ಅಣೆಕಟ್ಟಿನಲ್ಲಿ ತ್ಯಾಜ್ಯ: ಕೃಷಿಭೂಮಿಗೆ ನುಗ್ಗಿದ ನೀರು
ಶಿರ್ವ, ಜೂ.26: ಮೂಡುಬೆಳ್ಳೆ ಗ್ರಾಪಂ ವ್ಯಾಪ್ತಿಯಲ್ಲಿರುವ ದಿಂದೊಟ್ಟು ಅಣೆಕಟ್ಟಿನಲ್ಲಿ ತ್ಯಾಜ್ಯ ತುಂಬಿದ್ದು, ಇದರ ಪರಿಣಾಮ ಸಮೀಪದ ಕೃಷಿಭೂಮಿಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ.
ದಿಂದೊಟ್ಟು ಹೊಳೆ ಮಳೆಗಾಲ ದಲ್ಲಿ ತುಂಬಿ ಹರಿಯುತ್ತಿದ್ದು, ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಅಣೆಕಟ್ಟಿನ ಕಿಂಡಿಗಳ ದಕ್ಷಿಣ ತುದಿಯಲ್ಲಿ ಅಪಾರ ಪ್ರಮಾಣದ ಮರದ ತ್ಯಾಜ್ಯ ಉಳಿದುಕೊಂಡಿದೆ. ಇದರಿಂದ ಅಣೆಕಟ್ಟಿನ ಒಂದು ಭಾಗದಲ್ಲಿನ ನೀರು ಸಮೀಪದ ಕೃಷಿಭೂಮಿಗಳಿಗೆ ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಅಣೆಕಟ್ಟಿನಲ್ಲಿ ತ್ಯಾಜ್ಯ ತುಂಬಿರುವ ಬಗ್ಗೆ ನಿರ್ಲಕ್ಷ ತೋರಿದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ ಸ್ಥಳೀಯ ರೈತರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತೀವ್ರ ತರಾಟೆಗೆ ತೆಗೆದುಕೊಂಡರು.
ಈ ಸಮಸ್ಯೆಯ ಕುರಿತು ಗ್ರಾಮಸ್ಥರು ಮೂಡುಬೆಳ್ಳೆ ಗ್ರಾಪಂಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಾರಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಮತ್ತೆ ಸಮಸ್ಯೆ ಉಂಟಾಗುವ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಸ್ಥಳದಲ್ಲಿ ಜಮಾಯಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ನೀರಾವರಿ ಇಲಾಖೆಯ ಇಂಜಿನಿಯರ್ ಎಸ್.ಟಿ.ಗೌಡರನ್ನು ಕರೆಸಿ ಸಮಸ್ಯೆ ಬಗ್ಗೆ ತಿಳಿಹೇಳಿದರು.
ಇದಕ್ಕೆ ಸ್ಪಂದಿಸಿದ ಇಲಾಖಾಧಿಕಾರಿಗಳು ಅಣೆಕಟ್ಟಿನಲ್ಲಿ ತುಂಬಿರುವ ತ್ಯಾಜ್ಯಗಳನ್ನು ಕೂಡಲೇ ತೆಗೆದುಹಾಕಲು ಸಿಬ್ಬಂದಿಗೆ ಸೂಚನೆ ನೀಡಿದರು. ಎರಡು ದಿನದೊಳಗಾಗಿ ಈ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಎಸ್.ಟಿ.ಗೌಡ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಸಂತೋಷ್ ಶೆಟ್ಟಿ ಪಂಜಿಮಾರ್, ಕೃಷಿಕರಾದ ರಾಘುಶೆಟ್ಟಿ, ಅರುಣ್ ಶೆಟ್ಟಿ, ಜಯ ದೇವಾಡಿಗ, ಪ್ರಕಾಶ್ ಶೆಟ್ಟಿ, ವಸಂತ ದೇವಾಡಿಗ, ಚಾರ್ಲಿ, ನಳಿನಿ ಶೆಟ್ಟಿ, ಕೃಷಿಕೂಲಿ ಕಾರ್ಮಿಕರಾದ ಕರ್ಣ ಶೆಟ್ಟಿ, ಬೇಬಿ, ಲಕ್ಷ್ಮೀ, ಸುಶೀಲಾ, ಅಪ್ಪಿ, ಜಾನಕಿ ಉಪಸ್ಥಿತರಿದ್ದರು.







