ನ್ಯಾಯಾಂಗ ತನಿಖೆ ಆರಂಭ
ಜವಾಹರ್‌ಬಾಗ್ ಹಿಂಸಾಚಾರ
ಮಥುರಾ, ಜೂ.26: ಇಲ್ಲಿನ ಜವಾಹರ್‌ಬಾಗ್‌ನಲ್ಲಿ ನಡೆದಿದ್ದ ಹಿಂಸಾಚಾರದ ಕುರಿತು ನ್ಯಾಯಾಂಗ ತನಿಖೆ ಶನಿವಾರ ಆರಂಭವಾಗಿದೆ. ಜೂ.2ರಂದು ಅತಿಕ್ರಮಣ ತೆರವು ಕಾರ್ಯಾಚರಣೆಯ ವೇಳೆ ಇಬ್ಬರು ಪೊಲೀಸ್ ಅಧಿಕಾರಿಗಳು ಸಹಿತ 24 ಮಂದಿ ಸಾವಿಗೀಡಾಗಿದ್ದ ನಿವೇಶನಕ್ಕೆ ಅಲಹಾಬಾದ್ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಯೊಬ್ಬರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತನಿಖೆಯು ಘಟನೆಗೆ ಕಾರಣ, ಮಾಹಿತಿ ಸಂಗ್ರಹ ಹಾಗೂ ಪೂರೈಕೆ ವೈಫಲ್ಯ, ಮಥುರಾ ಪೊಲೀಸರ ಯೋಜನೆಯ ನ್ಯೂನತೆ, ಅಧೀಕ್ಷಕ ಅಧಿಕಾರಿಗಳ ಪಾತ್ರ, ಘಟನೆ ತಡೆಯಲು ಮಾಡಿದ್ದ ಪ್ರಯತ್ನ, ಜಿಲ್ಲಾಡಳಿತದ ಮೇಲೆ ಯಾವುದಾದರೂ ಒತ್ತಡವಿತ್ತೇ?, ಘಟನೆ ವೇಳೆ ಅಧಿಕಾರಿಗಳ ಪಾತ್ರ ಹಾಗೂ ನಡೆಸಲಾಗಿರುವ ತನಿಖೆಗಳನ್ನು ಆಧರಿಸಿರುತ್ತದೆ. ಘಟನೆಯ ಕುರಿತು ಯಾರೂ ಯಾವುದೇ ಮಾಹಿತಿಯನ್ನೂ ಹಾಜರುಪಡಿಸಬಹುದೆಂದು ನ್ಯಾಯಮೂರ್ತಿ ಮಿರ್ಜಾ ಇಮ್ತಿಯಾಝ್ ಮುರ್ತಝಾ ತಿಳಿಸಿದ್ದಾರೆ.
ಬಿಜೆಪಿ ನಾಯಕರ ನಿಯೋಗವೊಂದು ತನ್ನ ಹೇಳಿಕೆ ನೀಡಲು ನ್ಯಾ. ಮುರ್ತಝಾರನ್ನು ಭೇಟಿಯಾಗಿತ್ತು.
ಆದರೆ, ಜವಾಹರ್‌ಬಾಗ್ ಘಟನೆಯ ಕುರಿತು ಏನನ್ನಾದರೂ ಹಾಜರುಪಡಿಸಲು ಆಯೋಗಕ್ಕೆ ನಿಜವಾಗಿಯೂ ಇಚ್ಛೆಯಿದ್ದಲ್ಲಿ, ಆಯೋಗದೆದುರು ಪ್ರತಿಜ್ಞೆ ಸ್ವೀಕರಿಸಿ ಅದನ್ನು ಮಾಡಬಹುದೆಂದು ಅದಕ್ಕೆ ತಿಳಿಸಲಾಯಿತು.ಆಯೋಗದ ಮುಂದೆ ಶನಿವಾರ ಸುಮಾರು 25 ಅಫಿದಾವಿತ್‌ಗಳು ಮಂಡನೆಯಾಗಿವೆ. ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಬಂಗಲೆಯಲ್ಲಿ ಜು.15ರ ವರೆಗೆ ಆಯೋಗದ ಕಚೇರಿ ಕಾರ್ಯಾಚರಿಸಲಿದೆ.





