ತ್ರಾಸಿ ದುರಂತದಲ್ಲಿ ಮಡಿದ ಪುಟಾಣಿಗಳಿಗೆ ಸಂತಾಪ

ಮಂಗಳೂರು, ಜೂ.27: ಐಸಿವೈಎಂ ಮತ್ತು ಕೆಥೊಲಿಕ್ ಸಭಾ ಎಪಿಸ್ಕೋಪಲ್ ಸಿಟಿ ವಲಯದ ವತಿಯಿಂದ ಕುಂದಾಪುರದ ತ್ರಾಸಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಡಿದ 8 ಮಕ್ಕಳಿಗೆ ಸಂತಾಪ ಸಭೆ ಇಂದು ನಗರದ ಮಿಲಾಗ್ರಿಸ್ ಜುಬಿಲಿ ಹಾಲ್‌ನಲ್ಲಿ ನಡೆಯಿತು.
ಮಡಿದ ಮಕ್ಕಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಮಂಗಳೂರು ಬಿಷಪ್ ಅ.ವಂ. ರೆ.ಡಾ.ಅಲೋಶಿಯಸ್ ಪೌಲ್ ಡಿಸೋಜ, ಪಾಶ್ಚಿಮಾತ್ಯ ದೇಶಗಳಲ್ಲಿ ಶಾಲಾ ಮಕ್ಕಳು ಶಾಲೆಯಿಂದ ಹೊರಬಂದ ಸಂದರ್ಭದಲ್ಲಿ ಅಲ್ಲಿ ಸೇವೆ ಸಲ್ಲಿಸುವ ಸ್ವಯಂಸೇವಕರು ಅವರನ್ನು ರಸ್ತೆ ದಾಟಿಸುವಂತಹ ಕಾರ್ಯ ಮಾಡುತ್ತಾರೆ. ವಿದೇಶಗಳಲ್ಲಿ ಮಕ್ಕಳ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ನಮ್ಮಲ್ಲಿ ಅಂತಹ ಚಿಂತನೆಗಳು ಇನ್ನೂ ಮೂಡಿಬಂದಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಮುಂದೆ ಇಂತಹ ಘಟನೆಗಳು ನಡೆಯದಂತೆ ಎಲ್ಲರೂ ಎಚ್ಚರವಹಿಸಬೇಕು. ಮಕ್ಕಳ ವಿಚಾರದಲ್ಲಿ ಸಾಕಷ್ಟು ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಎಂ.ಪಿ.ನೊರೊನ್ಹ ನೇತೃತ್ವದಲ್ಲಿ ಪ್ರಾರ್ಥನಾ ವಿಧಿ ನೆರವೇರಿಸಲಾಯಿತು.
ಸಭೆಯಲ್ಲಿ ಧರ್ಮಪ್ರಾಂತದ ಶ್ರೇಷ್ಠ ಧರ್ಮಗುರು ರೆ.ಫಾ.ಡೆನ್ನಿಸ್ ಮೊರಾಸ್, ರೊಸಾರಿಯೊ ಕೆಥೆಡ್ರಲ್‌ನ ಪ್ರ.ಧರ್ಮಗುರು ಫಾ.ಜೆ.ಬಿ.ಕ್ರಾಸ್ತಾ, ಕೆಥೊಲಿಕ್ ಸಭಾದ ನಿಕಟಪೂರ್ವ ಅಧ್ಯಕ್ಷ ಅನಿಲ್ ಲೋಬೊ, ಫೋರ್ವಿಂಡ್ಸ್ ನಿರ್ದೇಶಕ ಇ.ಫೆರ್ನಾಂಡಿಸ್, ಕೆಥೊಲಿಕ್ ಸಭಾ ಮಂಗಳೂರು ವಲಯ ಅಧ್ಯಕ್ಷ ಸ್ಟೀವನ್ ರೊಡ್ರಿಗಸ್, ಐಸಿವೈಎಂ ಅಧ್ಯಕ್ಷ ಲಿಯೋನ್ ಸಲ್ದಾನ, ಮಿಲಾಗ್ರಿಸ್ ಚರ್ಚ್ ಪ್ರ.ಧರ್ಮಗುರು ರೆ.ಫಾ. ವಲೇರಿಯನ್ ಮೊದಲಾದವರು ಉಪಸ್ಥಿತರಿದ್ದರು.







