ಬ್ರೆಕ್ಸಿಟ್ ಚರ್ಚೆ ನಿಲ್ಲಿಸಿ; ನೈಜ ವಿಷಯಗಳತ್ತ ಗಮನ ಹರಿಸಿ
ಇಯು ಕಮಿಶನರ್ ಒತ್ತಾಯ

ಬರ್ಲಿನ್, ಜೂ. 27: ಹೂಡಿಕೆದಾರರನ್ನು ಕಾಡುತ್ತಿರುವ ಅನಿಶ್ಚಿತತೆಗೆ ಮಂಗಳ ಹಾಡುವುದಕ್ಕಾಗಿ ಐರೋಪ್ಯ ಒಕ್ಕೂಟದಿಂದ ಹೊರ ಹೋಗಲು (ಬ್ರೆಕ್ಸಿಟ್) ಬ್ರಿಟನ್ ಕ್ಷಿಪ್ರವಾಗಿ ಕಾರ್ಯತತ್ಪರವಾಗಬೇಕು ಎಂದು ಐರೋಪ್ಯ ಒಕ್ಕೂಟದ ಡಿಜಿಟಲ್ ಎಕಾನಮಿ ಕಮಿಶನರ್ ಸೋಮವಾರ ಹೇಳಿದ್ದಾರೆ.
ಐರೋಪ್ಯ ಒಕ್ಕೂಟದಿಂದ ಹೊರಬರುವ ಎರಡು ವರ್ಷಗಳ ಪ್ರಕ್ರಿಯೆಯು ಐರೋಪ್ಯ ಒಕ್ಕೂಟದ ಲಿಸ್ಬನ್ ಒಪ್ಪಂದದ 50ನೆ ವಿಧಿಗೆ ಬ್ರಿಟನ್ ಪ್ರಧಾನಿ ಚಾಲನೆ ನೀಡಿದಾಗ ಆರಂಭಗೊಳ್ಳುತ್ತದೆ.
ಬ್ರಿಟಿಶ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಮಂಗಳವಾರ ಬ್ರಸೆಲ್ಸ್‌ನಲ್ಲಿ ಐರೋಪ್ಯ ಒಕ್ಕೂಟದ ಇತರ 27 ದೇಶಗಳ ನಾಯಕರನ್ನು ಭೇಟಿಯಾದಾಗ ಇದನ್ನು ಮಾಡಬಹುದಾಗಿದೆ ಎಂದು ಒಕ್ಕೂಟದ ಅಧಿಕಾರಿಗಳು ಹೇಳಿದ್ದಾರೆ.
ಆದರೆ, ಜನಮತಗಣನೆಯಲ್ಲಿ ಒಕ್ಕೂಟದಿಂದ ಬ್ರಿಟನ್ ಹೊರಬರುವ ಪರವಾಗಿ ಮತ ಚಲಾವಣೆಯಾದ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಕ್ಯಾಮರೂನ್, ಅಕ್ಟೋಬರ್‌ನಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ ಹಾಗೂ ವಿಚ್ಛೇದನ ಪ್ರಕ್ರಿಯೆಯ ಉಸ್ತುವಾರಿಯನ್ನು ತನ್ನ ಉತ್ತರಾಧಿಕಾರಿ ನೋಡಿಕೊಳ್ಳಲಿದ್ದಾರೆ ಎಂದಿದ್ದಾರೆ.
ಕ್ಯಾಮರೂನ್‌ರ ಈ ನಿರ್ಧಾರಕ್ಕೆ ಐರೋಪ್ಯ ಒಕ್ಕೂಟದ ಡಿಜಿಟಲ್ ಎಕಾನಮಿ ಮತ್ತು ಸೊಸೈಟಿ ಕಮಿಶನರ್ ಗ್ವೆಂತರ್ ಒಟಿಂಗರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘‘ಪ್ರತಿ ದಿನದ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತು ಇತರ ಯುರೋಪಿಯನ್ ದೇಶಗಳಲ್ಲಿ ಬಂಡವಾಳ ಹೂಡಲು ಹೂಡಿಕೆದಾರರಿಗೆ ಕಷ್ಟವಾಗುತ್ತದೆ’’ ಎಂದು ‘ಡಾಶ್‌ಲ್ಯಾಂಡ್‌ಫಂಕ್ ಜರ್ಮನ್’ ರೇಡಿಯೊಗೆ ಒಟಿಂಗರ್ ಹೇಳಿದರು.
ಒಕ್ಕೂಟದಿಂದ ಹೊರ ಹೋಗುವ ತನ್ನ ನಿರ್ಧಾರವನ್ನು ಬ್ರಿಟನ್ ಹಿಂದಕ್ಕೆ ಪಡೆಯುವುದು ಸಂಶಯ ಎಂದು ಒಟಿಂಗರ್ ನುಡಿದರು. ಬ್ರಿಟನ್ ನಿರ್ಗಮನದಿಂದ ಉಂಟಾಗುವ ಬದಲಾವಣೆಯ ಬಗ್ಗೆ ಚರ್ಚಿಸುವ ಬದಲು, ಒಕ್ಕೂಟವನ್ನು ಬಲಪಡಿಸುವ ಬಗ್ಗೆ ಹಾಗೂ ವಲಸೆ ಬಿಕ್ಕಟ್ಟು ಮುಂತಾದ ನೈಜ ವಿಷಯಗಳ ಬಗ್ಗೆ ಗಮನ ಹರಿಸುವಂತೆ ಅವರು ಒಕ್ಕೂಟದ ಇತರ ದೇಶಗಳನ್ನು ಒತ್ತಾಯಿಸಿದರು.







