ಬೆಳಗ್ಗಿನ ಜಾವ ಎಟಿಎಂ ಸ್ಫೋಟಿಸಿ ಹಣ ಅಪಹರಿಸುವ ಯತ್ನ
ಪೊಲೀಸ್ ಗಸ್ತು ವಾಹನ ನೋಡಿ ಓಟಕ್ಕಿತ್ತ ಕಳ್ಳ

ಆಲುವ, ಜೂನ್ 26: ಹೆಲ್ಮೆಟ್ ಧರಿಸಿದ ವ್ಯಕ್ತಿ ಎಟಿಎಂನೊಳಗೆ ಹೊಕ್ಕು ಸ್ಫೋಟಕಗಳಿಂದ ಸ್ಫೋಟಿಸಿ ಕಳ್ಳತನಕ್ಕೆ ವಿಫಲ ಯತ್ನನಡೆಸಿದ ಘಟನೆ ಆಲುವದಿಂದ ವರದಿಯಾಗಿದೆ. ಆಲುವದ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯದ ಎಟಿಎಂ ಸ್ಫೋಟದಿಂದ ಹಾನಿಗೀಡಾಗಿದೆ.
ರವಿವಾರ ಬೆಳಗ್ಗಿನ ಜಾವ ಮೂರುವರೆಗಂಟೆ ಹೊತ್ತಿಗೆ ಆಗಂತುಕನು ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದಿದ್ದ. ಸ್ಫೋಟದ ಉದ್ದೇಶ ಕಳ್ಳತನವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆತ ಸ್ಫೋಟಕ ಇರಿಸಿ ಎಟಿಎಂ ಕೌಂಟರ್‌ನಲ್ಲಿ ಸ್ಫೋಟ ನಡೆಸಿದ ಬೆನ್ನಿಗೆ ಪೊಲೀಸರ ಗಸ್ತುವಾಹನ ಬಂದಿದ್ದರಿಂದ ತಪ್ಪಿಸಿಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದ. ಪೊಲೀಸರಿಗೆ ಅವನನ್ನು ಬೆನ್ನಟ್ಟಿ ಹಿಡಿಯಲು ಸಾಧ್ಯವಾಗಿರಲಿಲ್ಲ. ಆತ ಎಟಿಎಂ ಕೌಂಟರ್ ಒಳಗೆ ಬರುವುದು, ಸ್ಫೋಟಕ ಇರಿಸಿ ಬೆಂಕಿ ಹಚ್ಚುವುದು, ಹೊರಗೆ ಓಡಿ ಹೋಗುವುದು ಇವೆಲ್ಲವೂ ಸಿಸಿಟಿವಿಯಲ್ಲಿ ದಾಖಲಾಗಿವೆ.
ಇಂತಹ ಘಟನೆ ಈ ಹಿಂದೆ ಚೆರ್ತಲದಲ್ಲಿಯೂ ನಡೆದಿತ್ತು. ಪೊಲೀಸರು ಬೆರಳಚ್ಚು ಸಂಗ್ರಹಿಸುತ್ತಿದ್ದಾರೆ. ಪೊಲೀಸ್ ನಾಯಿಯ ಸಹಾಯವನ್ನು ಪಡೆಯಲಾಗಿದೆ. ಆರೋಪಿಯನ್ನು ಬಂಧಿಸುವ ಪ್ರಯತ್ನ ಆರಂಭಿಸಿದ್ದಾರೆ. ಎಟಿಎಂನ ಕ್ಯಾಶ್ ಕೌಂಟರ್ ಸ್ಫೋಟದಿಂದ ಹೊರಬಂದಿರಲಿಲ್ಲ, ಆದ್ದರಿಂದ ಆತನಿಗೆ ಹಣ ಅಪಹರಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.





