ಕಾಸರಗೋಡು: ಬಾವಿಗೆ ಬಿದ್ದು ವ್ಯಕ್ತಿ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು
ಕೊಲೆ ಶಂಕೆ ವ್ಯಕ್ತಪಡಿಸಿದ ಪೊಲೀಸರು; ಓರ್ವ ವಶಕ್ಕೆ

ಕಾಸರಗೋಡು, ಜೂ.27: ಪೆರ್ಲ ಬಜಕೂಡ್ಲುವಿನ ಸುಂದರ ( 41) ಎಂಬವರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಹೊಸ ತಿರುವು ಪಡೆದು ಕೊಂಡಿದೆ. ಇದು ಕೊಲೆ ಪ್ರಕರಣ ಎನ್ನುವ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕಾಡು ಪ್ರಾಣಿಗಳ ದಾಳಿಗೆ ಅಳವಡಿಸಿದ್ದ ವಿದ್ಯುತ್ ಬೇಲಿ ತುಳಿದು ಮೃತಪಟ್ಟ ಸುಂದರ ಮೃತದೇಹವನ್ನು ಬಾವಿಗೆ ಎಸೆದಿರುವುದಾಗಿ ಬದಿಯಡ್ಕ ಪೊಲೀಸರಿಗೆ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಪಟ್ಟಂತೆ ಬಜಕೂಡ್ಲುವಿನ ರಾಮ ನಾಯಕ್ (52)ಎಂಬಾತ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಕಾಲು ಜಾರಿ ಬಾವಿಗೆ ಬಿದ್ದಿರಬಹುದು ಎಂಬ ಸಂಶಯವನ್ನು ಆರಂಭದಲ್ಲಿ ಪೊಲೀಸರು ವ್ಯಕ್ತಪಡಿಸಿದ್ದರು. ಮರಣೋತ್ತರ ಪರೀಕ್ಷಾ ವರದಿಯು ಸತ್ಯಾಸತ್ಯತೆ ಬಯಲಿಗೆ ಬರಲು ಕಾರಣವಾಗಿದೆ.
ಜೂನ್ 19ರಿಂದ ಸುಂದರ ನಾಪತ್ತೆಯಾಗಿದ್ದರು. ನಾಪತ್ತೆ ಕುರಿತು ಮನೆಯವರು ಬದಿಯಡ್ಕ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಈ ನಡುವೆ ಜೂ. 21 ರಂದು ಬಾವಿಯಲ್ಲಿ ರಾಮ ನಾಯಕ್ ರ ಕೃಷಿ ಸ್ಥಳದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರ ಬಹುದು ಎಂದು ಪೊಲೀಸರು, ಸ್ಥಳೀಯರು ಮತ್ತು ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆಯಿಂದ ವಿದ್ಯುತ್ ಶಾಕ್ ತಗಲಿ ಮೃತಪಟ್ಟಿರುವುದಾಗಿ ಕಂಡುಬಂದಿದ್ದು, ಮೃತದೇಹವನ್ನು ಬಾವಿಗೆ ಎಸೆದಿರಬಹುದು ಎಂದು ಶಂಕಿಸಲಾಗಿದೆ.
ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ಬೇಲಿಯಿಂದ ಶಾಕ್ ತಗಲಿ ಸುಂದರ ಮೃತಪಟ್ಟಿದ್ದು, ಕೃತ್ಯವನ್ನು ಮರೆ ಮಾಚಲು 300 ಮೀಟರ್ ದೂರದ ಬಾವಿಗೆ ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ರಾಮ ನಾಯಕ್ರ ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.







