ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ "ಸರ್ವ ಸಮಾಜದ ಇಚ್ಛೆ" : ಯೋಗಿ ಅದಿತ್ಯನಾಥ್

ಲಕ್ನೊ,ಜೂನ್, 26: ಬಿಜೆಪಿಯ ಉರಿಚೆಂಡು ಸಂಸದ ಯೋಗಿ ಆದಿತ್ಯನಾಥ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸರ್ವ ಸಮಾಜದ ಹಾರ್ದಿಕ ಇಚ್ಛೆ ಅಗಿದೆ ಎಂದು ಪುನರುಚ್ಚರಿಸಿದ್ದಾರೆ. ಉತ್ತರಪ್ರದೇಶದ ಅಭಿವೃದ್ಧಿ ಎಂಬ ವಿಷಯದಲ್ಲಿ ಬೇರೆ ಬೇರೆ ನಾಯಕರೊಂದಿಗೆ ನಡೆದಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು "ಎಲ್ಲ ಸಮಾಜಗಳು ಅಯೋಧ್ಯೆಯಲ್ಲಿ ಭವ್ಯರಾಮಮಂದಿರ ನಿರ್ಮಾಣಗೊಳ್ಳಬೇಕೆಂದು ಬಯಸುತ್ತಿವೆ ಮತ್ತು ರಾಮಮಂದಿರ ಕಟ್ಟಿಯೇ ಸಿದ್ಧ. ಅದಕ್ಕೆ ಸಮಯದ ಗಡು ನಿಗದಿಪಡಿಸುವುದು ಉಚಿತವಲ್ಲ ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ದೇಶ ಸಂವಿಧಾನ ಪ್ರಕಾರ ಮುನ್ನಡೆಯುತ್ತದೆ. ಶರಿಯ ಪ್ರಕಾರ ನಡೆಯುವುದಲ್ಲ ಎಂದು ಹೇಳಿದ ಆದಿತ್ಯನಾಥ್, ರಾಮಮಂದಿರ ವಿವಾದ ಅತಿಶೀಘ್ರ ಬಗೆಹರಿಯಬೇಕಾಗಿದೆ. ಅದು ಸಮಾಜದ ಶಾಂತಿ ಸೌಹಾರ್ದಕ್ಕೆ ಅತಿಅಗತ್ಯವಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ರಾಮಮಂದಿರ ವಿಷಯವನ್ನು ವೋಟ್ ಬ್ಯಾಂಕ್‌ಗೆ ಜೋಡಿಸಿ ನೋಡುತ್ತಿದೆಯಲ್ಲ ಎಂಬ ಪ್ರಶ್ನೆಗೆ "ನಾವು ಈ ವಿಷಯವನ್ನು ವೋಟ್‌ಬ್ಯಾಂಕ್‌ಗೆ ಜೋಡಿಸಿಲ್ಲ ಎಂದು ಉತ್ತರಿಸಿದ್ದಾರೆ. ಒಂದು ವೇಳೆ ಈವಿಷಯ ಮಾತುಕತೆಗಳ ಮೂಲಕ ಬಗೆಹರಿಯುವುದಿದ್ದರೆ" ಹಾಗೆಯೇ ಆಗಲಿ ಎಂದು ಗೊರಕ್‌ಪುರದಿಂದ ಐದು ಬಾರಿ ಸಂಸದರಾಗಿ ಆಯ್ಕೆ ಆಗಿರುವ ಆದಿತ್ಯನಾಥ್ ಪ್ರತಿಕ್ರಿಯಿಸಿದ್ದಾರೆ.







