ಬೀಜಿಂಗ್ ಒಲಿಂಪಿಕ್ಸ್ ಬಳಿಕ ನಿವೃತ್ತಿಗೆ ಸಲಹೆ: ಸುಶೀಲ್ ಕುಮಾರ್
ಹೊಸದಿಲ್ಲಿ, ಜೂ.26: ‘‘ನಾನು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ ಬಳಿಕ ನಿವೃತ್ತಿಯಾಗುವಂತೆ ಹಿತೈಷಿಗಳು ಸಲಹೆ ನೀಡಿದ್ದರು’’ ಎಂದು ಭಾರತದ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಏಕೈಕ ಕುಸ್ತಿಪಟು ಸುಶೀಲ್ ಕುಮಾರ್ ‘ಮೈ ಒಲಿಂಪಿಕ್ ಜರ್ನಿ’ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ.
ಬೀಜಿಂಗ್ ಒಲಿಂಪಿಕ್ಸ್ ಬಳಿಕ ನಿವೃತ್ತಿಯಾಗುವಂತೆ ಹಿತೈಷಿಗಳು ಸಲಹೆ ನೀಡಿದ್ದರೂ ಕುಸ್ತಿಯಲ್ಲೇ ಮುಂದುವರಿಯಲು ನಿರ್ಧರಿಸಿದ್ದೆ. ಇದು ನನ್ನ ಆರಂಭ.ಅಂತ್ಯವಲ್ಲ ಎಂದು ಭಾವಿಸಿದೆ.್ದ 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್‌ನಲ್ಲಿ ಎರಡನೆ ಸ್ಥಾನ ಪಡೆದಿದ್ದೆ ಎಂದು ಸುಶೀಲ್ ಕುಮಾರ್ ಹೇಳಿದ್ದಾರೆ.
‘‘ಬೀಜಿಂಗ್ ಗೇಮ್ಸ್‌ನಿಂದ ಸ್ವದೇಶಕ್ಕೆ ವಾಪಸಾದಾಗ ನನ್ನ ಹಿತೈಷಿಗಳು ಉತ್ತಮ ಫಾರ್ಮ್‌ನಲ್ಲಿರುವಾಗಲೇ ನಿವೃತ್ತಿಯಾಗುವಂತೆ ಸಲಹೆ ನೀಡಿದ್ದರು. ಆದರೆ, ನಾನು ಕುಸ್ತಿಯಲ್ಲಿ ಇನ್ನಷ್ಟು ಆಸಕ್ತಿವಹಿಸಿದೆ. 2008ರಲ್ಲಿ ನಾನು ಗೆದ್ದಂತಹ ಕಂಚಿನ ಪದಕ ಐತಿಹಾಸಿಕ ಸಾಧನೆಯಾಗಿತ್ತು ಎನ್ನುವುದು ತಡವಾಗಿ ಗೊತ್ತಾಯಿತು. ನಾನು 52 ವರ್ಷಗಳ ಬಳಿಕ ಭಾರತಕ್ಕೆ ಕುಸ್ತಿಯಲ್ಲಿ ಒಲಿಂಪಿಕ್ ಪದಕ ಗೆದ್ದುಕೊಟ್ಟಿದ್ದೇನೆಂದು ನಂತರ ತಿಳಿಯಿತು. ಕೆ.ಡಿ. ಜಾಧವ್ ಹೆಲ್ಸಿಂಕಿಯಲ್ಲಿ 1952ರಲ್ಲಿ ಮೊದಲ ಬಾರಿ ಒಲಿಂಪಿಕ್ ಪದಕ ಜಯಿಸಿದ್ದು ತಿಳಿದುಬಂತು. ನಾನು ಸ್ವದೇಶಕ್ಕೆ ಮರಳಿದ ಬಳಿಕವೇ ನನ್ನ ಪದಕದ ಮಹತ್ವ ಏನೆಂದು ಗೊತ್ತಾಗಿತ್ತು’’ ಎಂದು ಪತ್ರಕರ್ತರಾದ ದಿಗ್ವಿಜಯ್ ಸಿಂಗ್ ಹಾಗೂ ಅಮಿತ್ ಬೋಸ್ ಜೊತೆಯಾಗಿ ಬರೆದಿರುವ ಆತ್ಮಚರಿತ್ರೆಯಲ್ಲಿ ಸುಶೀಲ್ ಬಹಿರಂಗಪಡಿಸಿದ್ದಾರೆ.







