ಲಂಡನ್ ಚರ್ಚ್‌ನಿಂದ ಐತಿಹಾಸಿಕ ಇಫ್ತಾರ್ ಕೂಟ
ಚರ್ಚ್ ನಾಯಕರಿಂದಲೂ ಉಪವಾಸ, ಮೇಯರ್ ಖಾನ್ ಅತಿಥಿ

ಲಂಡನ್: ಲಂಡನ್ ನ ಶತಮಾನಗಳಷ್ಟು ಹಳೇ ಚರ್ಚ್ ತನ್ನ ಬಾಗಿಲನ್ನು ಮುಸ್ಲಿಮರಿಗಾಗಿ ಉಪವಾಸ ಬಿಡಲು ತೆರೆದದ್ದಷ್ಟೇ ಅಲ್ಲ ನೂರಾರು ಮುಸ್ಲಿಮರಿಗೆ ಪ್ರಾರ್ಥನಾ ಸಭೆ ಮತ್ತು ಇಫ್ತಾರ್ ಕೂಟವನ್ನು ಆಯೋಜಿಸಿದೆ. ಚರ್ಚ್ ನಾಯಕರೂ ಸಹ ಸೌಹಾರ್ದತೆಗಾಗಿ ಮುಸ್ಲಿಮರ ಜೊತೆಗೂಡಿ ಉಪವಾಸ ಮಾಡಿದ್ದಾರೆ.
ಪಿಕಾಡಲಿಯ ಸೈಂಟ್ ಜೇಮ್ಸ್ ಚರ್ಚ್ ಸಿಟಿ ಸರ್ಕಲ್ ಜೊತೆಗೂಡಿ 400ಕ್ಕೂ ಹೆಚ್ಚು ಮುಸ್ಲಿಮರನ್ನು ಮತ್ತು ಇತರ ಧರ್ಮೀಯರನ್ನು ತಮ್ಮ ಅಬ್ಬರದ ಇಫ್ತಾರ್ ಭೋಜನಕ್ಕಾಗಿ ಆಹ್ವಾನಿಸಿದೆ. ಲಂಡನ್‌ನ ಹೊಸ ಮೇಯರ್ ಸಾದಿಕ್ ಖಾನ್ ಈ ಕಾರ್ಯಕ್ರಮದ ಅತಿಥಿಯಾಗಿದ್ದರು.
ಯುರೋಪ್ ಒಕ್ಕೂಟದಿಂದ ಹೊರ ಬರುವ ಬ್ರಿಟನ್ ನಿರ್ಧಾರದ ಕುರಿತು ಬಿಬಿಸಿಯಲ್ಲಿ ರಾಷ್ಟ್ರೀಯ ಚರ್ಚೆಯ ಸಂದರ್ಭದಲ್ಲಿ ಉಪವಾಸ ತ್ಯಜಿಸಿ ಪ್ರಸಿದ್ಧರಾಗಿದ್ದ ಸಾದಿಕ್ ಖಾನ್ ಈ ಸಂದರ್ಭದಲ್ಲಿ ಮಾತನಾಡಿದರು. ಇತರ ಧರ್ಮೀಯರ ಜೊತೆಗೆ ಸಂಬಂಧ ಬೆಳೆಸಲು ಮುಂದಾಗುವುದು ಮುಸ್ಲಿಮರ ಕರ್ತವ್ಯವಾಗಿದೆ. ಆ ಮೂಲಕ ಇಸ್ಲಾಂ ಬಗ್ಗೆ ಇರುವ ಕೆಟ್ಟ ಭಾವನೆಯನ್ನು ಹೋಗಲಾಡಿಸಿ ಇಸ್ಲಾಂನ ನಿಜವಾದ ಸಕಾರಾತ್ಮಕ ಚಹರೆಯನ್ನು ಮುಂದಿಡಬೇಕು. ಮುಸ್ಲಿಮರು, ಹಿಂದೂಗಳು, ಯಹೂದಿಗಳು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಇತರ ಧರ್ಮೀಯರು ಜೊತೆಗೂಡಿ ಲಂಡನ್ ನಲ್ಲಿ ಬಡತನ ಮತ್ತು ಅಸಮಾನತೆ ಹೋಗಲಾಡಿಸಲು ಕೆಲಸ ಮಾಡಬೇಕು. ಎಲ್ಲಾ ಧರ್ಮೀಯರು ಮಾನವತೆಗಾಗಿ ಹಾಗೂ ಬಡತನ ಮತ್ತು ಅನ್ಯಾಯದ ನಿವಾರಣೆಗೆ ಪ್ರಯತ್ನಿಸಬೇಕು ಎಂದು ಸಾದಿಕ್ ಹೇಳಿದರು.
ಲಂಡನ್ ಚರ್ಚ್ ಹೀಗೆ ಸೌಹಾರ್ದಕ್ಕಾಗಿ ಇಫ್ತಾರ್ ಕೂಟ ಆಯೋಜಿಸಿರುವುದು, ತಮ್ಮನ್ನು ಮತ್ತು ತಮ್ಮ ಸಮುದಾಯವನ್ನು ಆಹ್ವಾನಿಸಿರುವುದು ಮತ್ತು ಅನಾಥರಿಗಾಗಿ ನೆರವಾಗಲು ಅನುದಾನ ಸಂಗ್ರಹಿಸಿರುವ ಬಗ್ಗೆ ಹೆಮ್ಮೆ ಎನಿಸಿದೆ ಎಂದು ಸಾದಿಕ್ ಹೇಳಿದ್ದಾರೆ. ಲಂಡನ್‌ನ ಹಾರ್ಲೇ ಸ್ಟ್ರೀಟ್ ಕ್ಲಿನಿಕ್‌ನಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪ್ರಧಾನಿ ನವಾಝ್ ಷರೀಫರಿಗೆ ಈ ಸಂದರ್ಭದಲ್ಲಿ ಸಾದಿಕ್ ಖಾನ್ ಶುಭ ಹಾರೈಸಿದರು. ಲಂಡನ್‌ನಲ್ಲಿ ಅತ್ಯುತ್ತಮ ಆರೋಗ್ಯ ವ್ಯವಸ್ಥೆಯಿದೆ ಮತ್ತು ಜಾಗತಿಕವಾಗಿ ಜನರು ಲಂಡನ್‌ಗೆ ಚಿಕಿತ್ಸೆಗಾಗಿ ಅದೇ ಕಾರಣದಿಂದ ಬರುತ್ತಿದ್ದಾರೆ. ರಾಷ್ಟ್ರೀಯ ಆರೋಗ್ಯ ಸೇವೆಗೆ ಸಮನಾದುದು ಜಾಗತಿಕವಾಗಿ ಎಲ್ಲೂ ಸಿಗುವುದಿಲ್ಲ. ಅಮೆರಿಕ, ಪಾಕಿಸ್ತಾನ ಮತ್ತು ಇತರ ರಾಷ್ಟ್ರಗಳು ಆರೋಗ್ಯ ಸೇವೆಯ ಸೌಲಭ್ಯಗಳನ್ನು ನೀಡುವಲ್ಲಿ ಹಿಂದೆ ಬಿದ್ದಿವೆ ಎಂದು ಖಾನ್ ಹೇಳಿದ್ದಾರೆ.
ಚರ್ಚ್ ಆಯೋಜಿಸಿರುವ ಇಫ್ತಾರ್ ಕೂಟದಲ್ಲಿ ಹಿಂದೂಗಳು ಮತ್ತು ಇತರ ಧರ್ಮೀಯರು ಜೊತೆಗೂಡಿ ಉಪವಾಸ ತೊರೆದಿದ್ದಾರೆ. ಅಂತಹ ಯೋಜನೆಗಳನ್ನು ಹೆಚ್ಚು ಹಾಕಿಕೊಳ್ಳಬೇಕು. ಇಸ್ಲಾಂ ಕುರಿತು ಕೆಟ್ಟ ಭಾವನೆಯೇ ಜನರಲ್ಲಿ ತುಂಬಿರುವುದು ದುರದೃಷ್ಟ. ಅದನ್ನು ನಾವು ಸರಿಪಡಿಸಬೇಕಿದೆ. ಎಲ್ಲಾ ಸಮುದಾಯಗಳ ಜೊತೆಗೂಡಿ ಆ ನಿಟ್ಟಿನಲ್ಲಿ ಕೆಲಸ ಮಾಡಬಹುದು. ನಾವು ಜಾಗತೀಕರಣದ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಹೀಗಾಗಿ ಎಲ್ಲಾ ಧರ್ಮಗಳು ಮತ್ತು ಚಿಂತನಾಶಾಲೆಗಳು ಒಂದಾಗಿ ಕೆಲಸ ಮಾಡಬೇಕು. ಸಹೋದರ ಭಾವವನ್ನು ಪ್ರಾಯೋಜಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ನಾನು ಎಲ್ಲಾ ಲಂಡನ್ ವಾಸಿಗಳಿಗೆ ಮೇಯರ್. ಸೈಂಟ್ ಜೇಮ್ಸ್ ಚರ್ಚ್ ಇಫ್ತಾರ್ ಕೂಟ ಆಯೋಜಿಸಿ ಹೊಸ ಹೆಜ್ಜೆ ಇಟ್ಟಿದೆ. ರೆವರೆಂಡ್ ಲ್ಯೂಸಿ ವಿಂಕೆಟ್ ಇಂದು ಸೌಹಾರ್ದಕ್ಕಾಗಿ ಉಪವಾಸವನ್ನೂ ಮಾಡಿದ್ದಾರೆ. ಅದು ನಮಗೆಲ್ಲಾ ದೊಡ್ಡ ಉದಾಹರಣೆ. ಮುಸ್ಲಿಮರು ಅಲ್ಪಸಂಖ್ಯಾತರಾಗಿರುವ ಬ್ರಿಟನಿನಲ್ಲಿ ಇಂತಹ ಬೆಳವಣಿಗೆ ಆಹ್ಲಾದಕರ. ಮುಸ್ಲಿಮರು ಬಹುಸಂಖ್ಯಾತರೇ ಅಥವಾ ಅಲ್ಪಸಂಖ್ಯಾತರೇ ಎನ್ನುವುದು ಮುಖ್ಯವಲ್ಲ. ಪರಸ್ಪರ ಧರ್ಮಗಳ ನಡುವೆ ಸಹೋದರ ಬಾಳ್ವೆ ಅಗತ್ಯ. ಲಂಡನ್ ಜಾಗತಿಕವಾಗಿ ದೊಡ್ಡ ನಗರವಾದರೂ ಈಗಲೂ ವಸತಿಹೀನರು ಇರುವುದು ನಾಚಿಕೆಗೇಡು. ಈ ಅಸಮಾನತೆಯನ್ನು ನಿವಾರಿಸಬೇಕು. ಅಗ್ಗದ ಬೆಲೆಯಲ್ಲಿ ಮನೆಗಳನ್ನು ಒದಗಿಸಲು ಹೊಸ ಯೋಜನೆಗಳು ಬರಬೇಕು. ಎಲ್ಲರಿಗೂ ಉದ್ಯೋಗ ಭದ್ರತೆ ಸಿಗಬೇಕು ಎಂದೂ ಅವರು ಹೇಳಿದರು.
ಇಫ್ತಾರ್ ಕೂಟವನ್ನು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಸಹಬಾಳ್ವೆಗಾಗಿ ಆಯೋಜಿಸಿದ್ದಾಗಿ ರೆವರೆಂಡ್ ಲ್ಯೂಸಿ ವಿಂಕೆಟ್ ತಿಳಿಸಿದರು. ರಮಝಾನ್ ಸಂದರ್ಭದಲ್ಲಿ ಸಮುದಾಯಗಳನ್ನು ಹತ್ತಿರಕ್ಕೆ ತಂದು ನಮ್ಮ ಸಮಾನ ಮೌಲ್ಯಗಳನ್ನು ಹಂಚಿಕೊಳ್ಳುವ ಪ್ರಯತ್ನ ಎಂದರು. ಮುಸ್ಲಿಮರ ಜೊತೆಗೂಡಿ ಉಪವಾಸ ಮಾಡುವುದು ದೊಡ್ಡ ಅನುಭವ. ದಿನದ 19 ಗಂಟೆಗಳ ಕಾಲ ಉಪವಾಸದಲ್ಲಿ ಮಾಡುವ ತ್ಯಾಗವನ್ನು ತಿಳಿದುಕೊಳ್ಳಲು ಇದರಿಂದ ಸಾಧ್ಯವಾಗಿದೆ ಎಂದೂ ಅವರು ಹೇಳಿದರು.







