ಕಟ್ಟಡ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ವತಿಯಿಂದ ಧರಣಿ

ಮಂಗಳೂರು, ಜೂ.27: ಕಟ್ಟಡ ಕಾರ್ಮಿಕರ ಸಮಸ್ಯೆಯನ್ನು ಇನ್ನು ಮೂರು ದಿನಗಳೊಳಗೆ ಪರಿಹರಿಸದಿದ್ದರೆ ಅನಿರ್ದಿಷ್ಠಾವಧಿ ಸತ್ಯಾಗ್ರಹವನ್ನು ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಎಚ್ಚರಿಸಿದ್ದಾರೆ.
ಅವರು ಇಂದು ದ.ಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ನಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಸಾಮೂಹಿಕ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದರು.
ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ 2011, 12, 13ರಲ್ಲಿ ಬಾಕಿ ಇರುವ ಸವಲತ್ತುಗಳನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು. 2011, 2012, 2013ರ ಸಾಲಿನ ಅರ್ಹ ಫಲಾನುಭವಿಗಳು ವಿದ್ಯಾರ್ಥಿ ವೇತನಕ್ಕಾಗಿ, ಮದುವೆ ಸಹಾಯಧನಕ್ಕಾಗಿ, ಅಪಘಾತ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅವರಿಗೆ ಸವಲತ್ತುಗಳ ನಿರಾಕರಣೆಯಾಗಿದೆ. ಇಂತಹ ಹಲವು ಸಮಸ್ಯೆಗಳಿದ್ದರೂ ಇಲಾಖೆ ಅದನ್ನು ಸರಿಪಡಿಸುವಲ್ಲಿ ವಿಫಲವಾಗಿದೆ ಎಂದು ಅವರು ಆಪಾದಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್‌ನ ಮುಖಂಡರುಗಳಾದ ಬಿ.ಎಂ.ಭಟ್, ಸುನಿಲ್‌ಕುಮಾರ್ ಬಜಾಲ್, ಶಿವಕುಮಾರ್, ಸದಾಶಿವದಾಸ್, ಯು. ಜಯಂತ ನಾಕ್, ಭಾರತಿ ಬೋಳಾರ, ರವಿಚಂದ್ರ ಕೊಂಚಾಡಿ, ದಯಾನಂದ ಶೆಟ್ಟಿ, ಹಂಝ ,ಯೋಗೀಶ್ ಜಪ್ಪಿನಮೊಗರು, ಸಂತೋಷ್, ರವಿಚಂದ್ರ ಕೊಂಚಾಡಿ, ಅಶೋಕ್ ಶ್ರೀಯಾನ್, ಪ್ರೇಮನಾಥ, ದಿನೇಶ್ ಶೆಟ್ಟಿ, ಶಿವರಾಮ ಗೌಡ, ಬಿಜು ಆಗಸ್ತಿನ್, ಲೋಕೇಶ್, ಕೆ.ಪಿ. ಜೋನಿ ಸಂತೋಷ್ ಶಕ್ತಿನಗರ ಮೊದಲಾದವರು ಉಪಸ್ಥಿತರಿದ್ದರು.