ಬಾಳಿಗಾ ಕುಟುಂಬದಿಂದ ಕಮಿಷನರ್‌ಗೆ ಅಭಿನಂದನೆ
.jpg)
ಮಂಗಳೂರು, ಜೂ. 27: ಮಾರ್ಚ್ 21ರಂದು ನಡೆದ ಆರ್‌ಟಿಐ ಕಾರ್ಯಕರ್ತ ವಿನಾಯಕ ಪಿ.ಬಾಳಿಗಾ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಮೋ ಬ್ರಿಗೇಡ್‌ನ ಸಂಸ್ಥಾಪಕ ನರೇಶ್ ಶೆಣೈ ಸಹಿತ ಇತರ ಆರೋಪಿಗಳನ್ನು ಬಂಧಿಸುವಲ್ಲಿ ಮಾಡಿರುವ ಪ್ರಾಮಾಣಿಕ ಪ್ರಯತ್ನಕ್ಕೆ ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್‌ರಿಗೆ ಅವರ ಕಚೇರಿಯಲ್ಲಿ ಬಾಳಿಗಾ ಕುಟುಂಬದ ಸದಸ್ಯರು ಹಾಗೂ ನಾಗರಿಕರು ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಮಿಷನರ್ ಚಂದ್ರಶೇಖರ್, ಪ್ರಕರಣದ ಆರೋಪಿಗಳ ಬಂಧನಕ್ಕಾಗಿ ಪೊಲೀಸ್ ತಂಡ ಉತ್ತಮ ಕೆಲಸ ಮಾಡಿದೆ. ನರೇಶ್ ಶೆಣೈನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ವೈಜ್ಞಾನಿಕ ರೀತಿಯಲ್ಲಿ ತನಿಖೆಯನ್ನು ಕೈಗೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮೃತ ಬಾಳಿಗಾ ಅವರ ಸಹೋದರಿಯರಾದ ಶ್ವೇತಾ ಎಂ.ಪೈ, ಅನುರಾಧಾ ಬಾಳಿಗಾ, ದತ್ತಾತ್ರೇಯ ಭಟ್, ವಾಮನ ಪೈ, ವಿಚಾರವಾದಿ ಸಂಘಟನೆಯ ರಾಷ್ರೀಯ ಅಧ್ಯಕ್ಷ ನರೇಂದ್ರ ನಾಕ್, ಡಿಎಸ್‌ಎಸ್‌ನ ಎಂ.ದೇವದಾಸ್, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಎಐವೈಎಫ್‌ನ ಕರುಣಾಕರ್, ರಘು ಎಕ್ಕಾರು, ಸಂತೋಷ್ ಬಜಾಲ್, ನಿತಿನ್ ಕುತ್ತಾರ್, ಸಾಮಾಜಿಕ ಕಾರ್ಯಕರ್ತ ರೆನ್ನಿ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.





