ಸ್ವಾತಂತ್ರ್ಯದ 69 ವರ್ಷಗಳ ಬಳಿಕ ಉತ್ತರಾಖಂಡದ ಹಳ್ಳಿಗೆ ಬಂತು ಬಸ್ಸು !

ಡೆಹ್ರಾಡೂನ್,ಜೂ.26: ದೇಶಕ್ಕೆ ಸ್ವಾತಂತ್ರ್ಯ ಬಂದು 69 ವರ್ಷಗಳ ಬಳಿಕ ಉತ್ತರಾಖಂಡ ಚಮೋಲಿ ಜಿಲ್ಲೆಯ ಸಿಲ್ಪತ ಎಂಬ ತೀರಾ ಗುಡ್ಡಗಾಡು ಹಳ್ಳಿಯ ಜನತೆ ಶನಿವಾರ ಗ್ರಾಮಕ್ಕೆ ಮೊಟ್ಟಮೊದಲ ಬಾರಿಗೆ ಬಂದ ಬಸ್ಸನ್ನು ಸಂಭ್ರಮದಿಂದ ಸ್ವಾಗತಿಸಿದರು. ಆದಿ ಬದ್ರಿ ತಾಲೂಕು ಕೇಂದ್ರದಿಂದ 21 ಕಿಲೋಮೀಟರ್ ದೂರದ ಈ ಹಳ್ಳಿಗೆ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆ ಅನ್ವಯ ರಸ್ತೆ ನಿರ್ಮಿಸಲಾಗಿತ್ತು.
ಬಹಳಷ್ಟು ಮಂದಿ ಗ್ರಾಮಸ್ಥರಿಗೆ ಇದು ಜೀವಮಾನದ ಕನಸು ನನಸಾದ ಕ್ಷಣ. "ಇಲ್ಲಿಯವರೆಗೂ ಹತ್ತಿರದ ಪಟ್ಟಣ ಹಾಗೂ ಮಾರುಕಟ್ಟೆಗಳಿಗೆ ನಡೆಯುತ್ತಲೇ ಸಾಗಿ ನಮ್ಮ ಜೀವನ ಸಾಗಿಸಿದ್ದೇವೆ" ಎಂದು ಜನ ಹೇಳುತ್ತಾರೆ. ಸ್ವಾತಂತ್ರ್ಯ ಬಂದ ದಿನದಿಂದಲೇ ನಮ್ಮ ಹಳ್ಳಿಗೆ ರಸ್ತೆಯ ಕನಸು ಕಾಣುತ್ತಿದ್ದೆವು. ನಮ್ಮ ಜೀವಿತಾವಧಿಯಲ್ಲೇ ಇದು ಆಗಿದೆ ಎನ್ನುವುದು ನಮಗೆ ಸಂತಸ. ಮುಂದಿನ ಪೀಳಿಗೆಯಾದರೂ ನಮ್ಮ ಸಂಕಷ್ಟಗಳನ್ನು ಎದುರಿಸುವುದಿಲ್ಲ ಎಂದು ಕಲಾಂ ಸಿಂಗ್ ಬಿಷ್ಟ್ ಹೇಳುತ್ತಾರೆ.
ಉತ್ತರಾಖಂಡ ಸಾರಿಗೆ ಸಂಸ್ಥೆ ಆರಂಭಿಸಿದ ಬಸ್ಸನ್ನು ಸ್ವಾಗತಿಸಲು ಹಳ್ಳಿಗರು ಸಮಾರಂಭ ಹಮ್ಮಿಕೊಂಡಿದ್ದರು. ಸಂಭ್ರಮಾಚರಣೆಯಲ್ಲಿ ಹಳ್ಳಿಯ ಮಹಿಳೆಯರು ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಿದರು. ಇದು ಕಾರಣವಾದದ್ದು ಕರಣ್‌ಪ್ರಯಾಗ್ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಅನಸೂಯಾ ಪ್ರಸಾದ್ ಅವರ ಪ್ರಯತ್ನದಿಂದ ಎಂದು ಗ್ರಾಮಸ್ಥರು ಹೇಳುತ್ತಾರೆ.





