ಚರ್ಚ್ ಸಲಿಂಗಿಗಳಲ್ಲಿ ಕ್ಷಮೆ ಯಾಚಿಸಬೇಕು: ಪೋಪ್ ಫ್ರಾನ್ಸಿಸ್

ವ್ಯಾಟಿಕನ್ ಸಿಟಿ, ಜೂ.27: ಸಲಿಂಗಕಾಮಿಗಳನ್ನು ನಡೆಸಿಕೊಂಡ ರೀತಿಗೆ ಸಂಬಂಧಿಸಿದಂತೆ ಕ್ರಿಶ್ಚಿಯನ್ನರು ಹಾಗೂ ರೋಮನ್ ಕ್ಯಾಥೊಲಿಕ್ ಚರ್ಚ್ ಅವರ ಕ್ಷಮೆ ಯಾಚಿಸಬೇಕು ಎಂದು ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಸೂಚಿಸಿದ್ದಾರೆ.
ಅರ್ಮೇನಿಯಾ ಭೇಟಿಯಿಂದ ರೋಮ್‌ಗೆ ವಾಪಸ್ಸಾಗುವ ವೇಳೆ ವಿಮಾನದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಚರ್ಚ್‌ಗಳು ಮಹಿಳೆಯರನ್ನು ನಡೆಸಿಕೊಂಡ ಬಗ್ಗೆ, ಬಾಲಕಾರ್ಮಿಕ ಪದ್ಧತಿಯ ಬಗ್ಗೆ ಕುರುಡುತನ ಪ್ರದರ್ಶಿಸಿದ ಬಗ್ಗೆ ಹಾಗೂ ಹಲವು ಶಸ್ತ್ರಾಸ್ತ್ರಗಳನ್ನು ಹೊಂದಲು ಅವಕಾಶ ನೀಡಿದ್ದಕ್ಕೆ ಕ್ಷಮೆ ಯಾಚಿಸಬೇಕು ಎಂದು ಅಭಿಪ್ರಾಯಪಟ್ಟರು.
ಚರ್ಚ್‌ಗಳು ಸಲಿಂಗಿಗಳ ಕ್ಷಮೆ ಯಾಚಿಸುವಂತೆ ಜರ್ಮನ್ ರೋಮನ್ ಕ್ಯಾಥೊಲಿಕ್ ಕೆಥಡ್ರೆಲ್ ಆಗ್ರಹಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೋಪ್, ಆ ಆಗ್ರಹಕ್ಕೆ ದನಿಗೂಡಿಸಿದರು. ಫ್ಲೋರಿಡಾದ ಒರ್ಲ್ಯಾಂಡೊ ಸಲಿಂಗಿಗಳ ಕ್ಲಬ್‌ನಲ್ಲಿ 49 ಮಂದಿಯನ್ನು ಹತ್ಯೆ ಮಾಡಿದ ಬಗ್ಗೆ ತುರ್ತು ಕ್ಷಮೆ ಕೋರುವ ಅಗತ್ಯವಿದೆಯಲ್ಲವೇ ಎಂಬ ಪ್ರಶ್ನೆಗೆ, ಪೋಪ್ ಅವರ ವಿಷಾದದ ನೋಟವೇ ಉತ್ತರವಾಗಿತ್ತು.
ಚರ್ಚ್‌ಗಳು, ಸಲಿಂಗಕಾಮ ಪಾಪವಲ್ಲ ಎಂದು ಬೋಧಿಸುತ್ತವೆ. ಆದರೆ ಸಲಿಂಗಕಾಮ ಹಾಗೂ ಸಲಿಂಗಿಗಳು ಪರಿಶುದ್ಧರಾಗಿರಬೇಕು ಎಂದು ಪೋಪ್ ಅಭಿಪ್ರಾಯಪಟ್ಟರು.







