ಮುಸ್ಲಿಂ ನಿಷೇಧದ ಬಗ್ಗೆ ಟ್ರಂಪ್ ಮತ್ತೆ ತಿಪ್ಪರಲಾಗ

ಬಲ್ಮೆಡಿ (ಅಮೆರಿಕ): ವಿದೇಶಿ ಮುಸ್ಲಿಮರನ್ನು ನಿಷೇಧಿಸುವ ಸಂಬಂಧ ಕೋಮು ದ್ವೇಷದ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಅಮೆರಿಕ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಇದೀಗ ಅದನ್ನು ಸರಿಪಡಿಸಿಕೊಳ್ಳಲು ತಿಪ್ಪರಲಾಗ ಹಾಕಿದ್ದಾರೆ. "ಮುಸ್ಲಿಮರನ್ನು ನಿಷೇಧಿಸಬೇಕು ಎಂಬ ತಮ್ಮ ಹೇಳಿಕೆಯನ್ನು ಪರಿಷ್ಕರಿಸಿ, ಅತ್ಯಧಿಕ ಭಯೋತ್ಪಾದಕ ಚಟುವಟಿಕೆ ಇರುವ ದೇಶಗಳ ಮುಸ್ಲಿಮರನ್ನು ನಿಷೇಧಿಸಬೇಕು ಎಂದು ಟ್ರಂಪ್ ಹೇಳಿದ್ದಾರೆ" ಎಂಬುದಾಗಿ ಅವರ ವಕ್ತಾರ ಹೋಪ್ ಹಿಕ್ಸ್ ಶನಿವಾರ ಪ್ರಕಟಿಸಿದ್ದಾರೆ.
"ಈ ಬಗ್ಗೆ ಟ್ರಂಪ್ ಹೊಸ ನಿಲುವು ತಳೆದಿದ್ದಾರೆ" ಎಂದು ಹಿಕ್ಸ್ ಇ-ಮೇಲ್ ಸಂದೇಶದಲ್ಲಿ ಹೇಳಿದ್ದಾರೆ. ಇದು ಕಳೆದ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಟ್ರಂಪ್ ತೆಗೆದುಕೊಂಡ ನಿಲುವಿಗಿಂತ ಭಿನ್ನ. ಎರಡು ವಾರಗಳ ಹಿಂದೆ ಟ್ರಂಪ್ ತಮ್ಮ ಭಾಷಣದಲ್ಲಿ, ಮುಸ್ಲಿಂ ಹೆಸರನ್ನು ಉಲ್ಲೇಖಿಸದೇ, "ಕೆಲ ಭಯಾನಕ ವ್ಯಕ್ತಿಗಳಿಂದಾಗಿ ವಿಶ್ವದಲ್ಲಿ ಭಯೋತ್ಪಾದನೆ ಹಬ್ಬಿದೆ. ಅವು ಯಾವ ಸ್ಥಳಗಳು ಎನ್ನುವುದು ನಿಮಗೇ ಗೊತ್ತು. ಅಂಥ ದೇಶಗಳ ಜನರಿಗೆ ತಾತ್ಕಾಲಿಕ ನಿಷೇಧ ಹೇರಬೇಕು" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಮೂಲಕ ಟ್ರಂಪ್ ಇದನ್ನು ಕೆಲವರಿಗೆ ಸೀಮಿತಗೊಳಿಸದೇ, ನಿಷೇಧವನ್ನು ಮತ್ತಷ್ಟು ವಿಸ್ತರಿಸುವ ಇರಾದೆ ವ್ಯಕ್ತಪಡಿಸಿದಂತಾಗಿದೆ.
ಸ್ಕಾಟ್ಲೆಂಡ್ ಪೂರ್ವ ಕರಾವಳಿಯಲ್ಲಿ ಗಾಲ್ಫ್‌ಕೋರ್ಸ್ ವೇಲೆ ವರದಿಗಾರರೊಬ್ಬರು, "ಅಮೆರಿಕಕ್ಕೆ ಆಗಮಿಸುವ ಸ್ಕಾಟ್ಲೆಂಡ್ ಮುಸ್ಲಿಮರನ್ನು ನೀವು ಒಪ್ಪಿಕೊಳ್ಳುತ್ತೀರಾ" ಎಂದು ಪ್ರಶ್ನಿಸಿದಾಗ ಟ್ರಂಪ್, "ಅವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ" ಎಂದು ಹೇಳಿದರು.
ಆ ಬಳಿಕ ಇ-ಮೇಲ್ ಸ್ಪಷ್ಟನೆಯಲ್ಲಿ ಹಿಕ್ಸ್, "ಟ್ರಂಪ್ ಅವರ ಹೇಳಿಕೆ ಭಯೋತ್ಪಾದಕ ರಾಷ್ಟ್ರಗಳಿಗೆ ಮಾತ್ರ ಅನ್ವಯಿಸುತ್ತದೆ" ಎಂದು ಹೇಳಿದ್ದರು. ಆ ದೇಶಗಳಿಂದ ಬರುವ ಮುಸ್ಲಿಮೇತರರಿಗೂ ಹಾಗೂ ಶಾಂತಿಯುತ ದೇಶಗಳ ಮುಸ್ಲಿಮರಿಗೂ ಇದು ಅನ್ವಯಿಸುತ್ತದೆಯೇ ಎಂಬ ಬಗ್ಗೆ ಹಿಕ್ಸ್ ಯಾವ ಸ್ಪಷ್ಟನೆಯನ್ನೂ ನೀಡಿಲ್ಲ.







