ಸುಳ್ಯ: ಲಾರಿ ಮೇಲೆ ಮರ ಬಿದ್ದು ಚಾಲಕ ಮೃತ್ಯು

ಸುಳ್ಯ, ಜೂ.27: ಚಲಿಸುತ್ತಿದ್ದ ಲಾರಿ ಮೇಲೆ ಮರ ಉರುಳಿ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಸುಳ್ಯದ ಓಡಬಾಯಿಯಲ್ಲಿ ನಡೆದಿದೆ.
ಪುತ್ತೂರು ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಲಾರಿ ಓಡಬಾಯಿ ಸಮೀಪಿಸುತ್ತಿದ್ದಂತೆ ರಸ್ತೆ ಬದಿ ಇದ್ದ ಬೃಹತ್ ಗಾತ್ರದ ಹಲಸಿನ ಮರವೊಂದು ಲಾರಿ ಮೇಲೆ ಬುಡ ಸಮೇತ ಉರುಳಿ ಬಿತ್ತು. ಸರಿಯಾಗಿ ಕ್ಯಾಬಿನ್ ಮೇಲೆಯೇ ಉರುಳಿದ್ದರಿಂದ ಲಾರಿಯೊಳಗೆ ಸಿಲುಕಿದ ಚಾಲಕ ಮಹಮ್ಮದ್ ಸ್ಥಳದಲ್ಲೇ ಮೃತಪಟ್ಟರೆ, ಕ್ಲೀನರ್ ಸವಾದ್ ಗಂಭೀರವಾಗಿ ಗಾಯಗೊಂಡರು.
ಸ್ಥಳೀಯರು ಸವಾದ್‌ರನ್ನು ರಕ್ಷಿಸಿ ಆಸ್ಪತ್ರೆಗೆ ಕೊಂಡೊಯ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿಗೆ ಕೊಂಡೊಯ್ಯಲಾಗಿದೆ. ಮುಹಮ್ಮದ್‌ರ ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದ ಪೋಸ್ಟ್ ಮಾರ್ಟಂ ಬಳಿಕ ಮನೆಯವರಿಗೆ ಒಪ್ಪಿಸಲಾಯಿತು.
ಮುಹಮ್ಮದ್ ಕಾಸರಗೋಡಿನ ಪಳ್ಳತ್ತೂರಿನವರಾಗಿದ್ದು, ಸವಾದ್ ಇವರ ಕಿರಿಯ ಸಹೋದರ. ಹಲಸಿನ ಮರ ಉರುಳಿ ಬಿದ್ದಾಗ ಅದರಡಿಗೆ ಬಿದ್ಯುತ್ ತಂತಿಗಳು ಕೂಡಾ ಸಿಲುಕಿದ್ದು, ನಾಲ್ಕು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಲಾರಿಯಲ್ಲಿ ಇನ್ನೊಬ್ಬರು ಕೂಡಾ ಪ್ರಯಾಣಿಸುತ್ತಿದ್ದು, ಅವರು ಪೈಚಾರಿನಲ್ಲಿ ಇಳಿದಿದ್ದರು. ಲಾರಿಯ ಕ್ಯಾಬಿನ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕ್ರೇನ್ ಬಳಸಿ ಗಾಯಾಳುಗಳನ್ನು ಹೊರಗೆ ತೆಗೆಯಲಾಗಿತ್ತು. ಸುಮಾರು ಒಂದು ಗಂಟೆ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು. ಮರ ತೆರವುಗೊಳಿಸಿದ ನಂತರ ರಸ್ತೆ ಸಂಚಾರ ಸುಗಮಗೊಂಡಿತು. ಘಟನಾಸ್ಥಳಕ್ಕೆ ಶಾಸಕ ಅಂಗಾರ ಸಹಿತ ಗಣ್ಯರು ಭೇಟಿ ನೀಡಿದ್ದಾರೆ.
ಹಣ್ಣು ವ್ಯಾಪಾರಿ ಪವಾಡಸದೃಶ ಪಾರು
ಇದೇ ಹಲಸಿನ ಮರದಡಿಯಲ್ಲಿ ಸುಂದರ ಎಂಬವರು ಹಲಸಿನ ಹಣ್ಣು ಮಾರುತ್ತಿದ್ದು, ಮರ ಬೀಳುವ ಶಬ್ದ ಕೇಳಿ ಅಪಾಯ ಅರಿತ ಅವರು ಓಡಿ ಹೋದದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬೀಳುವ ಕುರಿತು ಅವರು ಲಾರಿ ಚಾಲಕನಿಗೂ ಸಂಜ್ಞೆ ಮಾಡಿದ್ದು, ವೇಗದಲ್ಲಿದ್ದ ಲಾರಿ ನಿಯಂತ್ರಣಕ್ಕೆ ಬಾರದೇ ಮುನ್ನುಗಿದ್ದು, ನಿಧಾನವಾಗಿ ಉರುಳಿದ ಮರ ಲಾರಿಯ ಕ್ಯಾಬೀನ್ ಮೇಲೆ ಬಿದ್ದಿದೆ. ಲಾರಿಯ ಹಿಂದಿನಿಂದ ಸರಕಾರಿ ಬಸ್ ಕೂಡಾ ಬರುತ್ತಿದ್ದು, ವ್ಯಾಪಾರಿಯ ಸಂಜ್ಞೆಗೆ ಸ್ಪಂದಿಸಿದ ಬಸ್ ಚಾಲಕ ಬಸ್ ನಿಲ್ಲಿಸಿದ್ದಾನೆ.







