ಮಹಿಳೆಯರ 100ಮೀ. ಓಟ; ದ್ಯುತಿ ಚಂದ್‌ಗೆ ಒಲಿಂಪಿಕ್ಸ್ ಟಿಕೆಟ್

ಹೊಸದಿಲ್ಲಿ, ಜೂ25: ಭಾರತದ ಓಟಗಾರ್ತಿ ಒಡಿಶಾದ ದ್ಯುತಿ ಚಂದ್ ಮುಂಬರುವ ರಿಯೋ ಒಲಿಂಪಿಕ್ಸ್‌ನ ಮಹಿಳೆಯರ 100 ಮೀಟರ್ ಓಟದಲ್ಲಿ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ದ್ಯುತಿ ಚಂದ್ ರಿಯೋ ಒಲಿಂಪಿಕ್ಸ್‌ನಲ್ಲಿ ಅವಕಾಶ ಪಡೆದಿರುವ ಭಾರತದ 99ನೆ ಅಥ್ಲೀಟ್ ಎನಿಸಿಕೊಂಡಿದ್ದಾರೆ.
ಕಝಕಿಸ್ತಾನದ ಅಲ್ಮಟಿಯಲ್ಲಿ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಚಂದ್ ಅವರು 11.30 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಗಿಟ್ಟಿಸಿಕೊಂಡರು.
ಒಲಿಂಪಿಕ್ಸ್‌ನಲ್ಲಿ ಅವಕಾಶ ಪಡೆಯಲು ದ್ಯುತಿ 11.32 ಸೆಕೆಂಡ್‌ಗಳಲ್ಲಿ ಗುರಿ ತಲುಪಬೇಕಿತ್ತು. ದ್ಯುತಿ 11.30 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಒಲಿಂಪಿಕ್ಸ್‌ಗೆ ತೇರ್ಗಡೆಯಾದರು.
ಕಳೆದ ಎಪ್ರಿಲ್‌ನಲ್ಲಿ ಹೊಸದಿಲ್ಲಿಯಲ್ಲಿ ನಡೆದ ಫೆಡರೇಶನ್ ಕಪ್ ನ್ಯಾಶನಲ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 11.33 ಸೆಕೆಂಡ್‌ಗಳಲ್ಲಿ ಗುರಿ ಸೇರಿದ್ದರು. ಆದರೆ 0.01 ಸೆಕೆಂಡ್‌ಗಳಲ್ಲಿ ಅವರಿಗೆ ಒಲಿಂಪಿಕ್ಸ್ ಅವಕಾಶ ಕೈ ತಪ್ಪಿತ್ತು.
ಶನಿವಾರ ಅವರು ಅತ್ಯುತ್ತಮ ಪ್ರದರ್ಶನ ನೀಡಿದರು. ತನ್ನ ದಾಖಲೆಯನ್ನು ಉತ್ತಮ ಪಡಿಸಿದ ದ್ಯುತಿ ಚಂದ್ ಅವರು ಟ್ರಾಕ್ ಇವೆಂಟ್‌ನಲ್ಲಿ ಒ.ಪಿ.ಜೈಶಾ ಮತ್ತು ಲಲಿತಾ ಬಾಬರ್ ಜೊತೆ ಸೇರ್ಪಡೆಗೊಂಡರು.
ದ್ಯುತಿ ತೈವಾನ್‌ನಲ್ಲಿ ತೈವಾನ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 200 ಮೀಟರ್ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಪಿ.ಟಿ. ಉಷಾ ಬಳಿಕ ಒಲಿಂಪಿಕ್ಸ್‌ಗೆ 100 ಮೀಟರ್‌ನಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆದಿರುವ ಭಾರತದ ಎರಡನೆ ಅಥ್ಲೀಟ್ ಎನಿಸಿಕೊಂಡಿದ್ದರು.
1986ರಲ್ಲಿ ಪಿ.ಟಿ.ಉಷಾ 100 ಮೀಟರ್ ಓಟದಲ್ಲಿ ಒಲಿಂಪಿಕ್ಸ್ ಟಿಕೆಟ್ ಪಡೆದಿದ್ದರು.
‘‘ ನನಗೆ ಈ ಕ್ಷಣ ಸಂತಸ ನೀಡಿತು. ನನಗೆ ಈ ವರ್ಷ ಸವಾಲಿನದ್ದಾಗಿತ್ತು.ಕೋಚ್ ರಮೇಶ್ ಸರ್ ಮಾರ್ಗದರ್ಶನ ಮತ್ತು ಕಠಿಣ ಪರಿಶ್ರಮದ ಫಲವಾಗಿ ಒಲಿಂಪಿಕ್ಸ್‌ಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ಸಾಧ್ಯವಾಯಿತು. ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಕೃತಜ್ಞತೆಗಳು’’ - ದ್ಯುತಿ ಚಂದ್





