ನಕಲಿ ಕುಲಪತಿಯ ಬಂಧನ : ಕಾಲೇಜುಗಳಿಗೆ ವಂಚಿಸುತ್ತಿದ್ದ ಜಾಲ ಬೇಧಿಸಿದ ಪೊಲೀಸರು

ಬೆಂಗಳೂರು, ಜೂ.26: ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳನ್ನು ತೆರೆಯಲು ಕೇಂದ್ರ ಸರಕಾರದಿಂದ ಅನುಮತಿ ಕೊಡಿಸುವ ನೆಪದಲ್ಲಿ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಿಂದ ಕೋಟ್ಯಂತರ ರೂ.ಹಣ ಪಡೆದು ವಂಚಿಸುತ್ತಿದ್ದ ಜಾಲವೊಂದನ್ನು ಬೇಧಿಸುವಲ್ಲಿ ಜೆಪಿ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣ ಸಂಬಂಧ ನಕಲಿ ಕುಲಪತಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪಶ್ಚಿಮ ಬಂಗಾಲ ಮೂಲದ ಸಂತೋಷ್ ಲೋಹಾರ್ (35) ಎಂಬ ನಕಲಿ ಕುಲಪತಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ 8.9 ಲಕ್ಷ ರೂ.ನಗದು ಸೇರಿದಂತೆ ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಯು ಅನಧಿಕೃತವಾಗಿ ಕೇಂದ್ರ ಸರಕಾರದ ಲಾಂಚನವುಳ್ಳ, ಕೆಂಪುದೀಪದ ಕಾರನ್ನು ಬಳಸುತ್ತಿದ್ದು, ನಿವೃತ್ತ ಐಎಎಸ್ ಅಧಿಕಾರಿಯೊಬ್ಬರನ್ನು ತನ್ನ ಅಧೀನದಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದ ಎಂಬ ಆಘಾತಕಾರಿ ಅಂಶವೂ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ, ಚೆನ್ನೈನ ಏರಿಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಟಿ.ಸಿ.ಅರಿವಳಗನ್‌ಗೆ ಆರೋಪಿ ಸಂತೋಷ್ ಲೋಹಾರ್, ಅಂತರ್ಜಾಲದ ಮೂಲಕ ಸಂದೇಶ ಕಳುಹಿಸಿ, ತಾನು ವಿವಿಯಿಂದ ಹೊಸದಾಗಿ ಬಯೋ ಮೆಡಿಕಲ್, ಪ್ಯಾರಾ ಮೆಡಿಕಲ್, ಬಯೋ ಕೆಮಿಕ್ ನರ್ಸಿಂಗ್ ಕಾಲೇಜುಗಳನ್ನು ತೆರೆಯಲು ಕೇಂದ್ರದಿಂದ ಅನುಮತಿ ಪಡೆದಿರುವೆ. ಅಲ್ಲದೆ, ನಕಲಿ ಗೆಜೆಜ್‌ನಲ್ಲಿಯೂ ತನ್ನ ವಿವಿಯ ಬಗ್ಗೆ ದಾಖಲೆ ಸೃಷ್ಟಿಸಿದ್ದ ಎಂದು ಹೇಳಿದರು.
ತಮಿಳುನಾಡಿನ ವಡಲೂರು, ಆಂಧ್ರಪ್ರದೇಶದ ಚಿತ್ತೂರು, ಕೇರಳದ ಅಟ್ಟಪಡಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬಯೋ ಮೆಡಿಕಲ್, ಪ್ಯಾರಾ ಮೆಡಿಕಲ್ ಮತ್ತು ಬಯೋ ಕೆಮಿಕ್ ನರ್ಸಿಂಗ್ ಕಾಲೇಜುಗಳನ್ನು ತೆರೆಯಲು ಅರ್ಜಿಗಳನ್ನು ಪಡೆದು ಸ್ಥಳ ಪರಿಶೀಲನೆ ನಡೆಸಿ, ಪ್ರಾಥಮಿಕ ಅನುಮೋದನೆ ನೀಡಿ 78.40ಲಕ್ಷ ರೂ. ಹಣ ಪಡೆದು ವಂಚಿಸಿದ್ದ ಎಂದು ಮಾಹಿತಿ ನೀಡಿದರು.
ಈ ಸಂಸ್ಥೆಯಿಂದ ವಂಚನೆಗೊಳಗಾದ ಬಗ್ಗೆ ಎ.24ರಂದು ಆಂಗ್ಲ ಪತ್ರಿಕೆಯೊಂದರಲ್ಲಿ ಜಾಹೀರಾತು ಪ್ರಕಟವಾಗಿತ್ತು. ಅದರಲ್ಲಿ ಆರೋಪಿ ನಡೆಸುತ್ತಿರುವ ವಿವಿ ನಕಲಿ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿತ್ತು. ಇದನ್ನು ದೂರುದಾರ ಅರಿವಳಗನ್, ಆರೋಪಿಯ ಗಮನಕ್ಕೆ ತಂದಾಗ, ಅದೆಲ್ಲಾ ಸುಳ್ಳು, ನಾನು ಎಲ್ಲ ಇಲಾಖೆಗಳಿಂದ ಅನುಮತಿ ಪಡೆದಿದ್ದೇನೆ. ಜಾಹೀರಾತನ್ನು ನಂಬಬೇಡಿ ಎಂದು ಅವರಿಗೆ ಸಮಜಾಯಿಷಿ ನೀಡಿದ್ದ ಎಂದು ಅವರು ಹೇಳಿದರು.
ನೀವು ಹೊಸದಾಗಿ ಕಾಲೇಜು ಕಟ್ಟುವ ಕೆಲಸ ಆರಂಭಿಸಿ ಎಂದು ಸಲಹೆ ನೀಡಿದ್ದ. ಈ ವಿವಿಗೆ ಸಂಬಂಧಪಟ್ಟ ಸಿಇಒ ಶ್ಯಾಮಲ್ ದತ್ತ ಎಂಬಾತನನ್ನು ಪಶ್ಚಿಮ ಬಂಗಾಳದಲ್ಲಿ ಮೇ 6ರಂದು ಅಲ್ಲಿನ ಪೊಲೀಸರು ಬಂಧಿಸಿರುವ ವಿಷಯ ತಿಳಿದುಕೊಂಡ ದೂರುದಾರರು, ತಾವು ವಂಚನೆಗೊಳಗಿರುವುದನ್ನು ಅರಿತು ಜೆ.ಪಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
2004ರಲ್ಲಿ ಪಶ್ಚಿಮ ಬಂಗಾಲದಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಮುಖ ಆರೋಪಿ ಸಂತೋಷ್ ಲೋಹಾರ್, ಎಂಬಿಎ ಪದವಿ ಪಡೆದಿದ್ದಾನೆ. ಜೊತೆಗೆ ಕೆಲ ಕೋರ್ಸ್‌ಗಳನ್ನು ಕಲಿತಿದ್ದು, ಕೆಲ ಕಂಪೆನಿಗಳಲ್ಲಿ ಉದ್ಯೋಗಿಯಾಗಿಯೂ ಕೆಲಸ ಮಾಡಿದ್ದಾನೆ. 2014ರಿಂದ ನಕಲಿ ವಿವಿ ಹೆಸರಿನಲ್ಲಿ ದಂಧೆಯಲ್ಲಿ ತೊಡಗಿದ್ದ ಎಂದು ಅವರು ವಿವರ ನೀಡಿದರು.
ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ, ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಜಿ.ಎಂ.ಕಾಂತರಾಜ್ ನೇತೃತ್ವದಲ್ಲಿ ವಿಶೇಷ ತಂಡ, ಬನ್ನೇರುಘಟ್ಟ ಕಾಳೇನಅಗ್ರಹಾರ ಎಂಎಲ್‌ಎ ಬಡಾವಣೆಯ ತಿರುಮಲ ಗಾರ್ಡನ್ ಅಪಾರ್ಟ್‌ಮೆಂಟ್‌ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ವಿವರ ನೀಡಿದರು.
ಬಂಧಿತ ಆರೋಪಿಯಿಂದ 8.96 ಲಕ್ಷ ರೂ.ನಗದು, ಕೇಂದ್ರ ಸರಕಾರದ ಲಾಂಚನವುಳ್ಳ ಕಾರು, ವಿವಿಧ ಬ್ಯಾಂಕುಗಳ ಚೆಕ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಹಾಗೂ ಬ್ಯಾಂಕಿನಲ್ಲಿ ಇರಿಸಿದ್ದ 27 ಲಕ್ಷ ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಇದೇ ವೇಳೆ ಹೇಳಿದರು.
ತಲೆ ಮರೆಸಿಕೊಂಡಿರುವ ಆರೋಪಿ ಸಂತೋಷ್ ಸಹಚರರಾದ ಶಿವಕುಮಾರ್, ಬೋಜ್‌ಬಾಬು, ಮಹೇಶ್, ಚಂದ್ರಶೇಖರ್, ಸುಬ್ರತೊ ದಾಸ್ ಹಾಗೂ ರಾಜೇಶ್ ಬಂಧನಕ್ಕೆ ಜೆಪಿ ನಗರ ಠಾಣಾ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.







