"ಪೊಲೀಸರಿಗಲ್ಲ, ಪ್ರಧಾನಿ ಮೋದಿಗೇ ಶರಣಾಗುತ್ತಾರೆ ದಿಲ್ಲಿ ಡಿಸಿಎಂ"
ಸಿಸೋಡಿಯಾ ವಿರುದ್ಧ ದೂರು ದಾಖಲಾಗಿದ್ದಕ್ಕೆ ಕೇಜ್ರಿವಾಲ್ ವ್ಯಂಗ್ಯ

ಹೊಸದಿಲ್ಲಿ, ಜೂ.26 : ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಭಾನುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಮುಂದೆ ಶರಣಾಗುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ.
ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಆಪ್ ಶಾಸಕನನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಈ ಟ್ವೀಟ್ ಮಾಡಿದ್ದಾರೆ. ದೆಹಲಿ ಉಪಮುಖ್ಯಮಂತ್ರಿ ವಿರುದ್ಧ ಕೆಲ ತರಕಾರಿ ಮಾರಾಟಗಾರರು ದೂರು ನೀಡಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್, ಸಿಸೋಡಿಯಾ ಅವರು ರೇಸ್ ಕೋರ್ಸ್ ರಸ್ತೆಯ 7ನೇ ನಂಬರ್ ನಿವಾಸದಲ್ಲಿ ಪ್ರಧಾನಿ ಮುಂದೆಯೇ ಶರಣಾಗುತ್ತಾರೆ ಎಂದು ಅಣಕವಾಡಿದ್ದಾರೆ.
ಸಂಗಮ್ ವಿಹಾರ್ ಶಾಸಕ ದಿನೇಶ್ ಮೊಹಾನಿಯಾ ಅವರ ಬಂಧನ ಹಿನ್ನೆಲೆಯಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಮೋದಿ ತುರ್ತು ಪರಿಸ್ಥಿತಿ ಹೇರಿದ್ದಾಗಿ ಆಪಾದಿಸಿದ್ದಾರೆ. ಗಾಜಿಪುರ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳ ಸಂಘವು ಸಿಸೋಡಿಯಾ ವಿರುದ್ಧ ಮಾಡಿರುವ ಬೆದರಿಕೆ ಆರೋಪದ ಪ್ರತಿಯನ್ನು ಕೂಡಾ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಈ ಮಧ್ಯೆ ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ವಿಶೇಷ ಕಮಿಷನರ್ ಎಸ್ಆರ್ ಕೆ ಸಿಂಗ್ ಹೇಳಿಕೆ ನೀಡಿ, ಹಣ್ಣು ಮತ್ತು ತರಕಾರಿ ವ್ಯಾಪಾರಿಗಳ ಸಂಘ ಶನಿವಾರ ನೀಡಿದ ದೂರಿನ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮುನ್ನ ಗಾಜಿಪುರ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ತಮ್ಮ ಕ್ರಮದ ವಿರುದ್ಧ ಅನಧಿಕೃತವಾಗಿ ಕಾರ್ಯಾಚರಣೆ ಮಾಡುತ್ತಿರುವ ಕೆಲ ವ್ಯಾಪಾರಿಗಳು ದೂರು ನೀಡುವುದಾಗಿ ಬೆದರಿಕೆ ಹಾಕಿದ್ದನ್ನು ಉಲ್ಲೇಖಿಸಿ ಸಿಸೋಡಿಯಾ ಟ್ವೀಟ್ ಮಾಡಿದ್ದರು. ಈ ದೂರನ್ನು ತಿದ್ದಿ ಮೋದಿ ತಮ್ಮ ವಿರುದ್ಧ ಸುಲಿಗೆ, ಹಿಂಸೆ ಹಾಗೂ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಬಂಧಿಸಲು ಬೇಕಾದ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿಕೆ ನೀಡಿದ್ದರು.







