ತೊಕ್ಕೊಟ್ಟು: ತಲವಾರು ಝಳಪಿಸಿ ಕೊಲೆಗೆ ವಿಫಲ ಯತ್ನ

ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿ ಭಾನುವಾರ ಮಧ್ಯಾಹ್ನ ಬಿಜೆಪಿ ಮುಖಂಡ ಸೇರಿದಂತೆ ಇಬ್ಬರು ವ್ಯಕ್ತಿಗಳಿಗೆ ದುಷ್ಕರ್ಮಿಗಳು ತಲವಾರು ಝಳಪಿಸಿ ಕೊಲೆಗೆ ಯತ್ನ ನಡೆಸಿದ್ದು, ಈ ಸಂದರ್ಭದಲ್ಲಿ ಸ್ನೇಹಿತರು ಸ್ಥಳಕ್ಕೆ ಧಾವಿಸಿದ ಪರಿಣಾಮ ದುಷ್ಕೃತ್ಯವೊಂದು ತಪ್ಪಿದಂತಾಗಿದೆ.
ತೊಕ್ಕೊಟ್ಟು ಒಳಪೇಟೆಯ ರಾಮ ಭಜನಾ ಮಂದಿರದ ಬಳಿಯಿರುವ ರೈಲ್ವೆ ಹಳಿಯ ಬಳಿ ಉಳ್ಳಾಲ ಪುರಸಭೆಯ ಮಾಜಿ ಸದಸ್ಯ ಬಿಜೆಪಿ ಮುಖಂಡರಾದ ಭಗವಾನ್‌ದಾಸ್ ಮತ್ತು ಉಳ್ಳಾಲ ವಲಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ಹಾಲಿ ಅಧ್ಯಕ್ಷರಾದ ಪ್ರಕಾಶ್ ಎಂಬವರು ಜತೆಯಾಗಿ ಕುಳಿತಿದ್ದಾಗ ದಿಢೀರನೆ ಆ್ಯಕ್ಟಿವಾ ಮತ್ತು ಎಫ್‌ಝಿ ಬೈಕ್‌ಗಳಲ್ಲಿ ಬಂದ ಐವರು ಯುವಕರು ಇಬ್ಬರಿಗೂ ಅವಾಚ್ಯ ಶಬ್ದಗಳಿಂದ ಬೈದು, ನೀವಿಬ್ಬರೂ ಭಾರೀಕಾರುಬಾರು ನಡೆಸುತ್ತೀರಾ ಎಂದು ಬೆದರಿಸಿ ತಲವಾರುಗಳನ್ನು ಎತ್ತಿ ಝಳಪಿಸಿದ್ದಾರೆ. ಈ ಸಂದರ್ಭದಲ್ಲಿ ಕೂಡಲೇ ಭಗವಾನ್ ಅವರು ತನ್ನ ಸ್ನೇಹಿತ ಯುವಕರನ್ನು ಸ್ಥಳಕ್ಕೆ ಕರೆಸಿದ್ದು ಕಕ್ಕಾಬಿಕ್ಕಿಯಾದ ಐವರು ಆಗಂತುಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಅವರು ಬಂದಿದ್ದ ಒಂದು ದ್ವಿಚಕ್ರ ವಾಹನವನ್ನು ಬಿಟ್ಟು ಹೋಗಿದ್ದು, ಇದು ಸ್ಥಳೀಯ ಅಂಗಡಿಯವನೊಬ್ಬನ ವಾಹನವಾಗಿದೆ ಎಂದು ತಿಳಿದು ಬಂದಿದೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ಬಗ್ಗೆ ಭಗವಾನ್ ಮತ್ತು ಪ್ರಕಾಶ್ ಉಳ್ಳಾಲ ಠಾಣೆಗೆ ದೂರು ನೀಡಿದ್ದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.





