ಪ್ರಧಾನಿ ನಿವಾಸಕ್ಕೆ ಮೆರವಣಿಗೆ ಹೊರಟಿದ್ದ ಸಿಸೋಡಿಯಾ ಸಹಿತ 60ಕ್ಕೂ ಹೆಚ್ಚು ಶಾಸಕರು ವಶಕ್ಕೆ
ಹೊಸದಿಲ್ಲಿ, ಜೂ.26: ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ 60ಕ್ಕೂ ಹೆಚ್ಚು ಎಎಪಿ ಶಾಸಕರನ್ನು ಪೊಲೀಸರಿಂದು ವಶಕ್ಕೆ ತೆಗೆದುಕೊಂಡಿದ್ದಾರೆ. ಪಕ್ಷದ ಶಾಸಕನೊಬ್ಬನ ಬಂಧನವನ್ನು ವಿರೋಧಿಸಿ, ಪ್ರಧಾನಿ ನರೇಂದ್ರ ಮೋದಿಯವರ ನಿವಾಸದತ್ತ ಮೆರವಣಿಗೆ ಹೊರಟಿದ್ದ ಅವರನ್ನು ಮಧ್ಯ ದಾರಿಯಲ್ಲೇ ವಶಕ್ಕೆ ಪಡೆದುಕೊಳ್ಳಲಾಗಿದೆ.
7 ಆರ್‌ಸಿಆರ್‌ನ ಸುತ್ತ ನಿಷೇಧಾಜ್ಞೆಯನ್ನು ಉಲ್ಲಂಘಿಸಿದುದಕ್ಕಾಗಿ ಶಾಸಕರನ್ನು ವಶಪಡಿಸಿಕೊಳ್ಳಲಾಗಿದೆ.
ಮಹಿಳೆಯರ ಮಾನಹಾನಿ ಹಾಗೂ ಲೈಂಗಿಕ ಕಿರುಕುಳದ ಆರೋಪದಲ್ಲಿ ಎಎಪಿ ಶಾಸಕ ದಿನೇಶ್ ಮೊಹಾನಿಯರನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ನಾಟಕೀಯವಾಗಿ ಬಂಧಿಸಿದ ಮರುದಿನ ಈ ಪ್ರತಿಭಟನಾ ಮೆರವಣಿಗೆ ನಡೆದಿದೆ.
ಸಿಸೋಡಿಯಾ ಹಾಗೂ ಪಕ್ಷೀಯರನ್ನು ವಶಕ್ಕೆ ತೆಗೆದುಕೊಂಡು ಸಂಸದ್ಭವನ ಪೊಲೀಸ್ ಠಾಣೆಗೆ ಒಯ್ಯಲಾಗಿದೆಯಾದರೂ, ತಾವು ತಿಹಾರ್ ಜೈಲಿಗೆ ಹೋಗಲು ಸಿದ್ಧವೆಂದು ಸಿಸೋಡಿಯಾ ಹೇಳಿದ್ದಾರೆ.
‘‘ಮೋದಿಜೀ, ನೀವು ನಮ್ಮನ್ನು ಬಂಧಿಸಿ, ಸಂಸದ್ಭವನ ಪೊಲೀಸ್ ಠಾಣೆಯಲ್ಲಿರಿಸಿದ್ದೀರಿ. ನಾವು ತಿಹಾರ್ ಜೈಲಿಗೆ ಹೋಗಲೂ ಸಿದ್ಧರಿದ್ದೇವೆ. ಆದರೆ, ದಿಲ್ಲಿಯ ಕೆಲಸವನ್ನು ನಿಲ್ಲಿಸಬೇಡಿ’’ ಎಂದವರು ಟ್ವೀಟಿಸಿದ್ದಾರೆ.
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾರ ವಿರುದ್ಧ ನಿನ್ನೆ ದೂರು ದಾಖಲಾಗಿದೆ. ಅವರಿಂದು 7 ಸಿಆರ್‌ಸಿಗೆ ಪ್ರಧಾನಿಯ ಮುಂದೆ ಶರಣಾಗಲು ಹೋಗಲಿದ್ದಾರೆಂದು ಟ್ವೀಟ್ ಮಾಡಿದ್ದರು.
‘‘ಮೋದೀಜಿ ನಿಮಗೆ ನಮ್ಮ ಮೇಲೆ ವೈರವಿದೆ. ನಮ್ಮನ್ನು ಬಂಧಿಸಿ. ಆದರೆ, ದಿಲ್ಲಿಯ ಕೆಲಸವನ್ನು ನಿಲ್ಲಿಸಬೇಡಿ. ನಾವೆಲ್ಲರೂ ನಿಮ್ಮ ಮುಂದೆ ಶರಣಾಗಲು ಬರಲಿದ್ದೇವೆ’’ ಎಂದು ಸಿಸೋಡಿಯಾ ನಿನ್ನೆ ಟ್ವೀಟಿಸಿದ್ದರು.





