ಶಕ್ತಿಮಾನ್ ಶೀಘ್ರ ಕಿರುತೆರೆಗೆ ವಾಪಾಸ್
ಹೊಸದಿಲ್ಲಿ: ಶಕ್ತಿಮಾನ್ ನಿಮ್ಮ ಬಾಲ್ಯದ ದಿನಗಳ ಸಂಗಾತಿಯಲ್ಲವೆಂದಾದರೆ, ನೀವು ಸರಿಯಾಗಿ ಬೆಳೆದಿಲ್ಲ ಎಂದೇ ಅರ್ಥ. ಬಹುಶಃ ಶಕ್ತಿಮಾನ್ ನಿಮ್ಮ ಬಾಲ್ಯದ ಸಂಗಾತಿಯಾಗಿದ್ದಿರಬೇಕು. ಶಕ್ತಿಮಾನ್ ಮತ್ತೆ ಕಿರುತೆರೆಯಲ್ಲಿ ಬರುತ್ತಿದ್ದಾನೆ ಎಂಬ ಸುದ್ದಿಯೇ ಬಹುಶಃ ಬಹಳಷ್ಟು ಮಂದಿಗೆ ರೋಮಾಂಚಕ.
ಎಲ್ಲವೂ ಅಂದುಕೊಂಡಂತೆ ನಡೆದರೆ, ನಿಮ್ಮ ಟೆಲಿವಿಷನ್ ಪರದೆಗಳಲ್ಲಿ ಶಕ್ತಿಮಾನ್ ಶೀಘ್ರವೇ ಕಾಣಿಸಿಕೊಳ್ಳಲಿದ್ದಾನೆ. "ಬಹುಶಃ ಮುಂದಿನ ಕೆಲ ತಿಂಗಳುಗಳಲ್ಲಿ ಅಥವಾ ವರ್ಷದೊಳಗೆ, ಶಕ್ತಿಮಾನ್ ನನ್ನು ಮತ್ತೆ ಕರೆತರಲು ಸಾಧ್ಯವಾಗಬಹುದು. ಈಗಾಗಲೇ ಜಿಇಸಿಗಳು ಹಾಗೂ ಈ ಹಿಂದೆ ಪ್ರಸಾರ ಮಾಡಿದ ದೂರದರ್ಶನ ಜತೆ ಮಾತುಕತೆ ನಡೆಸಿದ್ದೇನೆ. ಕೇವಲ ಮಹಿಳೆಯರಿಗೆ ಸೀಮಿತವಾದ ಧಾರಾವಾಹಿಗಳು ಪ್ರಸಾರವಾಗುವುದಕ್ಕೆ ನನ್ನ ಆಕ್ಷೇಪವಿದೆ. ಕೇವಲ ಮಹಿಳೆಯರು ಮಾತ್ರ ಧಾರಾವಾಹಿ ನೋಡುತ್ತಾರೆ ಎಂದು ಅವರು ಹೇಳುತ್ತಾರೆ. ಪುರುಷರು ಕೂಡ ಊಟಕ್ಕೆ ಕುಳಿತಾಗ ಟಿವಿ ನೋಡುತ್ತಾರೆ. ನಾನು ಶಕ್ತಿಮಾನ್ ಮಾಡಿದಾಗ, ಅದು ಸವಾಲಿನ ಕೆಲಸವಾಗಿತ್ತು. ಅದು ಕೇವಲ ಮಕ್ಕಳಿಗಾಗಿ ಇರಲಿಲ್ಲ" ಎಂದು ಶಕ್ತಿಮಾನ್ ಹೊಸ ಅವತಾರವನ್ನು ಅಭಿನಯಿಸಿರುವ ಮುಕೇಶ್ ಖನ್ನಾ ಹೇಳುತ್ತಾರೆ.
ಈ ಬಾರಿಯ ಶಕ್ತಿಮಾನ್ ನಲ್ಲಿ ಏನು ವಿಶೇಷ ಎಂದು ಕೇಳಿದರೆ ಹಲವು ಅಚ್ಚರಿಪಡಬಹುದು. ಎಲ್ಲರೂ ಶಕ್ತಿಮಾನ್ ಬಾಲ್ಯದ ದಿನಗಳ ಸುತ್ತವೇ ಚರ್ಚಿಸುತ್ತಾರೆ. ನನ್ನ ಶಕ್ತಿಮಾನ್ ಹಾಗೆಯೇ ಇರುತ್ತಾನೆ. ಆದರೆ ಇನ್ನೂ ಸುಧಾರಿತ ಕಂಪ್ಯೂಟರ್ ಗ್ರಾಫಿಕ್ಸ್ ಹಾಗೂ ತಂತ್ರಗಳಿರುತ್ತವೆ. ಹಳೆಯ ಪಾತ್ರಗಳಾದ ಗೀತಾ ವಿಶ್ವಾಸ್, ಖಿಲ್ವಿಶ್ ಹಾಗೂ ಡಾ.ಜಾಕಲ್ ಕೂಡಾ ಇರುತ್ತವೆ. ಮಕ್ಕಳು ಕೂಡಾ ಧಾರಾವಾಹಿಯ ಭಾಗವಾಗಿರುತ್ತಾರೆ. ಮಕ್ಕಳಿಗೂ ಶಕ್ತಿಮಾನ್ ಆಗುವ ತರಬೇತಿಯನ್ನೂ ನೀಡುತ್ತೇವೆ ಎಂದು ವಿವರಿಸಿದರು.