16 ದಿನಗಳ ಹಿಂದಿನ ಎಣ್ಣೆ ಬಳಸುತ್ತಿದ್ದ ಮ್ಯಾಕ್‌ಡೊನಾಲ್ಡ್ ಮಳಿಗೆಗಳು!
ಆಘಾತಕಾರಿ ಲೋಪ

ಜೈಪುರ(ರಾಜಸ್ಥಾನ),ಜೂ.26: ಜೈಪುರ ಪೌರಾಡಳಿತದ ಆರೋಗ್ಯ ಇಲಾಖೆಯು ಇತ್ತೀಚಿಗೆ ನಗರದ ಆಹಾರ ಮಳಿಗೆಗಳಲ್ಲಿ ನಡೆಸಿದ ಮಾಮೂಲು ತಪಾಸಣೆ ಸಂದರ್ಭ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಜನಪ್ರಿಯ ಫಾಸ್ಟ್ ಫುಡ್ ಶೃಂಖಲೆ ಮ್ಯಾಕ್ ಡೊನಾಲ್ಡ್‌ನ ಮೂರು ಮಳಿಗೆಗಳಲ್ಲಿ ಆಹಾರ ತಯಾರಿಕೆಯಲ್ಲಿ 16 ದಿನಗಳಷ್ಟು ಹಿಂದಿನ ಎಣ್ಣೆಯನ್ನು ಬಳಸುತ್ತಿದ್ದುದು ಪತ್ತೆಯಾಗಿದೆ.
ಜೂ.17ರಂದು ತಪಾಸಣೆ ಸಂದರ್ಭ ಮ್ಯಾಕ್‌ಡೊನಾಲ್ಡ್ ಮಳಿಗೆಗಳಲ್ಲಿ ಬಳಸಲಾಗುತ್ತಿದ್ದ ಎಣ್ಣೆ 16 ದಿನಗಳಷ್ಟು ಹಿಂದಿನದ್ದೆಂದು ಗೊತ್ತಾದಾಗ ನಮಗೆ ಆಘಾತವುಂಟಾಗಿತ್ತು. ಅಷ್ಟೆಲ್ಲ ದಿನಗಳ ಕಾಲ ನಿರಂತರವಾಗಿ 360 ಡಿ.ಸೆ.ಉಷ್ಣತೆಯಲ್ಲಿ ಕುದಿಯುತ್ತಿದ್ದ ಪರಿಣಾಮ ಅದು ಕಪ್ಪಾಗಿ ಹೋಗಿತ್ತು. ತೃಪ್ತಿಕರವಾದ ಉತ್ತರ ನೀಡುವಲ್ಲಿ ಮಳಿಗೆಗಳ ಮೇಲ್ವಿಚಾರಕರು ವಿಫಲಗೊಂಡಿದ್ದಾರೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ನರೋತ್ತಮ ಶರ್ಮಾ ತಿಳಿಸಿದರು.
ಈ ಆಘಾತಕಾರಿ ವಿಷಯ ಬೆಳಕಿಗೆ ಬಂದ ನಂತರ ಕೆಎಫ್‌ಸಿ, ಡಾಮಿನೋಸ್,ಸಬ್‌ವೇ ಮತ್ತು ಪಿಜ್ಝಾ ಹಟ್ ಸೇರಿದಂತೆ ಇತರ ಪ್ರತಿಷ್ಠಿತ ಫಾಸ್ಟ್ ಫುಡ್ ಮಾರಾಟ ಮಳಿಗೆಗಳಲ್ಲಿಯೂ ಅಧಿಕಾರಿಗಳು ದಿಢೀರ್ ತಪಾಸಣೆ ಕೈಗೊಂಡಿದ್ದಾರೆ.
ಇದಿಷ್ಟೇ ಅಲ್ಲ,ಜೈಪುರದಲ್ಲಿಯ ಎಲ್ಲ ಮ್ಯಾಕ್‌ಡೊನಾಲ್ಡ್ ಮಳಿಗೆಗಳಲ್ಲೂ ಪಾಮೋಲಿನ್ ಎಣ್ಣೆಯನ್ನೇ ಬಳಸಲಾಗುತ್ತಿತ್ತು. ಸೋಯಾಬೀನ್ ಎಣ್ಣೆಯಂತಹ ಇತರ ಖಾದ್ಯತೈಲಗಳಿಗ ಹೋಲಿಸಿದರೆ ಪಾಮೋಲಿನ್ ಅಷ್ಟೊಂದು ಆರೋಗ್ಯಕರವಲ್ಲ.
ಮ್ಯಾಕ್‌ಡೊನಾಲ್ಡ್ ಮಳಿಗೆಗಳಲ್ಲಿದ್ದ ಸುಮಾರು 100 ಲೀ.ಗಳಷ್ಟು ಬಳಸಿದ ಎಣ್ಣೆಯನ್ನು ನಾಶಗೊಳಿಸಿರುವ ಅಧಿಕಾರಿಗಳು ಅದಕ್ಕೆ ನೋಟಿಸ್ ಜಾರಿಗೊಳಿಸಿದ್ದಾರೆ.
ಆದರೆ ತನ್ನ ವಿರುದ್ಧದ ಆರೋಪವನ್ನು ನಿರಾಕರಿಸಿರುವ ಮ್ಯಾಕ್‌ಡೊನಾಲ್ಡ್,ಪ್ರತಿ ದಿನ ಎಣ್ಣೆಯನ್ನು ಪರೀಕ್ಷಿಸಿಯೇ ಬಳಸಲಾಗುತ್ತಿದೆ. ಅಧಿಕಾರಿಗಳಿಂದ ನಮಗೆ ಯಾವುದೇ ನೋಟಿಸ್ ಬಂದಿಲ್ಲ. ಅದು ನಮ್ಮ ಕೈ ಸೇರಿದ ಮೇಲೆ ಸೂಕ್ತ ಉತ್ತರ ನೀಡುತ್ತೇವೆ ಎಂದು ಹೇಳಿದೆ.





