ಸೌಂದರ್ಯ ತಜ್ಞೆಯರಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ: ಡಾ.ಬ್ಲೋಸಂ

ಉಡುಪಿ, ಜೂ.26: ಸೌಂದರ್ಯ ತಜ್ಞೆಯರು ತಮ್ಮ ವೃತ್ತಿಯ ಮೂಲಕ ಮಹಿಳೆಯರಿಗೆ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದಿಲ್ಲಿಯ ಅಖಿಲ ಭಾರತ ಬ್ಯೂಟಿಶಿಯನ್ ಅಸೋಸಿ ಯೇಶನ್ ಸ್ಥಾಪಕಾಧ್ಯಕ್ಷೆ ಡಾ.ಬ್ಲೋಸಂ ಕೊಚೇರ್ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ ಮಹಿಳಾ ಸೌಂದರ್ಯ ತಜ್ಞೆಯರ ಸಂಘ ಹಾಗೂ ಮಂಗಳೂರು ಲೇಡಿಸ್ ಬ್ಯೂಟಿ ಅಸೋಸಿಯೇಶನ್‌ನ ಜಂಟಿ ಆಶ್ರಯದಲ್ಲಿ ಉಡುಪಿ ಕಿದಿಯೂರು ಹೊಟೇಲಿನ ಶೇಷಶಯನ ಹಾಲ್‌ನಲ್ಲಿ ಆಯೋಜಿಸಲಾದ ಮಹಿಳಾ ಸೌಂದರ್ಯ ತಜ್ಞೆಯರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಾನಸಿಕ ಒತ್ತಡದಿಂದ ಬಳಲಿ ಬರುವ ಗ್ರಾಹಕರಿಗೆ ಇವರು ವೈದ್ಯರಂತೆ ಚಿಕಿತ್ಸೆ ನೀಡುತ್ತಾರೆ. ಗ್ರಾಹಕರ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಅವರ ಸಮಸ್ಯೆಗಳನ್ನು ಆಲಿಸಿ ಸಮಾಲೋಚನೆ ನಡೆಸುವ ಕೆಲಸ ಕೂಡ ಮಾಡುತ್ತಾರೆ. ಒಬ್ಬರ ವ್ಯಕ್ತಿತ್ವ ಬದಲಾಯಿಸುವ ಶಕ್ತಿ ಸೌಂದರ್ಯ ತಜ್ಞೆಯರಿಗೆ ಇದೆ ಎಂದು ಅವರು ತಿಳಿಸಿದರು.
ಸೌಂದರ್ಯ ತಜ್ಞೆಯರು ಹೊಸ ಹೊಸ ವಿಚಾರಗಳನ್ನು ತಿಳಿದು ತಮ್ಮ ಜ್ಞಾನವನ್ನು ವೃದ್ಧಿಸಿ ಪರಿಣತರಾಗಬೇಕು. ಸರಕಾರ ಜಾರಿಗೆ ತಂದಿರುವ ಹಲವು ಸಮರ್ಪಕ ಯೋಜನೆಗಳ ಪ್ರಯೋಜನ ಪಡೆದು ತಮ್ಮ ಕೌಶಲ್ಯವನ್ನು ಹೆಚ್ಚಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ.ವನಿತಾ ಎನ್. ತೋರ್ವಿ ಮಾತನಾಡಿ, ಭಾರತೀಯ ಮಹಿಳೆಯರು ಸೌಂದರ್ಯಕ್ಕೆ ಬಹಳ ಪ್ರಸಿದ್ಧಿ. ಬಾಹ್ಯ ಹಾಗೂ ಆಂತರಿಕ ಸೌಂದರ್ಯವು ಮಹಿಳೆಯ ರನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಹೇಳಿದರು.
ಅಖಿಲ ಭಾರತ ಬ್ಯೂಟಿಶಿಯನ್ ಅಸೋಸಿ ಯೇಶನ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಾಣಿ, ಅಖಿಲ ಕರ್ನಾಟಕ ಬ್ಯೂಟಿ ಪಾರ್ಲರ್ಸ್ ಅಸೋಸಿಯೇಶನ್‌ನ ಸ್ಥಾಪಕಿ ಅನಿತಾ ಶರ್ಲಿ, ಮಂಗಳೂರು ಲೇಡಿಸ್ ಬ್ಯೂಟಿ ಪಾರ್ಲರ್ ಅಸೋಸಿಯೇಶನ್ ಅಧ್ಯಕ್ಷೆ ಸೋನಿ ಡಿಲೀಮಾ, ಜಿಲ್ಲಾ ಸಂಘದ ಉಪಾಧ್ಯಕ್ಷೆ ಲತಾ ವಾದಿರಾಜ ಉಪಸ್ಥಿತರಿದ್ದರು. ಸಂಘದ ಜಿಲ್ಲಾಧ್ಯಕ್ಷೆ ಮರಿಯಾ ಮೋಲಿ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಪೌಲಿನ್ ಕ್ರಾಸ್ತಾ ಸ್ವಾಗತಿಸಿದರು. ಸಂಘದ ಜಿಲ್ಲಾ ಕಾರ್ಯದರ್ಶಿ ವೇದಾ ಎಸ್. ಸುವರ್ಣ ವಂದಿಸಿದರು. ಗೀತಾ ದಯಾನಂದ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.







