ್ಕೆಳೆದು ತಂದವರು ಅಲ್ಲಿನ ಬಡ ಮತ್ತು ಕಡಿಮೆ ಶಿಕ್ಷಣ ಪಡೆದ ಪ್ರಜೆಗಳು. ನೂತನ ವಿಶ್ವ ವ್ಯವಸ್ಥೆಯ ಆರ್ಥಿಕ ಲಾಭ ತಮಗೆ ಸಿಗದಿರುವುದರ ಬಗ್ಗೆ ಅವರು ಆಕ್ರೋಶಗೊಂಡಿದ್ದರು- ಹೀಗೆಂದು ಪರಿಣತರು ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ನ ನಿರ್ಗಮನವನ್ನು ವಿಶ್ಲೇಷಿಸುತ್ತಾರೆ.
ಜನಮತಗಣನೆಯ ಈ ಫಲಿತಾಂಶವು ಸಮಾಜದ ಉನ್ನತ ಸ್ತರದಲ್ಲಿರುವವರಿಗೆ ಬೆದರಿಕೆಯಾಗಿದೆ.
ಆರ್ಥಿಕ ಬಿಕ್ಕಟ್ಟಿನಿಂದಾಗಿ ಭಾರೀ ಸಂಕಷ್ಟಕ್ಕೆ ಒಳಗಾದವರು ಈ ಕೆಳಸ್ತರದ ಜನರು. ತಮ್ಮ ಅನಿಶ್ಚಿತ ಆರ್ಥಿಕ ಸ್ಥಿತಿಗತಿಯ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ವಲಸಿಗರ ಬಗ್ಗೆ ಅವರು ಭೀತಿ ಪಡಲಾರಂಭಿಸಿದರು ಹಾಗೂ ಈ ಭೀತಿಯನ್ನು ಐರೋಪ್ಯ ಒಕ್ಕೂಟದಲ್ಲಿರುವ ಬಲಪಂಥೀಯ ಗುಂಪುಗಳು ಮತ್ತು ಅಮೆರಿಕದ ಡೊನಾಲ್ಡ್ ಟ್ರಂಪ್ ತಮ್ಮ ಪ್ರಯೋಜನಕ್ಕಾಗಿ ಬಳಸಿಕೊಂಡರು ಎಂದು ಪರಿಣತರು ಅಭಿಪ್ರಾಯಪಡುತ್ತಾರೆ.
‘‘ಎಲ್ಲಿ ನೋಡಿದರೂ ಇದೇ ಪೃವೃತ್ತಿ ನನಗೆ ಕಾಣುತ್ತದೆ’’ ಎಂದು ಅಮೆರಿಕದ ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಶನ್‌ನಲ್ಲಿರುವ ಸೀನಿಯರ್ ಫೆಲೊ ವಿಲಿಯಂ ಗ್ಯಾಲ್‌ಸ್ಟನ್ ಹೇಳುತ್ತಾರೆ.
‘‘ಬ್ರಿಟನ್‌ನಲ್ಲಿರುವ ಜನಸಂಖ್ಯಾ ವರ್ಗದ ಮಾದರಿಯಲ್ಲೇ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕದ ಮತದಾರರ ವರ್ಗಗಳಿವೆ’’.
ಹೆಚ್ಚಿನ ಸಂಖ್ಯೆಯ ವಲಸಿಗ ಕೆಲಸಗಾರರನ್ನು ಹೊಂದಿರುವ ಗ್ರಾಮೀಣ ಪ್ರದೇಶಗಳು, ಮಾಜಿ ಕೈಗಾರಿಕಾ ಕೇಂದ್ರಗಳು ಮತ್ತು ನಗರಗಳ ಸುತ್ತಲಿನ ಬಡತನದ ಪ್ರದೇಶಗಳು. ಇಲ್ಲಿನ ಮತದಾರರೆಲ್ಲ ಬ್ರೆಕ್ಸಿಟ್ (ಐರೋಪ್ಯ ಒಕ್ಕೂಟದಿಂದ ಬ್ರಿಟನ್ ನಿರ್ಗಮನ) ಪರವಾಗಿ ಮತ ಹಾಕಿದವರು. ವಿಶ್ವವಿದ್ಯಾನಿಲಯದ ಶಿಕ್ಷಣ ಇಲ್ಲದವರು ಮತ್ತು ಹಿರಿಯ ಮತದಾರರು ಬ್ರೆಕ್ಸಿಟ್ ಪರವಾಗಿ ಮತ ಚಲಾಯಿಸಿದ 53.4 ಶೇಕಡಾದಲ್ಲಿ ಸೇರಿದ್ದಾರೆ. ‘‘ಈ ಜನರು ರಾಜಕೀಯ ಕುಲೀನರನ್ನು ನಂಬುವುದಿಲ್ಲ. ಯಾಕೆಂದರೆ, ಈವರೆಗೆ ಯಾವುದೇ ರಾಜಕೀಯ ಪಕ್ಷಗಳು ಜನರ ಅತೃಪ್ತಿಯನ್ನು ಪರಿಗಣಿಸಿ ಅದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ ಎಂದು ಅವರು ಭಾವಿಸುತ್ತಾರೆ’’.
‘‘ಬ್ರೆಕ್ಸಿಟ್‌ನಲ್ಲಿ ಜಯ ಗಳಿಸಿದ ರೀತಿಯಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲೂ ಈ ಶಕ್ತಿಗಳು ಯಶಸ್ವಿಯಾಗುತ್ತವೆ ಎಂದು ನಾನು ನಿರೀಕ್ಷಿಸುವುದಿಲ್ಲವಾದರೂ, ಯುರೋಪ್‌ನಾದ್ಯಂತ ಇರುವ ಸ್ಥಾಪಿತ ಪಕ್ಷಗಳಿಗೆ ಇದು ಮಹತ್ವದ ಎಚ್ಚರಿಕೆಯ ಕರೆಗಂಟೆಯಾಗಿದೆ’’ ಎಂದು ಗ್ಯಾಲ್‌ಸ್ಟನ್ ಹೇಳುತ್ತಾರೆ.







