'ಸ್ವಾಮಿಯ' ಸಂದರ್ಶನದಲ್ಲಿ ಆಯ್ಕೆಯಾದ ಅರ್ನಬ್, ಬನ್ ಗಯಾ ಜಂಟಲ್ ಮ್ಯಾನ್ !

ಅರ್ನಬ್ ಗೋಸ್ವಾಮಿ ಇವತ್ತು ಎಲ್ಲರಿಗೂ ಸಿಹಿ ಹಂಚುತ್ತಾರೆ. ಅವರ ನ್ಯೂಸ್ ರೂಮಿನಲ್ಲಿ ಇವತ್ತು ಖಂಡಿತ ಸಂಭ್ರಮದ ವಾತಾವರಣ. ಇದು ಅವರಿಗೆ ಮಾತ್ರವಲ್ಲ ಇಡೀ ಟೈಮ್ಸ್ ನೌ ಚಾನಲ್ ಗೆ ಮರೆಯಲಾಗದ ದಿನ. ಏಕೆಂದರೆ ಇವತ್ತು ಅವರ ಬಾಸ್ ಪಾಸ್ ಆಗಿದ್ದಾರೆ. ಅದೂ ಫರ್ಸ್ಟ್ ಕ್ಲಾಸ್ ನಲ್ಲೇ.
ತಮ್ಮ ಜೀವಮಾನದ ಬಹುದೊಡ್ಡ ಸಂದರ್ಶನವನ್ನು ಅರ್ನಬ್ ಯಶಸ್ವಿಯಾಗಿ ಮುಗಿಸಿದ್ದಾರೆ. ಅತ್ಯುತ್ತಮ ಅಂಕ ಪಡೆದಿದ್ದಾರೆ. ' ಇಡೀ ದೇಶದ ' ಪರವಾಗಿ ಪ್ರಶ್ನೆ ಮತ್ತು ಉತ್ತರ ಎರಡನ್ನು ಕೇಳುವ, ಹೇಳುವ ಅರ್ನಬ್ ಸೋಮವಾರ ದೇಶದ ಪ್ರಧಾನಿ ನಡೆಸಿದ ತಮ್ಮ ಸಂದರ್ಶನವನ್ನು ಯಾವುದೇ ಅಳುಕಿಲ್ಲದೆ, ತುಂಬು ವಿಶ್ವಾಸದಿಂದ, ವಿನಯದಿಂದ , ತಾಳ್ಮೆಯಿಂದ ಎದುರಿಸಿ ಗೆದ್ದಿದ್ದಾರೆ. ಈ ದಿನಕ್ಕಾಗಿ ಅವರು ಇಷ್ಟು ವರ್ಷ ಟೈಮ್ಸ್ ನೌ ಸ್ಟುಡಿಯೋದಲ್ಲಿ ನಡೆಸಿದ ತಾಲೀಮು ಕೊನೆಗೂ ಅವರ ಕೈ ಹಿಡಿದಿದೆ. ಆ ತಾಲೀಮಿನ ಅವಧಿಯಲ್ಲಿ ಅವರ ಪ್ರಶ್ನೆಗಳಿಗೆ, ಉತ್ತರಗಳಿಗೆ, ಆರ್ಭಟಕ್ಕೆ, ಕೂಗಾಟಕ್ಕೆ ಬೆಲೆ ತೆತ್ತ ಅದೆಷ್ಟೋ ಜನರು ಇಂದು ಅರ್ನಬ್ ರ 'ವಿಧೇಯ ವಿದ್ಯಾರ್ಥಿ' ರೂಪ ನೋಡಿ ಕಣ್ತುಂಬಿಕೊಂಡಿದ್ದಾರೆ. ನಾವು ಮಾಡಿದ ತ್ಯಾಗ, ಕಳಕೊಂಡ ಮರ್ಯಾದೆ, ಎಳೆದುಕೊಂಡ ಅವಮಾನ ಎಲ್ಲಕ್ಕೂ ಇಂದು ಬೆಲೆ ಬಂತು , ನಮ್ಮ ಹುಡುಗ ಅರ್ನಬ್ ' ಸ್ವಾಮಿಯ ' ಸಂದರ್ಶನದಲ್ಲಿ ಪಾಸಾಗಿದ್ದಾನೆ ಎಂದು ಅವರೆಲ್ಲರೂ ಆನಂದ ತುಂದಿಲರಾಗಿದ್ದಾರೆ.
ಅಂತೂ ಇಂತೂ ಅರ್ನಬ್ ಬನ್ ಗಯಾ ಜಂಟಲ್ ಮ್ಯಾನ್
ಕಂಗ್ರ್ಯಾಟ್ಸ್ ಅರ್ನಬ್ !





