ಮುಸ್ಲಿಮರ ಬಗ್ಗೆ ಟ್ರಂಪ್ ಹೇಳುವುದು ಸುಳ್ಳು, ಓಮರ್ ಬಗ್ಗೆ ಎಫ್‌ಬಿಐಗೆ ಮಾಹಿತಿ ನೀಡಿದ್ದು ನಾನು: ಮುಹಮ್ಮದ್ ಮಲಿಕ್

ಅಮೆರಿಕದ ಮುಸ್ಲಿಮರು ಏನನ್ನೋ ಅಡಗಿಸುತ್ತಿದ್ದಾರೆ ಎನ್ನುವುದು ಡೊನಾಲ್ಡ್ ಟ್ರಂಪ್ ನಂಬಿಕೆ. ಏನಾಗುತ್ತಿದೆ ಎನ್ನುವುದು ಅವರಿಗೆ ಗೊತ್ತು. ಅದು (ಓಮರ್ ಮತೀನ್) ಕೆಟ್ಟದು ಎನ್ನುವುದೂ ಅವರಿಗೆ ಗೊತ್ತು. ಅವರು ಕಾನೂನು ಆಡಳಿತದ ಜೊತೆಗೆ ಸಹಕರಿಸಬೇಕು ಮತ್ತು ಯಾರು ಕೆಟ್ಟವರು ಎಂದುಕೊಂಡಿದ್ದಾರೋ ಅವರನ್ನು ಕಾವಲುಪಡೆಗೆ ತೋರಿಸಿಕೊಡಬೇಕು. ಆದರೆ ನಿಮಗೆ ಗೊತ್ತೆ? ಅವರು ಕೆಟ್ಟವರ ಬಗ್ಗೆ ತಿಳಿಸುವುದಿಲ್ಲ. ನಿಮಗೆ ಗೊತ್ತೆ? ಅದರ ಪರಿಣಾಮವಾಗಿ ಮರಣ ಮತ್ತು ವಿನಾಶವಾಗಿದೆ ಎಂದು ಓರ್ಲಾಂಡೋ ಹತ್ಯಾಕಾಂಡದ ಸಂದರ್ಭದಲ್ಲಿ ಟ್ರಂಪ್ ಹೇಳಿದ್ದಾರೆ.
ಇದು ಅಮೆರಿಕದ ಸಾಮಾನ್ಯ ನಂಬಿಕೆ. ಇದು ಸುಳ್ಳೂ ಹೌದು. ಮೊದಲನೆಯದಾಗಿ ನನ್ನಂತಹ ಮುಸ್ಲಿಮರು ನಮ್ಮದೇ ಧರ್ಮೀಯ ಇತರರ ಹೃದಯದ ಒಳಹೊಕ್ಕು ನೋಡಲು ಸಾಧ್ಯವಿಲ್ಲ. (ನಿಮ್ಮ ಸಮುದಾಯದಲ್ಲಿರುವ ಎಲ್ಲರನ್ನೂ ಆಳವಾಗಿ ತಿಳಿದುಕೊಳ್ಳಲು ನಿಮಗೆ ಸಾಧ್ಯವೆ?) ಎರಡನೆಯದಾಗಿ ನಮಗೆ ಸಾಧ್ಯವಾದಾಗ ನಾವು ಮಾತನಾಡುವುದಿಲ್ಲ ಎಂದು ಅವರು ಹೇಳಿರುವುದು ತಪ್ಪು. ನಾನೇ ಇದಕ್ಕೆ ಸಾಕ್ಷಿಯಾಗಿರುವೆ: ಓಮರ್ ಮತೀನ್ ಬಗ್ಗೆ ಎಫ್‌ಬಿಐಗೆ ಸುಳಿವು ನೀಡಿದವನೇ ನಾನು.
ನಾನು ಓಮರ್‌ನನ್ನು ಮೊದಲ ಬಾರಿ 2006ರಲ್ಲಿ ಸೋದರ ಸಂಬಂಧಿಯೊಬ್ಬರ ಇಫ್ತಾರ್ ಕೂಟವೊಂದರಲ್ಲಿ ಭೇಟಿಯಾಗಿದ್ದೆ. ಅವರ ತಾಯಿ ಮತ್ತು ಸಹೋದರಿಯರು ಸೇರಿದಂತೆ ಮಹಿಳೆಯರು ಮನೆಯೊಳಗೆ ಮಾತನಾಡುತ್ತಿದ್ದಂತೆ, ನಾನು ಪುರುಷರ ಜೊತೆಗೆ ಮತ್ತೊಂದು ಕೋಣೆಯೊಳಗೆ ಇದ್ದೆ. ಆಗಲೇ ಓಮರ್ ಮತ್ತು ಆತನ ತಂದೆಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ಓಮರ್ ಮತೀನ್ ಶೇಖ್ ಕುಡಿದು ರಂಝಾನ್ ಉಪವಾಸ ಬಿಟ್ಟಿದ್ದ. ಆತ ಮೌನಿಯಾಗಿದ್ದ. ಆಗ ಮತ್ತು ಯಾವಾಗಲೂ ಅವನು ಇದ್ದದ್ದು ಹಾಗೇ. ಆತನ ತಂದೆಯೇ ಮಾತನಾಡುತ್ತಿದ್ದರು. ನಾನು ಅವರನ್ನು ಈ ಹಿಂದೆಯೂ ಫ್ಲೋರಿಡಾದ ಇಸ್ಲಾಮಿಕ್ ಸೆಂಟರ್ ಆಫ್ ಫೋರ್ಟ್ ಪಿಯರ್ಸ್‌ನ ಪುರಾತನ ಮಸೀದಿಯ ಬಳಿ ನೋಡಿದ್ದೆ. ನಮ್ಮ ಸಮುದಾಯದಲ್ಲಿ ಬಹಳಷ್ಟು ವಲಸಿಗರು ಇದ್ದಾರೆ. ಅವರು ಇತರ ರಾಷ್ಟ್ರಗಳಲ್ಲಿ ಬೆಳೆಯುತ್ತಾರೆ ಮತ್ತು ವಿಭಿನ್ನ ಸಂವೇದನೆಗಳನ್ನು ಹೊಂದಿರುತ್ತಾರೆ. ಕೆಲವರು ಅಮೆರಿಕದ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ ಮತ್ತು ಅಮೆರಿಕದಲ್ಲೇ ಹುಟ್ಟಿದ ಮತ್ತು ಅಮೆರಿಕದಲ್ಲಿ ಬೆಳೆದವರ ಜೊತೆಗೆ ಅವರಿಗೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ.
ಮಕ್ಕಳು
ನಾನು 1979ರಲ್ಲಿ ಆರು ವರ್ಷದ ವಯಸ್ಸಿನಲ್ಲಿ ಪಾಕಿಸ್ತಾನದಿಂದ ಅಮೆರಿಕಕ್ಕೆ ಬಂದೆ. ಓಮರ್‌ನಂತೆ ನಾನೂ ಕ್ವೀನ್ಸ್ ಮತ್ತು ಫೋರ್ಟ್ ಲಾಡೇರ್ಡೇಲ್ (ಫ್ಲೋರಿಡಾ) ಅಲ್ಲೇ ಬೆಳೆದೆ. ಅಮೆರಿಕದ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿತೆ ಮತ್ತು ಚೆನ್ನಾಗಿ ಬೆಳೆದೆ. ಹೀಗಾಗಿ ನಮ್ಮ ಸಮುದಾಯದ ಒಳಗೆ ಉತ್ತಮವಾಗಿ ಒಳತೂರಲು ನನಗೆ ಸಾಧ್ಯವಾಯಿತು. ಇಫ್ತಾರ್ ಅಲ್ಲಿ ನಾನು ಭೇಟಿಯಾದ ಅಂತರ್ಮುಖಿ ಯುವಕನ ಜೊತೆಗೂ ಹಾಗೇ ನಾನು ಬೆರೆತೆ. ಯುವಕರ ಜೊತೆಗೆ ಹೆಚ್ಚು ಸಂಪರ್ಕದಲ್ಲಿರುವ ಪ್ರಯತ್ನ ನಾನು ಮಾಡುತ್ತಿದ್ದೆ. ಸಾಧ್ಯವಾದಷ್ಟು ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದೆ. ಮುಂದಿನ ದಶಕದಲ್ಲಿ ನಾನು ಆಗಾಗ್ಗೆ ಓಮರ್‌ನನ್ನು ಭೇಟಿಯಾದೆ ಮತ್ತು ನಮ್ಮ ನಡುವೆ ಒಂದು ಸಂಬಂಧ ಏರ್ಪಟ್ಟಿತು. ಅವರ ವಯಸ್ಸಿನ ಬಹುತೇಕ ಮುಸ್ಲಿಂ ಮಕ್ಕಳು ಬೇರೆಡೆ ಶಿಕ್ಷಣಕ್ಕಾಗಿ ಹೋದರೂ ಆತ ಇಲ್ಲೇ ಉಳಿದ. ನಾವು ಬಹುತೇಕ ಫೋನಿನ ಮೂಲಕ ಅಥವಾ ಸಂದೇಶದ ಮೂಲಕವೇ ಮಾತನಾಡುತ್ತಿದ್ದೆವು. ಮಸೀದಿಯಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳಿಲ್ಲದೆ ಇರುವ ಬಗ್ಗೆ, ಮುಖ್ಯವಾಗಿ ಯುವಕರು ಮತ್ತು ಅವರಂತಹ ಹದಿಹರೆಯದವರಿಗೆ ಸೌಲಭ್ಯಗಳಿಲ್ಲದ ಬಗ್ಗೆ ಮಾತನಾಡಿದ್ದೆವು. ಆತನ ಜೊತೆಗೆ ನಾನು ತಮಾಷೆಯೂ ಮಾಡಿದ್ದೆ. 2009ರ ಸುಮಾರಿಗೆ ನಾನು ಆತನ ಕಾರಿಗೆ ಎಲ್‌ಇಡಿ ದೀಪಗಳನ್ನು ಜೋಡಿಸಿದ್ದೆ. ಆತ ಕಾರು ಚಲಾಯಿಸಿದಾಗ ಚಕ್ರಗಳು ನಿಯಾನ್ ಬೆಳಕು ಸೂಸಿದ್ದವು. ಕೆಲ ದಿನಗಳ ನಂತರ ಇದು ಆತನಿಗೆ ಗೊತ್ತಾದಾಗ ನಕ್ಕಿದ್ದ.
ಅದಾದ ಮೇಲೆ ಓಮರ್ ಮದುವೆಯಾಗಿ ತನ್ನದೇ ಮನೆಗೆ ಹೋದ ಮೇಲೆ ಮಸೀದಿಗೆ ಬರುವುದು ಹೆಚ್ಚಾಯಿತು. ನಂತರ ಆತ ಸೌದಿ ಅರೆಬಿಯಕ್ಕೆ ಧಾರ್ಮಿಕ ಪ್ರವಾಸಕ್ಕೆ ಹೋದ. ಆತನಲ್ಲಿ ಕರಿಮುಖವಿದೆ ಎಂದು ತೋರಿಸುವಂತಹದ್ದು ಏನೂ ಇರಲಿಲ್ಲ. ಆತ ಮೊದಲ ಪತ್ನಿಗೆ ವಿಚ್ಛೇದನೆ ನೀಡಿದಾಗಲೂ ಅಂತಹ ಸುಳಿವಿರಲಿಲ್ಲ. ಆದರೆ ಈ ವಾರದ ಸುದ್ದಿಗಳು ಸ್ಪಷ್ಟಪಡಿಸಿವೆ. ಓಮರ್ ಜೀವನದಲ್ಲೂ ಕರಾಳತೆ ಇತ್ತು. ಸ್ವಲ್ಪ ಮಟ್ಟಿಗೆ ಅಮೆರಿಕದಲ್ಲಿ ಮುಸ್ಲಿಮರು ಮತ್ತು ಇತರರ ಮೇಲಿನ ಜನಾಂಗೀಯವಾದವನ್ನು ಕಂಡು ಆತನ ಹತಾಶನಾಗಿದ್ದ. ಆತ ಸೇಂಟ್ ಲ್ಯೂಯಿಸ್ ಕೌಂಟಿ ಕೋರ್ಟ್ ಹೌಸ್‌ನ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿದಾಗ ಅಲ್ಲಿಗೆ ಭೇಟಿ ನೀಡುತ್ತಿದ್ದವರು ಆತನಿಗೆ ಇಸ್ಲಾಂ ಕುರಿತಾಗಿ ಕೆಟ್ಟ ಟೀಕೆಗಳನ್ನು ಮಾಡುತ್ತಿದ್ದರು. ಆಫ್ರಿಕನ್ ಅಮೆರಿಕನ್ನರ ಬಗ್ಗೆಯೂ ಜನರು ಕೆಟ್ಟದಾಗಿ ಮಾತನಾಡುವುದನ್ನೂ ಆತ ಕೇಳಿಸಿಕೊಂಡಿದ್ದ.
ಸೆಪ್ಟೆಂಬರ್ 11ರ ನಂತರ ಇಸ್ಲಾಮೋಫೋಬಿಯದ ವಿರುದ್ಧ ಉತ್ತರಿಸುವ ಏಕೈಕ ದಾರಿ ಎಂದರೆ ವಿನಯ ಮತ್ತು ದಯೆ. ನಾವು ಟಿವಿಯಲ್ಲಿ ಕಾಣುವ ಇಸ್ಲಾಂ ಕುರಿತ ಎಲ್ಲಾ ನಕಾರಾತ್ಮಕ ಜನರನ್ನು ವಿರೋಧಿಸುವ ದಾರಿ ಎಂದರೆ ಅದಕ್ಕೆ ತದ್ವಿರುದ್ಧ ನಾವು ಎಂದು ಸಾಬೀತುಮಾಡುವುದು. ನಾನು ಓಮರ್ ಅಗತ್ಯವಿರುವ ಜನರಿಗೆ ನೆರವಾಗಬೇಕು ಎಂದು ಒತ್ತಾಯಿಸಿದ್ದೆ. ಮುಸ್ಲಿಂ ಅಥವಾ ಇತರ ಜನಾಂಗದವರೇ ಆಗಿದ್ದರೂ ನೆರವು ನೀಡುವುದೇ ಇಸ್ಲಾಂ ಮೂಲ ಎಂದಿದ್ದೆ. ಆತನೂ ಒಪ್ಪಿದ್ದ. ಆದರೆ ಈ ಅನ್ಯಾಯದ ಬಗ್ಗೆ ಯಾವಾಗಲೂ ಆತ ಕೆಲಸ ಮಾಡುತ್ತಿದ್ದ.
ನಂತರ 2014 ಬೇಸಗೆಯಲ್ಲಿ ನಮ್ಮ ಸಮುದಾಯಕ್ಕೆ ದೊಡ್ಡದೊಂದು ಆಘಾತವಾಯಿತು. ನಮ್ಮ ಸ್ಥಳೀಯ ಮಸೀದಿಯ ಯುವಕ ಮೋನರ್ ಮೊಹಮ್ಮದ್ ಅಬು ಸಲ್ಹಾ ಎನ್ನುವ 22 ವರ್ಷದ ವ್ಯಕ್ತಿ ಮೊದಲನೆಯ ಅಮೆರಿಕಸಂಜಾತ ಆತ್ಮಾಹುತಿ ಬಾಂಬರ್ ಆದ. ಸಿರಿಯದಲ್ಲಿ ಟ್ರಕ್ ಪೂರ್ತಿ ಸ್ಫೋಟಕಗಳನ್ನು ಇಟ್ಟುಕೊಂಡು ಸರ್ಕಾರಿ ಕಚೇರಿ ಉಡಾಯಿಸಿದ.
ಸ್ವಯಂಕ್ರಾಂತಿಕಾರಿಯಾದ
ಆತ ಸಿರಿಯಾಗೆ ಪ್ರಯಾಣಿಸಿ ಅಲ್ ಖೈದಾ ಜತೆಗೆ ಸಂಪರ್ಕವಿರುವ ಸಂಘಟನೆಯನ್ನು ಒಂದು ವರ್ಷದ ಹಿಂದೆಯಷ್ಟೇ ಸೇರಿದ್ದ. ನಮಗೆಲ್ಲರಿಗೂ ಮೋನರ್ ಬಗ್ಗೆ ಗೊತ್ತಿತ್ತು. ಆತ ಸರಳ ಮತ್ತು ಮಜಾ ವ್ಯಕ್ತಿತ್ವದವ. ಓಮರ್‌ಗೆ ವಿರುದ್ಧ ಸ್ವಭಾವ. ಆತನ ಮರಣದ ನಂತರ ಬಿಡುಗಡೆಯಾದ ವಿಡಿಯೋ ನೋಡಿದರೆ ಆತ ಸ್ವಯಂಕ್ರಾಂತಿಕಾರಿಯಾಗಿದ್ದ ಮತ್ತು ಆತನ ಆ ಪರಿವರ್ತನೆಗೆ ಅನ್ವರ್ ಅಲ್ ಅವ್ಲಕಿಯ ಭಾಷಣಗಳೇ ಕಾರಣ. ಯೆಮೆನ್ ಮೂಲದ ಈ ಇಮಾಮ್ ಹಲವು ಮುಸ್ಲಿಮರು ಕ್ರಾಂತಿಕಾರಿಯಾಗಿ ಬದಲಾಗಲು ಕಾರಣರಾಗಿದ್ದಾರೆ. ಮೋನರ್ ಬಗ್ಗೆ ತಿಳಿದಾಗ ನಾವೆಲ್ಲರೂ ಆಘಾತಗೊಂಡಿದ್ದೆವು ಮತ್ತು ಹತಾಶರಾಗಿದ್ದೆವು. ನಾವು ಹಿಂಸೆಯನ್ನು ಧ್ವೇಷಿಸುತ್ತೇವೆ ಮತ್ತು ನಮ್ಮದೇ ಸದಸ್ಯರಲ್ಲಿ ಒಬ್ಬರು ಹಲವರನ್ನು ಕೊಂದಿರುವುದು ನಮಗೆ ಭಯಾನಕವೆನಿಸಿದೆ. (ಸಿರಿಯಾದಲ್ಲಿ ಆರಂಭಿಕ ತರಬೇತಿ ಪಡೆದ ಮೇಲೆ ಆತ ಕೆಲವು ಫ್ಲೋರಿಡಾ ಸ್ನೇಹಿತರನ್ನು ಅದೇ ಉದ್ದೇಶಕ್ಕೆ ನೇಮಿಸಿಕೊಳ್ಳಲುಬಯಸಿದ್ದ. ಆ ಯುವಕರು ಎಫ್‌ಬಿಐಗೆ ಈ ಬಗ್ಗೆ ಹೇಳಿದ್ದರು.) ಮೋನರ್ ದಾಳಿಯ ತಕ್ಷಣ ಅಮೆರಿಕದ ಅಧಿಕಾರಿಗಳು ಈ ಬಗ್ಗೆ ಏನೂ ಅರಿತಿಲ್ಲ ಎಂದೇ ಸುದ್ದಿಗಳು ಪ್ರಸಾರಗೊಂಡವು. ಈ ಹಿನ್ನೆಲೆಯಲ್ಲಿ ಮಾಹಿತಿ ಕೊಡುವವರು ಬೇಕಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದನ್ನೂ ನಾನು ಕೇಳಿಸಿಕೊಂಡೆ. ಹೀಗಾಗಿ ನಾನು ಎಫ್‌ಬಿಐಗೆ ಕರೆ ಮಾಡಿ ಆ ಯುವಕನ ಬಗ್ಗೆ ಸ್ವಲ್ಪ ಮಾಹಿತಿ ಕೊಡುವುದಾಗಿ ಹೇಳಿದೆ. ನಾವು ಹೆಚ್ಚು ಆಪ್ತರಾಗಿಲ್ಲದ ಕಾರಣ ಹೆಚ್ಚು ಮಾಹಿತಿ ನನ್ನಲ್ಲಿರಲಿಲ್ಲ. ಆದರೆ ನಾನು ಅಮೆರಿಕದ ಮುಸ್ಲಿಂ ಆಗಿದ್ದಕ್ಕಾಗಿ ನನ್ನ ಕರ್ತವ್ಯ ಪಾಲಿಸಲು ಬಯಸಿದ್ದೆ. ಅಂತಹ ಮತ್ತೊಂದು ಪ್ರಕರಣ ನಡೆಯುವುದು ನನಗೆ ಬೇಕಿರಲಿಲ್ಲ. ಇನ್ನೂ ಹೆಚ್ಚಿನ ಅಮಾಯಕ ಜನರು ಸಾಯುವುದು ನನಗೆ ಬೇಕಿರಲಿಲ್ಲ. ಇತರ ಸ್ಥಳೀಯ ಮಕ್ಕಳು ಯಾರಾದರೂ ಇಸ್ಲಾಂ ಹೆಸರಲ್ಲಿ ಹಿಂಸೆಗೆ ಇಳಿಯಲು ಸಾಧ್ಯವಿದೆಯೇ ಎಂದು ಅಧಿಕಾರಿಗಳು ಕೇಳಿದರಾದರೂ ನನಗೆ ಯಾವುದೇ ಹೆಸರು ನೆನಪಾಗಲಿಲ್ಲ.
ಎಫ್‌ಬಿಐ ಜೊತೆಗೆ ನನ್ನ ಮಾತುಕತೆ ಮುಗಿದ ಮೇಲೆ ಇಸ್ಲಾಮಿಕ್ ಸಮುದಾಯದ ಜೊತೆಗೆ ನಾನು ಮಾತನಾಡಿದೆ. ಓಮರ್ ಬಳಿಯೂ ನಾನು ಮೋನರ್ ದಾಳಿ ಬಗ್ಗೆ ಮಾತನಾಡಿದೆ. ಆತ ಹೇಗೆ ಕ್ರಾಂತಿಕಾರಿಯಾಗಿ ಬದಲಾದ ಎಂದು ನನಗೆ ಆಶ್ಚರ್ಯವಾಗಿತ್ತು. ನಾನು ಮತ್ತು ಓಮರ್ ಇಬ್ಬರೂ ಮೋನರ್ ಹೋಗುವ ಮಸೀದಿಗೇ ಹೋಗುತ್ತಿದ್ದೆವು ಮತ್ತು ಇಮಾಮ್ ಎಂದೂ ಧ್ವೇಷ ಅಥವಾ ಉಗ್ರವಾದವನ್ನು ಕಲಿಸಲಿಲ್ಲ. ಆಗಲೇ ನನಗೆ ಓಮರ್ ತಾನು ಕೂಡ ಅಲ್ ಅವ್ಲಂಕಿಯ ವೀಡಿಯೊಗಳನ್ನು ನೋಡುತ್ತಿರುವುದಾಗಿ ಹೇಳಿದ್ದ. ಅದು ನನ್ನಲ್ಲಿ ಸಣ್ಣ ನಡುಕ ತಂದಿತ್ತು. ಆ ವೀಡಿಯೊಗಳು ಬಹಳ ಪ್ರಭಾವಶಾಲಿ ಎಂದೂ ಆತ ಹೇಳಿದ್ದ. ಓಮರ್ ಜೊತೆಗೆ ಮಾತನಾಡಿದ ಮೇಲೆ ನಾನು ಎಫ್‌ಬಿಐಯನ್ನು ಮತ್ತೆ ಸಂಪರ್ಕಿಸಿದೆ. ಓಮರ್ ಕೂಡ ಅಲ್ ಅವ್ಲಂಕಿಯ ಟೇಪ್‌ಗಳನ್ನು ನೋಡುತ್ತಿದ್ದಾನೆ ಎಂದು ತಿಳಿಸಲು ಬಯಸಿದ್ದೆ. ಆದರೆ ಆತ ಹಿಂಸೆಗೆ ಇಳಿದಿರಲಿಲ್ಲ ಮತ್ತು ಹಿಂಸೆಯ ಯೋಜನೆಯನ್ನೂ ಹಾಕಿರಲಿಲ್ಲ ಎನ್ನುವುದು ನನಗೆ ಗೊತ್ತು. ಆತ ಹಾಗೆ ಮಾಡಲಾರ ಎಂದುಕೊಂಡಿದ್ದೆ. ಏಕೆಂದರೆ ಆತ ಉಗ್ರವಾದಿಯಾಗುವ ವ್ಯಕ್ತಿತ್ವವನ್ನೇ ಹೊಂದಿರಲಿಲ್ಲ. ಆತನಿಗೆ ಈಗಾಗಲೇ ಮತ್ತೊಬ್ಬ ಪತ್ನಿ ಮತ್ತು ಮಗನಿದ್ದ. ಹಾಗಿದ್ದರೂ ಏಜೆಂಟರು ತಮ್ಮ ಕಣ್ಣುಗಳನ್ನು ಅವರ ಮೇಲಿಡಲೇಬೇಕು. ಆ ನಂತರ ಎಂದೂ ಅವರಿಂದ ನನಗೆ ಓಮರ್ ಹೆಸರು ಕೇಳಿಬರಲಿಲ್ಲ. ಆದರೆ ಅವರು ತಮ್ಮ ಕೆಲಸ ಮಾಡಿದ್ದರು. ಆತನನ್ನು ಆಳವಾಗಿ ಅಧ್ಯಯನ ಮಾಡಿ ಏನೂ ಅಪಾಯವಿಲ್ಲ ಎಂದು ಅರಿತಾಗ ಕಡತ ಮುಚ್ಚಿದ್ದರು.
ಓಮರ್ ಮತ್ತು ನಾನು ಮುಂದಿನ ಕೆಲ ವರ್ಷಗಳಲ್ಲಿ ಆಗಾಗ್ಗೆ ಸಂಪರ್ಕದಲ್ಲಿದ್ದೆವು. ಕೊನೆಯದಾಗಿ ಆತನ ತಂದೆಯ ಮನೆಯಲ್ಲಿ ಆಯೋಜಿಸಿದ್ದ ರಾತ್ರಿಯೂಟದಲ್ಲಿ ಭೇಟಿಯಾಗಿದ್ದೆ. ಅಧ್ಯಕ್ಷೀಯ ಚುನಾವಣೆ ಬಗ್ಗೆ ಮಾತನಾಡಿದೆವು ಮತ್ತು ಅಭ್ಯರ್ಥಿಗಳ ಬಗ್ಗೆ ನಮ್ಮ ನಿಲುವುಗಳನ್ನು ಚರ್ಚಿಸಿದೆವು. ಆತ ಹಿಲರಿ ಕ್ಲಿಂಟನ್‌ನನ್ನು ಆರಿಸಿದರೆ ನಾನು ಬರ್ನಿ ಸ್ಯಾಂಡರ್ಸ್‌ನ್ನು ಇಷ್ಟಪಟ್ಟಿದ್ದೆ. ನಂತರ ಈ ಚರ್ಚೆ ಹಲವು ತಿಂಗಳ ಕಾಲ ಫೋನ್ ಮತ್ತು ಸಂದೇಶಗಳಲ್ಲೂ ಮುಂದುವರಿಯಿತು. ನನ್ನ ಕೊನೆಯ ಸಂಭಾಷಣೆ ಓಮರ್ ಜೊತೆಗೆ ಮೇ ಮಧ್ಯ ಭಾಗದಲ್ಲಿ ಫೋನ್ ಮೂಲಕ ಆಗಿತ್ತು. ತನ್ನ ಮಗನ ಜೊತೆಗೆ ಕಡಲತೀರದಲ್ಲಿದ್ದಾಗ ಕರೆ ಮಾಡಿದ್ದ. ತಂದೆಯ ಜೊತೆಗೆ ಓರ್ಲಾಂಡೋಗೆ ಹಿಂದಿನ ವಾರ ಹೋಗಿದ್ದಾಗಿ ಹೇಳಿದ್ದ. ಸ್ಥಳೀಯ ಮಸೀದಿ ಬಗ್ಗೆ ಹೊಗಳಿದ್ದ. ಅದರ ನಂತರ ಏನಾಯಿತು ಎನ್ನುವುದು ನನಗೆ ತಿಳಿಯಲಿಲ್ಲ. ನಾವಿನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ. ನಾವು ಆತನ ಕೃತ್ಯವನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಸಂತ್ರಸ್ತರು ಮತ್ತು ಅವರ ಕುಟುಂಬದ ಬಗ್ಗೆ ಅತೀವ ದುಃಖವಿದೆ. ಯಾರನ್ನಾದರೂ ನೀವು ಒಪ್ಪಿಕೊಳ್ಳುವುದಿಲ್ಲ ಎಂದಾದಲ್ಲಿ ನಿಮಗೆ ಅವರನ್ನು ಕೊಲ್ಲುವ ಹಕ್ಕು ಇರುವುದಿಲ್ಲ. ದೇವರ ಎಲ್ಲಾ ಸೃಷ್ಟಿಯ ಬಗ್ಗೆಯೂ ನಾವು ದಯಾಳುವಾಗಿರಬೇಕು. ಇಸ್ಲಾಂ ಕೊಲೆಯ ಬಗ್ಗೆ ಕಠಿಣ ನಿಲುವು ಹೊಂದಿದೆ: ಶಾಂತಿಯ ಪರಿಸ್ಥಿತಿ ಹೊರಗಿರಲಿ, ಯುದ್ಧದಲ್ಲೂ ಮಹಿಳೆ, ಮಕ್ಕಳು, ಹಿರಿಯ ವಯಸ್ಕರು, ರೋಗಿಗಳು, ಧರ್ಮಗುರುಗಳು ಮತ್ತು ಸಸ್ಯಗಳಿಗೂ ನೋವು ಮಾಡುವಂತಿಲ್ಲ. ನೀವು ಶವಗಳನ್ನು ನಾಶ ಮಾಡಲು ಸಾಧ್ಯವಿಲ್ಲ. ಕಟ್ಟಡಗಳನ್ನು ಮುಖ್ಯವಾಗಿ ಚರ್ಚ್ ಮತ್ತು ದೇಗುಲಗಳನ್ನು ನಾಶ ಮಾಡಲು ಆಗುವುದಿಲ್ಲ. ಯಾರನ್ನೂ ಇಸ್ಲಾಂಗೆ ಪರಿವರ್ತನೆ ಹೊಂದುವಂತೆ ಒತ್ತಡ ಹೇರಲಾಗದು. ಯಾರಾದರೂ ಒಬ್ಬ ವ್ಯಕ್ತಿಯನ್ನು ಕೊಂದರೆ, ಅವರು ಇಡೀ ಮಾನವತೆಯನ್ನು ಕೊಂದ ಹಾಗೆ ಎನ್ನುತ್ತದೆ ಕುರಾನ್.
ಅಡಗಿಸುವುದು ಏನೂ ಇಲ್ಲ
ನನ್ನ ಸಮುದಾಯ ಮತ್ತು ಒಟ್ಟು ಮುಸ್ಲಿಮರ ಬಳಿ ಅಡಗಿಸಿಡುವುದು ಏನೂ ಇಲ್ಲ ಎಂದೇ ನಾನು ಓಮರ್ ಬಗ್ಗೆ ಎಫ್‌ಬಿಐಗೆ ಹೇಳಿದೆ. ನಾನು ಅಮೆರಿಕವನ್ನು ಪ್ರೀತಿಸುತ್ತೇನೆ. ಬಹುತೇಕ ಮುಸ್ಲಿಮರೂ ಹಾಗೇ ಇದ್ದಾರೆ. ನಾನು ಸರ್ಕಾರದ ಎಲ್ಲಾ ನೀತಿಗಳನ್ನು ಒಪ್ಪಿಕೊಳ್ಳುವುದಿಲ್ಲ. (ರಾಜಕೀಯದಲ್ಲಿ ಬಹಳ ಹಣ ಓಡಾಡುತ್ತದೆ ಎಂದುಕೊಂಡಿದ್ದೇನೆ). ಆದರೆ ಅಮೆರಿಕನ್ ಆಗಿರುವುದಕ್ಕೆ ನನಗೆ ಹೆಮ್ಮೆ ಇದೆ. ನಾನು ಮತ ಹಾಕುತ್ತೇನೆ. ಸ್ವಯಂಸೇವೆ ಮತ್ತು ಮಕ್ಕಳಿಗೆ ಉತ್ತಮ ಬುದ್ಧಿ ಹೇಳಿಕೊಡುವುದು ಮಾಡುತ್ತೇನೆ. ನಮ್ಮ ಕುಟುಂಬಗಳು ಇಲ್ಲಿ ಅವಕಾಶಗಳಿವೆ ಎಂದು ಬಂದಿದ್ದಾರೆ. ನಿಮಗೆ ಏನು ತಿಳಿದಿದೆ ಎಂದು ಇಲ್ಲಿ ಉದ್ಯೋಗ ಸಿಗುತ್ತದೆಯೇ ವಿನಾ ನೀವ್ಯಾರನ್ನು ತಿಳಿದಿದ್ದೀರಿ ಎನ್ನುವ ಕಾರಣಕ್ಕಲ್ಲ. ಮಕ್ಕಳನ್ನು ಬೆಳೆಸಲು ಇದು ಉತ್ತಮ ದೇಶ. ದಿನಕ್ಕೆ 18 ಗಂಟೆಗಳಿಗೂ ಹೆಚ್ಚುಕಾಲ ವಿದ್ಯುತ್ ಇಲ್ಲದ ಜಾಗ, ಭ್ರಷ್ಟ ರಾಜಕಾರಣಿಗಳು ಅಥವಾ ಸರ್ವಾದಿಕಾರಿಯೇ ನಾಯಕನಾಗಿರುವ ಜಾಗಕ್ಕಿಂತ ಉತ್ತಮ ನೆಲೆ ಇದು.
ಆದರೆ ಅಮೆರಿಕದಲ್ಲಿ ಇಸ್ಲಾಂ ಬಗ್ಗೆ ಬಹಳಷ್ಟು ಸಂಶಯವಿದೆ. ಸ್ಥಳೀಯ ದಿನಪತ್ರಿಕೆಯೊಂದು ಸಹಿ ಇಲ್ಲದ ಸಂಪಾದಕೀಯದಲ್ಲಿ ನಮ್ಮ ಶಾಂತಿಯುತ ಮುಸ್ಲಿಂ ನೆರೆಯವರನ್ನು ಅವರಷ್ಟಕ್ಕೇ ಬಿಡಿಎಂದು ಪ್ರಕಟಿಸಿದೆ ಮತ್ತು ಟೀಕೆಗಳಲ್ಲು ಧ್ವೇಷಪೂರಿತ ಸುಳ್ಳುಗಳೇ ಇದ್ದವು. ಬೋಸ್ಟನ್ ಬಾಂಬರುಗಳು ಜಾಗಕ್ಕೆ ಭೇಟಿ ನೀಡಿದ್ದರು, ಸೆಪ್ಟೆಂಬರ್ 11 ಬಾಂಬರುಗಳು ಇಲ್ಲಿಂದ ಬಂದರು ಮತ್ತು ಹಿಂಸೆಯ ಚಿಂತನೆಗಳ ನೆಲೆ ಇದು ಎಂದೆಲ್ಲ ಬರೆಯಲಾಗಿದೆ. ಅವುಗಳು ಯಾವುವೂ ನಿಜವಲ್ಲ. ಡೊನಾಲ್ಡ್ ಟ್ರಂಪ್ ಈ ಚಹರೆಯನ್ನು ಸೃಷ್ಟಿಸಿಲ್ಲ. ಆದರೆ ಆತ ಅವುಗಳ ಜೊತೆಗೆ ಆಟವಾಡುತ್ತಾನೆ ಮತ್ತು ಅದಕ್ಕೆ ಪ್ರಚೋದಿಸುತ್ತಾನೆ.
ಸಂಶಯಾಸ್ಪದ ವ್ಯಕ್ತಿಯ ಬಗ್ಗೆ ಪೊಲೀಸರಿಗೆ ತಿಳಿಸಿದ ಮೊದಲನೇ ಮುಸ್ಲಿಂ ನಾನಲ್ಲ. ಮಾಧ್ಯಮಗಳಿಗೆ ತಮ್ಮ ಹೆಸರು ಘೋಷಿಸಲು ಬಹಳಷ್ಟು ಮಂದಿ ಇಷ್ಟಪಡುವುದಿಲ್ಲ. ನನ್ನ ಪಾಲಿಗೆ ನಾನು ವೈಯಕ್ತಿಕ ಪ್ರಶಂಸೆ ಆಶಿಸುವುದಿಲ್ಲ. ನಾನು ನನ್ನ ನಂಬಿಕೆಯ ಬಗ್ಗೆ ನಕಾರಾತ್ಮಕ ಭಾಷೆ ಮತ್ತು ವಿಷಯ ಗೊತ್ತಿಲ್ಲದ ಟೀಕೆಗಳನ್ನು ಕೇಳಲು ಬಯಸುವುದಿಲ್ಲ. ಟ್ರಂಪ್ ನಮ್ಮ ಸಮುದಾಯದ ಬಗ್ಗೆ ಹೇಳುವುದೆಂದರೆ ನಮ್ಮ ಬಳಿ ಅಮೆರಿಕಕ್ಕೆ ನೆರವಾಗಲು ಸಾಮರ್ಥ್ಯವಿದೆಯಾದರೂ ನಾವು ಹಾಗೆ ಮಾಡಲು ನಿರಾಕರಿಸಿದ್ದೇವೆ. ಇಂತಹ ಹೇಳಿಕೆ ದೊಡ್ಡ ದುರಂತ, ಕೆಟ್ಟದು ಮತ್ತು ತಪ್ಪು.
ಕೃಪೆ: ವಾಷಿಂಗ್ಟನ್ ಪೋಸ್ಟ್
ಮೊಹಮ್ಮದ್ ಎ ಮಲಿಕ್ ಫ್ಲೋರಿಡಾದ ಪೋರ್ಟ್ ಸೇಂಟ್ ಲೂಸೀಯಲ್ಲಿ ಉದ್ಯಮಿ.
ಕೃಪೆ: http://gulfnews.com/







