1.6 ಕೋಟಿ ನಕಲಿ ಪಡಿತರ ಚೀಟಿಗಳು ರದ್ದು ಸರಕಾರಕ್ಕೆ 10,000 ಕೋ.ರೂ. ಸಬ್ಸಿಡಿ ಉಳಿತಾಯ
ಹೊಸದಿಲ್ಲಿ,ಜೂ.26: ಸರಕಾರವು 1.6 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸಿದ್ದು, ಇದರಿಂದ 10,000 ಕೋ.ರೂ.ಉಳಿತಾಯವಾಗುವ ನಿರೀಕ್ಷೆಯಿದೆ ಎಂದು ಹಣಕಾಸು ಕಾರ್ಯದರ್ಶಿ ಅಶೋಕ ಲವಾಸಾ ಅವರು ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಇದರೊಂದಿಗೆ ಅಡಿಗೆ ಅನಿಲ(ಎಲ್‌ಪಿಜಿ)ದ ಮೇಲಿನ ಸಬ್ಸಿಡಿಯನ್ನು ಬಳಕೆದಾರರಿಗೆ ನೇರವಾಗಿ ವಿತರಿಸುವ ಮೂಲಕ ಸರಕಾರವು 14,872 ಕೋ.ರೂ.ಗಳನ್ನು ಉಳಿಸಿದೆ ಮತ್ತು ಈ ವರ್ಷದ ಎಪ್ರಿಲ್‌ವರೆಗೆ 65 ಯೋಜನೆಗಳಿಗೆ ನೇರ ನಗದು ವರ್ಗಾವಣೆಯನ್ನು ವಿಸ್ತರಿಸಲಾಗಿದೆ. ವರ್ಷದ ಅಂತ್ಯದೊಳಗೆ ಅದನ್ನು ಇನ್ನೂ 150 ಯೋಜನೆಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
2015,ಮಾ.31ಕ್ಕೆ ಇದ್ದಂತೆ 11 ಕೋಟಿ ಕುಟುಂಬಗಳು ಪಡಿತರ ಚೀಟಿಗಳನ್ನು ಹೊಂದಿದ್ದವು ಎಂದ ಅವರು,ಎಲ್‌ಪಿಜಿ ಮೇಲಿನ ನೇರ ನಗದು ವರ್ಗಾವಣೆಯು 3.5 ಕೋಟಿ ನಕಲಿ ಸಂಪರ್ಕಗಳನ್ನು ರದ್ದುಗೊಳಿಸುವಲ್ಲಿ ನೆರವಾಗಿದೆ. ಇದರಿಂದ ವಾರ್ಷಿಕ ಇಂಧನ ಸಬ್ಸಿಡಿಯಲ್ಲಿ 14,982 ಕೋ.ರೂ.ಉಳಿತಾಯವಾಗುತ್ತಿದೆ ಎಂದರು.
ನರೇಗಾ ಯೋಜನೆಯಲ್ಲಿಯೂ 2015-16ನೆ ಸಾಲಿನಲ್ಲಿ ಬೋಗಸ್ ಉದ್ಯೋಗ ಕಾರ್ಡ್‌ಗಳ ರದ್ದತಿಯಿಂದಾಗಿ ಸುಮಾರು ಶೇ.10ರಷ್ಟು ಉಳಿತಾಯ ಸಾಧ್ಯವಾಗಿದೆ ಎಂದರು.
ವಿವಿಧ ಯೋಜನೆಗಳಲ್ಲಿ ಸುಮಾರು 31 ಕೋಟಿ ಫಲಾನುಭವಿಗಳು ನೇರ ನಗದು ವರ್ಗಾವಣೆಯ ವ್ಯಾಪ್ತಿಗೊಳಪಟ್ಟಿದ್ದಾರೆ ಎಂದರು.
ನೇರ ನಗದು ವರ್ಗಾವಣೆ ವ್ಯಾಪ್ತಿಗೆೆ ಸೀಮೆಎಣ್ಣೆಯನ್ನೂ ತರಲಾಗುತ್ತಿದ್ದು, ಶೀಘ್ರವೇ 33 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು ಎಂದು ಲವಾಸಾ ತಿಳಿಸಿದರು.







