ಪುತ್ತೂರಲ್ಲಿ ಶಾಲಾ ಮಕ್ಕಳ ಸುರಕ್ಷತೆಯ ಕುರಿತ ಜಿಲ್ಲಾ ಮಟ್ಟದ ಸಭೆ
ಕುಂದಾಪುರ ಘಟನೆ ಮರುಕಳಿಸಲು ಅವಕಾಶ ಬೇಡ : ಎಸ್ಪಿ ಸೂಚನೆ

ಪುತ್ತೂರು : ಕುಂದಾಪುರದಲ್ಲಿ ನಡೆದಂತಹ ಘಟನೆ ಮತ್ತೊಮ್ಮೆ ಮರುಕಳಿಸಲು ಅವಕಾಶ ನೀಡಬಾರದು, ವಿದ್ಯಾರ್ಥಿಗಳ ಪೋಷಕರು , ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನ ಚಾಲಕರು ಹಾಗೂ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ ಇಂತಹ ಅಪಘಾತಕ್ಕೆ ಅವಕಾಶವೇ ಇರುವುದಿಲ್ಲ , ಸ್ಪಷ್ಟವಾದ ಸಂಚಾರ ಮಾರ್ಗಸೂಚಿಗಳಿದ್ದರೂ ಕೆಲವನ್ನು ನಾವು ನಿರ್ಲಕ್ಷಿಸುವ ಕಾರಣದಿಂದಾಗಿಯೇ ಸಮಸ್ಯೆಗಳಾಗುತ್ತಿದೆ ಎಂದು ಎಸ್ಪಿ ಭೂಷಣ್ ಬೋರಸೆ ಅವರು ಹೇಳಿದರು.
ಪುತ್ತೂರಿನ ಬಂಟರ ಭವನದಲ್ಲಿ ಭಾನುವಾರ ನಡೆದ ಶಾಲಾ ಮಕ್ಕಳ ಸುರಕ್ಷತೆಯ ಕುರಿತಾದ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.
ಶಾಲೆಗಳಲ್ಲಿ ಮಕ್ಕಳ ರಕ್ಷಾ ಸಮಿತಿ ಅಗತ್ಯವಾಗಿದ್ದು, ಅಗತ್ಯವಿದ್ದ ಶಾಲೆಗಳ ಎದುರಿನ ರಸ್ತೆಗೆ ಜೀಬ್ರಾಕ್ರಾಸ್ ಹಾಕಬಹುದು ಎಂದ ಅವರು ರಿಕ್ಷಾದಲ್ಲಿ ಹೆಚ್ಚು ಜನ ಇದ್ದರೆ ಅಥವಾ ರಿಕ್ಷಾ ಚಾಲಕ ಹೊಸಬನಿದ್ದರೆ ವಿದ್ಯಾರ್ಥಿಗಳನ್ನು ಬೇರೆ ವಾಹನದಲ್ಲಿ ಕಳುಹಿಸುವ ವ್ಯವಸ್ಥೆ ಮಾಡಬೇಕು, ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ವಾಹನ ಸರಿಯಾಗಿದೆಯೇ ಎನ್ನುವುದನ್ನು ಪೋಷಕರು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ವಾಹನದಿಂದ ಇಳಿಯುವಾಗ ಮಕ್ಕಳನ್ನು ರಸ್ತೆಯಲ್ಲೇ ಬಿಡುವುದು ಅಪಾಯವಾಗಿದ್ದು, ಈ ಬಗ್ಗೆ ವಾಹನ ಚಾಲಕರು ಎಚ್ಚರ ವಹಿಸಬೇಕು. ರಿಕ್ಷಾದ ಹೊರಗಡೆ ಮಕ್ಕಳ ಬ್ಯಾಗ್ ನೇತಾಡುತ್ತಿದ್ದರೆ ಅಪಘಾತ ನಡೆಯುವ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ಬಗ್ಗೆಯೂ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನ ಚಾಲಕರಿಗೆ ಸೂಚನೆ ನೀಡಿದ ಅವರು ಬ್ಯಾರಿಕೇಡ್, ಬಿಳಿಪಟ್ಟಿ ಹಾಕುವ ವಿಚಾರದಲ್ಲಿ ಸಂದೇಹಗಳಿದ್ದರೆ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದೆಂದರು.
ಪುತ್ತೂರು ಉಪವಿಭಾಗಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಪ್ರತಿಯೊಂದು ವಿಚಾರದಲ್ಲೂ ಸಾಧಕ- ಬಾಧಕಗಳಿರುವುದರಿಂದ ಮತ್ತು ಜೀವಕ್ಕೆ ಬೆಲೆ ಕಟ್ಟಲು ಅಸಾಧ್ಯವಾಗಿರುವುದರಿಂದ ಕಾನೂನು ಪಾಲನೆ ಕಡೆಗೆ ಪ್ರತಿಯೊಬ್ಬರೂ ಗಮನ ಹರಿಸಬೇಕು. ಘಟನೆ ಸಂಭವಿಸಿದ ಬಳಿಕ ಚಿಂತಿಸುವ ಬದಲು ಮೊದಲೇ ಮುನ್ನೆಚ್ಚರಿಕೆ ವಹಿಸಬೇಕು . ಜೀವದ ಬೆಲೆಯನ್ನು ಅರಿತುಕೊಂಡು ತಮ್ಮ ಕೆಲಸವನ್ನು ನಿರ್ವಹಿಸಬೇಕು ಎಂದು ಕರೆಯಿತ್ತರು. ಮಕ್ಕಳ ಸುರಕ್ಷತಾ ವಿಚಾರದಲ್ಲಿ ಪ್ರತಿ ತಿಂಗಳು ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಜಾಗೃತಿ ಮೂಡಿಸುವ ಕಡೆ ಗಮನ ಹರಿಸಲಾಗುವುದು ಎಂದು ಅವರು ತಿಳಿಸಿದರು.
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್ ಮಾತನಾಡಿ, ಪುತ್ತೂರು ಘಟಕದಲ್ಲಿ 45 ಸಾವಿರ ಮಂದಿಗೆ ಬಸ್ ಪಾಸ್ ವಿತರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೆ ಸಮಸ್ಯೆಯಾಗುತ್ತಿರುವ ವಿಚಾರ ತಿಳಿದು ಬಂದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಮಾತನಾಡಿ, ಶಾಲಾ ವೇಳಾಪಟ್ಟಿಯನ್ನು ಅರ್ಧ ಗಂಟೆಯಷ್ಟು ಹೆಚ್ಚು-ಕಡಿಮೆ ಮಾಡಲು ಅವಕಾಶವಿದೆ. ಆದರೆ ದೊಡ್ಡ ಬದಲಾವಣೆ ಅಗತ್ಯವಿದ್ದರೆ ಜಿಲ್ಲಾ ಪಂಚಾಯತ್ ಮೂಲಕ ಸರ್ಕಾರದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಪುತ್ತೂರಿನ ಎಎಸ್ಪಿ ರಿಷ್ಯಂತ್, ಆರ್‌ಟಿಒ ಫೆಲಿಕ್ಸ್ ಡಿಸೋಜಾ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಶಿಧರ್ ಜಿ.ಎಸ್, ರಾಜಲಕ್ಷ್ಮೀ, ಜ್ಞಾನೇಶ್, ಗೋವಿಂದ ಮಡಿವಾಳ , ಕೆಎಸ್‌ಆರ್‌ಟಿಸಿ ಸಂಚಲನ ಅಧಿಕಾರಿ ವೆಂಕಟೇಶ್ ಮತ್ತಿತರರು ಇದ್ದರು.
ಮೌನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಅಪಘಾತದ ಗಂಭೀರತೆಯ ಬಗ್ಗೆ ಜಾಗೃತಿ ಮೂಡಿಸುವ ವೀಡಿಯೋ ಪ್ರದರ್ಶಿಸಲಾಯಿತು. ಬಳಿಕ ನಡೆದ ಸಲಹೆ ಸೂಚನೆ ಅವಧಿಯಲ್ಲಿ ನಗರಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಸುದಾನ ವಿದ್ಯಾಸಂಸ್ಥೆಯ ವಿಜಯ ಹಾರ್ವಿನ್, ಅಂಬಿಕಾ ವಿದ್ಯಾಲಯದ ಸುಬ್ರಹ್ಮಣ್ಯ ನಟ್ಟೋಜ, ರಾಧಾಕೃಷ್ಣ ಸುಳ್ಯ, ಮೋಹನ್ ಪಕ್ಕಳ , ಯು.ಜಿ.ರಾಧಾ, ದೇವಪ್ಪ ನೆಹರೂನಗರ, ಶ್ರೀನಿವಾಸ್, ಸುಬ್ರಹ್ಮಣ್ಯ ಭಟ್, ಹನೀಫ್, ಶೋಭಾ ನಾಗರಾಜ್, ಜಯಪ್ರಕಾಶ್, ರೋಸ್ಲಿನಾ, ಸತೀಶ್ ಮೊದಲಾದವರು ಸಲಹೆ ಸೂಚನೆಯ ಜೊತೆಗೆ ಕೆಲವೊಂದು ಪ್ರಶ್ನೆಗಳನ್ನು ಮುಂದಿಟ್ಟರು. ವಿದ್ಯಾರ್ಥಿಗಳ ಪೋಷಕರು, ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯವರು, ವಾಹನ ಚಾಲಕರು ಸಭೆಯಲ್ಲಿ ಹಾಜರಿದ್ದರು. ಕೊನೆಯಲ್ಲಿ ಅಧಿಕಾರಿಗಳು ಸಭೆಯಲ್ಲಿ ವ್ಯಕ್ತವಾದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಪ್ರೊ.ಬಿ.ಜೆ.ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
26ಪಿಟಿಆರ್1- ಸುರಕ್ಷತಾ ಸಭೆ :
ಪುತ್ತೂರಿನ ಬಂಟರ ಭವನದಲ್ಲಿ ಭಾನುವಾರ ನಡೆದ ಶಾಲಾ ಮಕ್ಕಳ ಸುರಕ್ಷತೆಯ ಕುರಿತಾದ ಜಿಲ್ಲಾ ಮಟ್ಟದ ಸಭೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಮಾತನಾಡಿದರು.







