ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅನುಚಿತ ವರ್ತನೆ

ಬೆಂಗಳೂರು, ಜೂ. 27: ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ವಿಚಾರಣೆ ಎದುರಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಸೋಮವಾರ ಇಲ್ಲಿನ ಕರ್ನಾಟಕ ಲೋಕಾಯುಕ್ತ ಕಚೇರಿಗೆ ಹಾಜರಾಗಿದ್ದ ವೇಳೆ ಗಾಜಿನ ಪುಡಿ ಸುರಿದು ಅನುಚಿತವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿರುವ ಕರ್ನಾಟಕ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿದ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರು, ಪ್ರವೇಶ ದ್ವಾರದಲ್ಲಿದ್ದ ಸಿಬ್ಬಂದಿಗೆ ಲೋಕಾಯುಕ್ತ ಐಜಿ ಪ್ರಣಬ್ ಮೊಹಂತಿ ಹಾಗೂ ಎಸ್ಪಿಅಬ್ದುಲ್ ಅಹದ್ ಅವರು ಕಚೇರಿಯಲ್ಲಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಕಚೇರಿಯಲ್ಲಿ ಇರಬಹುದು ಎಂದು ಸಿಬ್ಬಂದಿ ತಿಳಿಸಿದ್ದಾರೆ.
ತದನಂತರ ಆವೇಶದಿಂದಲೇ ಇಬ್ಬರು ಅಧಿಕಾರಿಗಳ ಕೊಠಡಿ ಕಡೆ ಹೋದ ಕಪಿಲ್ ಮೋಹನ್, ಅಲ್ಲಿನ ಸಿಬ್ಬಂದಿಗೂ ಪ್ರಶ್ನಿಸಿದ್ದಾರೆ. ಆದರೆ, ಸಿಬ್ಬಂದಿ ಸಾಹೇಬರು ಕಚೇರಿಗೆ ಬಂದಿಲ್ಲ, ಸಭೆಯಿದೆ, ಹೊರಗಡೆ ಹೋಗಿದ್ದಾರೆ ಎಂದು ಉತ್ತರಿಸಿ, ಸರ್, ನೀವು ಇಲ್ಲೇ ಕುಳಿತುಕೊಳ್ಳಿ ಸ್ಪಲ್ಪ ಸಮಯದಲ್ಲಿಯೇ ಬರಬಹುದು ಎಂದಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಕಪಿಲ್ ಮೋಹನ್ ಮೊದಲಿಗೆ ಲೋಕಾಯುಕ್ತ ಗ್ರಾಮಾಂತರ ಎಸ್ಪಿಅಬ್ದುಲ್ ಅಹದ್ ಅವರ ಕೊಠಡಿ ಬಳಿ ತೆರಳಿ ಪೇಪರ್‌ನಲ್ಲಿ ತಂದಿದ್ದ ಗಾಜಿನ ಪುಡಿ ಸುರಿದಿದ್ದಾರೆ.
ಅದೇ ರೀತಿ, ಐಜಿ ಪ್ರಣಬ್ ಮೊಹಂತಿ ಅವರ ಕೊಠಡಿ ಬಾಗಿಲ ಬಳಿಯೂ ಗಾಜಿನ ಪುಡಿಯನ್ನು ಹಾಕಿ ತೆರಳಿದ್ದಲ್ಲದೆ, ಈ ಸಂಬಂಧ ಸಿಬ್ಬಂದಿ ಪ್ರಶ್ನಿಸಿದರೂ, ಯಾವುದೇ ಉತ್ತರ ನೀಡದೆ ಕೋಪದಿಂದಲೇ ಅಲ್ಲಿಂದ ತೆರಳಿದ್ದಾರೆ. ಇಂತಹ ಅನುಚಿತ ವರ್ತನೆಯಿಂದ ಲೋಕಾಯುಕ್ತ ಕಚೇರಿ ಸಿಬ್ಬಂದಿಯೂ ಆಂತಕಗೊಂಡಿದ್ದಲ್ಲದೆ, ಅಚ್ಚರಿಗೆ ಕಾರಣವಾಗಿದೆ.
ಈ ಎಲ್ಲ ದೃಶ್ಯಗಳನ್ನು ಲೋಕಾಯುಕ್ತ ಸಿಬ್ಬಂದಿಯೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ ಎನ್ನಲಾಗಿದ್ದು, ಇಬ್ಬರು ಅಧಿಕಾರಿಗಳು ಕಚೇರಿಗೆ ಆಗಮಿಸಿದ ಬಳಿಕ ಘಟನೆಯ ಬಗ್ಗೆ ವಿವರಿಸಿದ್ದಾರೆ, ಅಧಿಕಾರಿಗಳ ಸಮ್ಮುಖದಲ್ಲಿ ಗಾಜಿನ ಪುಡಿಯನ್ನು ತೆಗೆದಿದ್ದಾರೆ ಎಂದು ಹೇಳಲಾಗಿದೆ.
ಗೈರು ಆಗಿದ್ದರು: ಐಎಎಸ್ ಅಧಿಕಾರಿ ಕಪಿಲ್ ಮೋಹನ್ ವಿರುದ್ಧ ಲೋಕಾಯುಕ್ತದಲ್ಲಿರುವ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಜೂ.23ಕ್ಕೆ ಆಗಮಿಸಿ ಮಾಹಿತಿ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಕಪಿಲ್ ಮೋಹನ್ ಗೈರು ಹಾಜರಾಗಿದ್ದರು. ಈ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಮೋಹನ್ ಹಿನ್ನೆಲೆ: ಅಕ್ರಮ ಆಸ್ತಿಗಳಿಕೆ ಪ್ರಕರಣ ಸಂಬಂಧ ಸಿಐಡಿ ಹಾಗೂ ಆದಾಯ ತೆರಿಗೆ ಅಧಿಕಾರಿಗಳು ಕಪಿಲ್ ಮೋಹನ್ ಅವರ ಯಶವಂತಪುರದ ಗೋಲ್ಡನ್ ಗ್ರಾಂಡ್ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದ್ದರು. 4.5 ಕೋಟಿ ನಗದು, ಕೋಟ್ಯಂತರ ರೂ. ಬೆಲೆ ಬಾಳುವ ಚಿನ್ನಾಭರಣಗಳು, ಮಕ್ಕಳ ನೀಲಿ ಚಿತ್ರಗಳ ಸಿಡಿಗಳು ದೊರಕಿದ್ದವು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆ ಮಾಡಲಾಯಿತು.
ತನಿಖೆಗೆ ಆದೇಶ: ಅಬ್ದುಲ್ ಅಹದ್
ಕಪಿಲ್ ಮೋಹನ್ ಅವರು ಲೋಕಾಯುಕ್ತ ಐಜಿ ಪ್ರಣಬ್ ಮೊಹಂತಿ ಹಾಗೂ ತನ್ನ ಕಚೇರಿಗೆ ಬಂದು ಗಾಜಿನ ಪುಡಿಯನ್ನು ಹಾಕಿ ತೆರಳಿದ್ದಾರೆ ಎಂದು ಐಜಿ ಅವರ ಹಾಗೂ ತನ್ನ ಕಚೇರಿಯ ಸಿಬ್ಬಂದಿ ತನಗೆ ವರದಿ ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಲು ಇನ್‌ಸ್ಪೆಕ್ಟರ್ ದಯಾನಂದ್ ಅವರಿಗೆ ಸೂಚಿಸಿದ್ದೇನೆ. ಅವರು ಗಾಜಿನ ಪುಡಿಯನ್ನು ಹಾಗೂ ಕಚೇರಿಯ ಸಿಸಿ ಟಿವಿ ರೆಕಾರ್ಡಿಂಗ್ ಅನ್ನು ಪರಿಶೀಲಿಸುತ್ತಿದ್ದಾರೆ ಎಂದು ಲೋಕಾಯುಕ್ತ ಎಸ್ಪಿ ಅಬ್ದುಲ್ ಅಹದ್ ಅವರು ಹೇಳಿದ್ದಾರೆ.







