ಕುವೈಟ್ ನಲ್ಲಿ ಉದ್ಯೋಗ ಒಪ್ಪಂದ ನವೀಕರಣಕ್ಕೆ ತಡೆ

ಕುವೈಟ್ ಸಿಟಿ, ಜೂನ್ 26: ಸ್ವದೇಶೀಕರಣ ತ್ವರಿತಗೊಳಿಸುವುದಕ್ಕಾಗಿ ಸಾರ್ವಜನಿಕ ವಲಯದ ಉದ್ಯೋಗಳಿಗೆ ವಿದೇಶಿಗಳನ್ನು ನೇಮಿಸದಂತೆ ಹೇರಿದ್ದ ನಿಷೇಧ ಇದೀಗ ಜಾರಿಗೆ ತರಲಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ವಲಯದಲ್ಲಿ ಕೆಲಸಮಾಡುತ್ತಿರುವ ವಿದೇಶಿ ಉದ್ಯೋಗಿಗಳೊಂದಿಗಿನ ಉದ್ಯೋಗ ಒಪ್ಪಂದಗಳನ್ನು ಮರು ನವೀಕರಿಸಬೇಕಿಲ್ಲ ಎಂದು ಸರಕಾರ ನಿರ್ಧಾರಕ್ಕೆ ಬಂದಿದೆ. ಉಪಪ್ರಧಾನಿ ಹಾಗೂ ಹಣಕಾಸು ಸಚಿವ ಅನಸ್ ಅಲ್ಸಾಲಿಹ್ ಅಧ್ಯಕ್ಷತೆಯಲ್ಲಿ ಸೇರಿದ್ದ ಸಿವಿಲ್ ಸರ್ವೀಸ್ ಕಮಿಶನ್ ಉನ್ನತ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತಳೆಯಲಾಗಿದೆ.
ನಿಗದಿತ ವಯಸ್ಸಿನ ಮಿತಿಗೆ ತಲುಪಿರುವ ವಿದೇಶಿಗಳಿಗೆ ಸಾರ್ವಜನಿಕ ವಲಯದ ಉದ್ಯೋಗಗಳ ಒಪ್ಪಂದವನ್ನು ನವೀಕರಿಸಬೇಕಿಲ್ಲ. ಸರಕಾರಿ ಸಂಸ್ಥೆ ಹಾಗೂ ಇಲಾಖೆಗಳಲ್ಲಿ ವಿದೇಶಿಗಳನ್ನು ಹೊಸದಾಗಿ ನೇಮಿಸಬೇಕಾಗಿಲ್ಲ ಎಂದು ಸಿವಿಲ್ ಸರ್ವೀಸ್ ಕಮಿಶನ್ ಆದೇಶಿಸಿದೆ. ಹಣಕಾಸು ಸಚಿವ ಅಲ್ಸಾಲಿಹ್ ಪಾರ್ಲಿಮೆಂಟ್‌ನಲ್ಲಿ ಇದನ್ನು ಅನುಮೋದಿಸಿದ್ದಾರೆ.ಸಾರ್ವಜನಿಕ ವಲಯದಲ್ಲಿ ನೇಮಕಾತಿ ನಿಷೇಧ ಎಲ್ಲ ದೇಶೀಯರಿಗೂ ಅನ್ವಯವಾಗಲಿದೆ. ದೇಶದಲ್ಲಿ ಸ್ವದೇಶಿ-ವಿದೇಶಿ ಅನುಪಾತದ ಅಸಮತೋಲನವನ್ನು ಸರಿಪಡಿಸಲು ಅಗತ್ಯ ಸಲಹೆಗಳನ್ನು ನೀಡಲು ಸಚಿವ ಸಂಪುಟ ನಿಯೋಜಿಸಿದ್ದ ವಿಶೇಷ ಸಮಿತಿಯ ಸಲಹೆಯಂತೆ ವಿದೇಶಿ ಉದ್ಯೋಗಿಗಳ ನೇಮಕಾತಿಗೆ ನಿಷೇಧ ಹೇರಲಾಗುತ್ತಿದೆ. ಸಾರ್ವಜನಿಕ ವಲಯದಲ್ಲಿ ವಿದೇಶಿಗಳನ್ನು ಕಡಿತಗೊಳಿಸಿ ಸ್ವದೇಶಿಗಳಿಗೆ ಗರಿಷ್ಠ ಉದ್ಯೋಗಾವಕಾಶವನ್ನು ಒದಗಿಸಲು ಸಮಿತಿ ಇಚ್ಛಿಸಿದೆ.







