ಕಲಬುರಗಿಯಲ್ಲಿ ಕಿರುಕುಳಕ್ಕೊಳಗಾದ ಅಶ್ವತಿಯನ್ನು ದತ್ತು ಪಡೆದ ಜೆಡಿಟಿ ಇಸ್ಲಾಂ ಟ್ರಸ್ಟ್
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಟಣೆ

ಕೋಝಿಕ್ಕೋಡ್, ಜೂನ್ 27: ಕಲಬುರಗಿ ನರ್ಸಿಂಗ್ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿನಿಯರಿಂದಲೇ ಕ್ರೂರವಾಗಿ ಕಿರುಕುಳಕ್ಕೊಳಗಾದ ಅಶ್ವತಿ ಆ ನೋವನ್ನು ನಿಧಾನವಾಗಿ ಮರೆಯಬಹುದು. ಹೆಚ್ಚು ಆಶೆ ಪಟ್ಟು ಸೇರಿದ್ದ ನರ್ಸಿಂಗ್ ವಿದ್ಯಾಭ್ಯಾಸವೂ ಅರ್ಧದಾರಿಯಲ್ಲಿ ಸ್ಥಗಿತವಾಗುತ್ತದೆಯೆಂದು ಹೆದರಬೇಕಾಗಿಲ್ಲ. ಕೋಝಿಕ್ಕೋಡ್‌ನ ವೆಳ್ಳಿಮಾಡುಕುನ್ನು ಜೆಡಿಟಿ ಇಸ್ಲಾಂ ಟ್ರಸ್ಟ್ ಅಶ್ವತಿಯನ್ನು ದತ್ತು ಪಡೆದಿದೆ.
ರವಿವಾರ ತಿರುವನಂತಪುರಂನಲ್ಲಿ ನಡೆದ ರಾಜ್ಯಮಟ್ಟದ ಮಾದಕ ವಸ್ತು ವಿರೋಧಿ ದಿನಾಚರಣೆ ಸಮಾರಂಭದಲ್ಲಿ ಈವಿಷಯವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧಿಕೃತವಾಗಿ ಈ ಪ್ರಕಟಿಸಿದ್ದಾರೆ. ಇನ್ನು ಅಶ್ವತಿಯ ಮುಂದಿನ ಚಿಕಿತ್ಸೆ, ವಿದ್ಯಾಭ್ಯಾಸ ವಾಸ್ತವ್ಯ, ಸೌಕರ್ಯ ಎಲ್ಲವನ್ನೂ ಜೆಡಿಟಿ ನೋಡಿಕೊಳ್ಳಲಿದೆ. ಹೆಚ್ಚು ಅಂಕ ಪಡೆದು ಪಾಸಾದರೆ ಕೆಲಸವನ್ನೂ ನೀಡುವ ಭರವಸೆಯನ್ನು ಅಶ್ವತಿಗೆ ಜೆಡಿಟಿ ನೀಡಿದೆ. ಕಲಬುರ್ಗಿಯ ಅಲ್‌ಕಮರ್ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಹಿರಿಯ ವಿದ್ಯಾರ್ಥಿನಿಯರಿಂದ ಅಶ್ವತಿ ಕ್ರೂರವಾಗಿ ಕಿರುಕುಳಕ್ಕೊಳಗಾಗಿದ್ದಳು. ನಂತರ ಕೋಝಿಕ್ಕೋಡ್ ಮೆಡಿಕಲ್ ಕಾಲೇಜ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ಜೆಡಿಟಿ ಇಸ್ಲಾಂ ಟ್ರಸ್ಟ್ ಕಾರ್ಯದರ್ಶಿ ಸಿ.ಪಿ. ಕುಂಞಿಮುಹಮ್ಮದ್ ಅರಿತುಕೊಂಡಿದ್ದರು. ಮಾದಕವಸ್ತು ವಿರೋಧಿ ಕಾರ್ಯಕ್ರಮದ ಪ್ರಯುಕ್ತ ಜೆಡಿಟಿ ಟ್ರಸ್ಟ್‌ನ ಅಧೀನದಲ್ಲಿರುವ ಜೆಡಿಟಿ ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜಿಗೆ ಲಭಿಸಿದ ಪ್ರಶಸ್ತಿಯನ್ನುಪಡೆಯಲು ಸಮಾರಂಭಕ್ಕೆ ಬಂದಿದ್ದ ಅವರು ಅಶ್ವತಿಯನ್ನು ದತ್ತುಪಡೆಯುವ ವಿಚಾರವನ್ನು ಮುಖ್ಯಮಂತ್ರಿ ಗೆ ಲಿಖಿತವಾಗಿ ಪತ್ರಕೊಟ್ಟು ತಿಳಿಸಿದರು. ಈ ವಿಚಾರವನ್ನು ಮುಖ್ಯಮಂತ್ರಿ ಸಮಾರಂಭದಲ್ಲಿಯೇ ಪ್ರಕಟಿಸಿದ್ದಾರೆ. ಜೆಡಿಟಿ ನರ್ಸಿಂಗ್ ಕಾಲೇಜ್‌ನಲ್ಲಿಯೇ ಅಶ್ವತಿಗೆ ನರ್ಸಿಂಗ್ ಕಲಿಯಲು ಅವಕಾಶ ಮಾಡಿಕೊಡಲಾಗುವುದೆಂದು ಜೆಡಿಟಿ ಕಾರ್ಯದರ್ಶಿ ಸಿ.ಪಿ. ಕುಂಞಿಮುಹಮ್ಮದ್ ಹೇಳಿದ್ದಾರೆಂದು ತಿಳಿದು ಬಂದಿದೆ.





