ಮಧ್ಯಪ್ರದೇಶ: 14 ಸಾವಿರ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಪಿಎಚ್‌ಡಿ-ಇಂಜಿನಿಯರ್‌ಗಳ ಸಹಿತ 9.24 ಲಕ್ಷ ಅರ್ಜಿ

ಭೋಪಾಲ, ಜೂ.26: ಮಧ್ಯಪ್ರದೇಶದಲ್ಲಿ ಸುಮಾರು 14 ಸಾವಿರ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಪಿಎಚ್‌ಡಿ, ಸ್ನಾತಕೋತ್ತರ ಪದವಿ ಹಾಗೂ ಇಂಜಿನಿಯರಿಂಗ್ ಪದವಿಧರರು ಸೇರಿದಂತೆ 9 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಒಟ್ಟು 9.24 ಲಕ್ಷ ಅಭ್ಯರ್ಥಿಗಳಲ್ಲಿ 1.19 ಲಕ್ಷ ಮಂದಿ ಪದವಿಧರರು, 14,562 ಮಂದಿ ಸ್ನಾತಕೋತ್ತರ ಪದವಿಧರರು, 9,629 ಮಂದಿ ಇಂಜಿನಿಯರ್‌ಗಳು ಹಾಗೂ 12 ಮಂದಿ ಪಿಎಚ್‌ಡಿ ಪದವಿಧರರಾಗಿದ್ದಾರೆಂದು ಮಧ್ಯಪ್ರದೇಶದ ವೃತ್ತಿಪರ ಪರೀಕ್ಷಾ ಮಂಡಳಿಯ(ಎಂಪಿಪಿಇಬಿ) ಅಂಕಿ-ಅಂಶಗಳು ತಿಳಿಸಿವೆ.
ಕಾನ್‌ಸ್ಟೆಬಲ್ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಹೈಯರ್ ಸೆಕೆಂಡರಿಯಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಲ್ಲಿ ಪಿಎಚ್‌ಡಿ ಹಾಗೂ ಇಂಜಿನಿಯರ್ ಪದವಿಧರರಿದ್ದಾರೆ. ಪರೀಕ್ಷೆಯು ಜು.17ರಂದು ನಡೆಯಲಿದೆಯೆಂದು ಎಂಪಿಪಿಇಬಿ ನಿರ್ದೇಶಕ ಭಾಸ್ಕರ್ ಲಕ್ಷಕರ್ ಹೇಳಿದ್ದಾರೆ.
ಪರೀಕ್ಷೆ ನಡೆಸುವುದು ತಮ್ಮ ಕೆಲಸವಾಗಿದೆ. ಅರ್ಜಿದಾರರ ಅರ್ಹತಾ ಪತ್ರಗಳ ಪರಿಶೀಲನೆ ತಮ್ಮ ಅಧಿಕಾರಕ್ಕೆ ಮೀರಿದುದಾಗಿದೆ ಎಂದು ಈ ಪದವಿಧರರ ಅರ್ಹತಾ ಪತ್ರಗಳ ವಿವರ ನೀಡುವಂತೆ ಕೇಳಿದಾಗ ಅವರು ತಿಳಿಸಿದ್ದಾರೆ.
ಅರ್ಜಿದಾರರಲ್ಲಿ ಹೈಯರ್ ಸೆಕೆಂಡರಿ ಅಥವಾ 12ನೆ ತರಗತಿ ಉತ್ತೀರ್ಣರಾಗಿರುವ 5 ಲಕ್ಷಕ್ಕೂ ಹೆಚ್ಚು ಮಂದಿಯಿದ್ದಾರೆ. 3,438 ಜನ ಡಿಪ್ಲೊಮಾಧಾರಿಗಳಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಕನಿಷ್ಠ ವಿದ್ಯಾರ್ಹತೆ 8ನೆ ತರಗತಿಯಾಗಿದೆ. ಇದನ್ನು ಹಾಗೂ ಇದಕ್ಕಿಂತ ಹೆಚ್ಚು ಅರ್ಹತೆಯ ಸುಮಾರು 2.56 ಲಕ್ಷ ಪರಿಶಿಷ್ಟ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಕಾನ್‌ಸ್ಟೆಬಲ್ ಹುದ್ದೆಗೆ ರೂ.5200ರಿಂದ ರೂ.20,200ರ ಶ್ರೇಣಿಯಲ್ಲಿ ವೇತನವಿದ್ದು, ತಿಂಗಳಿಗೆ ರೂ. 1,900 ಹೆಚ್ಚುವರಿ ಗ್ರೇಡ್ ವೇತನ ನೀಡಲಾಗುತ್ತದೆ.





