" ಎನ್ ಎಸ್ ಜಿ ಬೇಡವೇ ಬೇಡ, ಅದರಿಂದ ಭಾರತಕ್ಕೆ ನಷ್ಟ "
ಕೇಂದ್ರದ ಪಾಕಿಸ್ತಾನ ನೀತಿ ಸಂಪೂರ್ಣ ವಿಫಲ : ಬಿಜೆಪಿ ನಾಯಕ ಯಶವಂತ್ ಸಿನ್ಹ

ಹೊಸದಿಲ್ಲಿ,ಜೂ.26: ಪರಮಾಣು ಪೂರೈಕೆದಾರರ ಗುಂಪಿನ(ಎನ್‌ಎಸ್‌ಜಿ) ಸದಸ್ಯತ್ವವನ್ನು ಪಡೆದುಕೊಳ್ಳಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿರುವುದಕ್ಕಾಗಿ ನರೇಂದ್ರ ಮೋದಿ ಸರಕಾರವನ್ನು ರವಿವಾರ ಇಲ್ಲಿ ಟೀಕಿಸಿದ ಮಾಜಿ ವಿದೇಶಾಂಗ ಸಚಿವ ಹಾಗೂ ಬಿಜೆಪಿ ನಾಯಕ ಯಶವಂತ ಸಿನ್ಹಾ ಅವರು, ಎನ್‌ಎಸ್‌ಜಿ ಸದಸ್ಯನಾಗಿ ಭಾರತವು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು, ಹೀಗಾಗಿ ಅದರ ಅಗತ್ಯವೇ ನಮ್ಮ ದೇಶಕ್ಕಿಲ್ಲ ಎಂದು ಹೇಳಿದರು. ಸರಕಾರದಲ್ಲಿರುವ ಜನರು ಅದನ್ನು ದಿನವೂ ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಬಿಜೆಪಿಯಲ್ಲಿ ಮೂಲೆಗುಂಪಾದ ಬಳಿಕ ಆಗಾಗ್ಗೆ ಮೋದಿ ಸರಕಾರವನ್ನು ಟೀಕಿಸುತ್ತಲೇ ಇರುವ ಸಿನ್ಹಾ, ಭಾರತವು ‘ಅರ್ಜಿದಾರ’ನಾಗಿ ಎನ್‌ಎಸ್‌ಜಿ ಮೆಟ್ಟಿಲು ಹತ್ತಬಾರದಿತ್ತು. ತನಗೇನು ಅಗತ್ಯವಿತ್ತೋ ಅದನ್ನು ಈಗಾಗಲೇ ಪಡೆದುಕೊಂಡಿರುವುದರಿಂದ ಅದು ಎನ್‌ಎಸ್‌ಜಿ ಸದಸ್ಯತ್ವವನ್ನು ಸ್ವೀಕರಿಸಕೂಡದು. ತಾನಿದನ್ನು ಖಂಡತುಂಡವಾಗಿ ಹೇಳುತ್ತಿದ್ದೇನೆ ಎಂದರು.
ಸೋಲ್‌ನಲ್ಲಿ ಇತ್ತೀಚಿಗೆ ನಡೆದ ಎನ್‌ಎಸ್‌ಜಿಯ ಪೂರ್ಣಾಧಿವೇಶನವು ಭಾರತದ ಸದಸ್ಯತ್ವದ ಆಸೆಗೆ ತಣ್ಣೀರೆರಚಿರುವ ಹಿನ್ನೆಲೆಯಲ್ಲಿ ಸಿನ್ಹಾರ ಈ ಹೇಳಿಕೆ ಹೊರಬಿದ್ದಿದೆ.







