Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮುಂಗಾರು ಮಳೆ ಹನಿಗಳ ಸಿಂಚನ!

ಮುಂಗಾರು ಮಳೆ ಹನಿಗಳ ಸಿಂಚನ!

ರಮಝಾನ್ ಸಡಗರದಲ್ಲಿ ಮುಂಬೈ ನಗರ

ಶ್ರೀನಿವಾಸ್ ಜೋಕಟ್ಟೆಶ್ರೀನಿವಾಸ್ ಜೋಕಟ್ಟೆ27 Jun 2016 11:18 PM IST
share
ಮುಂಗಾರು ಮಳೆ ಹನಿಗಳ ಸಿಂಚನ!


 


ಮುಂಬೈ ಶಹರದಲ್ಲಿ ಮುಂಗಾರು ಮಳೆ ಹನಿಗಳ ಲೀಲೆ...

ಮುಂಬೈ ಮಳೆಗೆ ತನ್ನದೇ ಆದ ಸೌಂದರ್ಯವಿದೆ. ಮುಂಬೈ ಮಹಾನಗರಕ್ಕೆ ಕೊನೆಗೂ ಮಳೆಗಾಲ ಕಾಲಿಟ್ಟಿದೆ. ಬಿಸಿಲ ಝಳಕ್ಕೆ ಓಡಾಡಲು ತುಂಬಾ ಕಷ್ಟಪಡುತ್ತಿದ್ದ ಮುಂಬೈಕರ್ ಈಗ ಮಳೆಹನಿಗಳು ಸುರಿದು ಒಂದಿಷ್ಟು ತಂಪು ಅನುಭವಿಸುತ್ತಿದ್ದಾರೆ. ಇದರ ಜೊತೆಗೆ ಮಳೆ ಆರಂಭವಾಗುತ್ತಲೇ ಲೋಕಲ್ ರೈಲುಗಳ ಓಡಾಟದಲ್ಲೂ ಅಸ್ತವ್ಯಸ್ತತೆ ಕಾಣಿಸಲು ಶುರುವಾಗಿದೆ. ಒಮ್ಮೆ ಪಶ್ಚಿಮ ರೈಲ್ವೆ ಕೆಟ್ಟು ಹೋದರೆ, ಮತ್ತೊಮ್ಮೆ ಮಧ್ಯ ರೈಲ್ವೆಯ ಸಂಚಾರ ಕಿರಿಕಿರಿ ಹುಟ್ಟಿಸುತ್ತಿದೆ. ಈ ನಡುವೆ ಮಹಾನಗರ ಪಾಲಿಕೆಯ ಮಾನ್ಸೂನ್ ತಯಾರಿ ಎಷ್ಟು ನಡೆದಿದೆ ಎನ್ನುವುದರ ಗುಟ್ಟೂ ಒಂದೊಂದೇ ಹೊರಬೀಳುತ್ತಿದೆ. ಈ ಮಳೆಗಾಲದಲ್ಲಿ ಯಾವ ಯಾವ ರೋಗಗಳನ್ನು ಈ ಸೊಳ್ಳೆಗಳು ಹೊತ್ತುತರುವುದೋ ಎನ್ನುವುದು ಇನ್ನೊಂದು ಭಯ. ದಕ್ಷಿಣ ಮುಂಬೈಯ ನರೀಮನ್ ಪಾಯಿಂಟ್, ಮರೀನ್ ಡ್ರೈವ್‌ಗಳ ಸಮುದ್ರ ತೀರದ ರಸ್ತೆಗಳಲ್ಲಿ ಮಳೆ ಹನಿಗಳ ನಡುವೆ ಓಡಾಡುವ ಸೌಂದರ್ಯವನ್ನು ಸವಿಯಲೆಂದೇ ಇತ್ತ ಬರುವವರು ಬಹಳಷ್ಟಿದ್ದಾರೆ. ಮೊದಲ ಮಳೆಗೆ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕೂಡಾ ತನ್ನ ಪಾಲಿನ ಕೊಡುಗೆ ಕೊಟ್ಟಿದೆ.
 ಮುಂಬೈಯಲ್ಲಿ ಮಳೆಗಾಲದಲ್ಲಿ ಮರೀನ್ ಡ್ರೈವ್‌ನಿಂದ ಹಿಡಿದು ಮನೋರಿ ಬೀಚ್ ತನಕವೂ ಮಳೆಯ ಆನಂದ ಸವಿಯುವುದೊಂದು ಅನೇಕರಿಗೆ ಬಹುದಿನಗಳ ನಿರೀಕ್ಷೆ. ಬ್ಯಾಂಡ್ ಸ್ಟ್ಯಾಂಡ್‌ನ ರಸ್ತೆಗಳಲ್ಲಿ ನಡೆದಾಡಿದರೂ ಇಂತಹ ಮಜಾ ಸವಿಯಬಹುದು. ಕಾರ್ಟರ್ ರೋಡ್‌ನಲ್ಲೂ ಸಮುದ್ರದ ಅಲೆಗಳನ್ನು ವೀಕ್ಷಿಸುತ್ತಾ ರೊಮ್ಯಾಂಟಿಕ್ ವಾಕ್ ಮಾಡಬಹುದು. ಜುಹೂ ಚೌಪಾಟಿಯಲ್ಲಿ ಭೇಲ್‌ಪುರಿ ತಿನ್ನುತ್ತಾ ವಿಶಿಷ್ಟವಾದ ಖುಷಿ ಪ್ರಾಪ್ತಿಯಾಗಿಸಬಹುದು. ವರ್ಲಿ ಸೀಫೇಸ್‌ನ ಅಲೆಗಳು ತಾವೇನೂ ಕಮ್ಮಿ ಇಲ್ಲ ಎಂದು ಸಾರಿ ಹೇಳುತ್ತವೆ ಮಳೆಗಾಲದಲ್ಲಿ. ಇಲ್ಲಿ ಕೊಡೆಗಳು ಗಾಳಿ ಮಳೆಗೆ ಯಾವುದೇ ಪ್ರಯೋಜನ ನೀಡಲಾರವು. ಹಾಗಾಗಿ ಒದ್ದೆಯಾಗುತ್ತಲೇ ಮುಂಬೈ ಮಳೆಯ ವಿಶಿಷ್ಟ ಅನುಭವವನ್ನು ಪ್ರಾಪ್ತಿಯಾಗಿಸುತ್ತಾರೆ. ಇನ್ನು ತಂಡ ತಂಡವಾಗಿ ಮಳೆಯ ಖುಷಿ ಅನುಭವಿಸುವವರು ಮನೋರಿ ಬೀಚ್ ಅಥವಾ ಪವಾಯಿ ತೀರಗಳಲ್ಲಿ ಆನಂದ ಪಡೆಯಬಹುದು.

ಅದೇ ರೀತಿ ಗೇಟ್ ವೇ ಆಫ್ ಇಂಡಿಯಾದಿಂದ ಬೊರಿವಲಿಯ ಕನ್ಹೇರಿ ಕೇವ್ಸ್ ತನಕ ಪ್ರವಾಸ ಮಾಡುವವರೂ ಮಳೆಯ ಸೊಬಗು ಮತ್ತೊಂದು ರೀತಿಯಲ್ಲಿ ಅನುಭವಿಸಲು ಸಾಧ್ಯವಿದೆ. ಮಳೆಯಲ್ಲೂ ಗೇಟ್ ವೇ ಆಫ್ ಇಂಡಿಯಾದಲ್ಲಿ ಬೋಟ್‌ನಲ್ಲಿ ಕುಳಿತು ಆನಂದ ಸವಿಯಬಹುದು. ಹೆಚ್ಚು ಗಾಳಿ ಇದ್ದರೆ ಬೋಟ್ ಸವಾರಿ ಇರುವುದಿಲ್ಲ. ಆಗ ಗೇಟ್ ವೇಯಿಂದ ರೇಡಿಯೋ ಕ್ಲಬ್ ತನಕದ ರಸ್ತೆಯಲ್ಲಿ ತಾಜ್ ಹೊಟೇಲ್‌ನ್ನು ವೀಕ್ಷಿಸುತ್ತಾ ಮಳೆಯ ಸೊಬಗು ಆಸ್ವಾದಿಸಬಹುದು. ಅನೇಕರು ಬೊರಿವಿಲಿಯ ನ್ಯಾಶನಲ್ ಪಾರ್ಕ್‌ನ ಕನ್ಹೇರಿ ಗುಹೆಗಳನ್ನು ವೀಕ್ಷಿಸುವಲ್ಲಿ ಪ್ರಾಚೀನ ಶಿಲೆಗಳಿಗೆ ತಾಗಿಕೊಂಡು ಮಳೆಯ ಸೊಗಸನ್ನು ಕಣ್ಣಾರೆ ಅನುಭವಿಸಬಹುದು. ಶಹರದ ನರೀಮನ್ ಪಾಯಿಂಟ್ ಕ್ಷೇತ್ರದಲ್ಲಿ ಡಬಲ್ ಡೆಕ್ಕರ್ ಬಸ್ಸುಗಳಿಂದ ಮುಂಬೈ ದರ್ಶನದ ವ್ಯವಸ್ಥೆ ಇರುವುದು. ಕುಟುಂಬ ಸಹಿತ ಅನೇಕರು ಮಳೆಗಾಲದಲ್ಲಿ ಈ ಬಸ್ಸುಗಳಲ್ಲಿ ಕುಳಿತು ಮುಂಬೈ ದರ್ಶನ ಮಾಡುವವರಿದ್ದಾರೆ. ಹನಿ ಹನಿ ಮಳೆಗೆ ನೆನೆಯುತ್ತಾ ಮುಂಬೈಯ ಮಳೆಗಾಲದ ಸೌಂದರ್ಯ ವೀಕ್ಷಿಸಬಹುದಾಗಿದ್ದರೂ ಮುಸಲಧಾರೆ ಮಳೆಗೆ ಮಾತ್ರ ಸ್ವಲ್ಪಜಾಗೃತರಾಗಿರಬೇಕಾಗುತ್ತದೆ ಹಾಗೂ ಭಾರೀ ಮಳೆಯಿಂದ ರಕ್ಷಿಸಿಕೊಳ್ಳುವ ಸಾಧನಗಳೂ ಜೊತೆಗಿರಬೇಕಾಗುತ್ತದೆ. ಮುಂಬೈ ನಗರಕ್ಕೆ ಚೌಪಾಟಿಯದ್ದು ಬಹುದೊಡ್ಡ ಕೊಡುಗೆ ಇದೆ. ಚೌಪಾಟಿಯೇ ಮುಂಬೈಯನ್ನು ಸರಿಯಾದ ರೀತಿಯಲ್ಲಿ ಕಾಸ್ಮೋಪೊಲಿಟನ್ ನಗರವನ್ನಾಗಿಸುತ್ತದೆ. ಇಲ್ಲಿ ಬಡವ -ಶ್ರೀಮಂತ ಎಂಬ ಭೇದ ಇರುವುದಿಲ್ಲ. ಎಲ್ಲರಿಗೂ ತಮ್ಮ ತಮ್ಮ ಮಟ್ಟದಲ್ಲಿ ಇಲ್ಲಿನ ಆನಂದ ಸವಿಯಬಹುದು. ಹೀಗಿದ್ದೂ ಹವಾಮಾನ ಇಲಾಖೆಯ ಅಧಿಕಾರಿಗಳು ಸಮುದ್ರದಲ್ಲಿ ಭರತದ ದಿನಗಳನ್ನು ಪ್ರಕಟಿಸಿವೆ. ಅವುಗಳೆಂದರೆ ಜುಲೈ 4 ರಿಂದ 7 ಮತ್ತು 22 ರಿಂದ 24, ಆಗಸ್ಟ್ 2ರಿಂದ 4, ಆಗಸ್ಟ್ 19 ರಿಂದ 22 ಹೀಗೆ ಈ 14 ದಿನಗಳಲ್ಲಿ ಸಮುದ್ರ ತೀರಗಳಲ್ಲಿ ಸುತ್ತಾಡುವವರು ಎಚ್ಚರಿಕೆ ವಹಿಸಬೇಕಾಗುತ್ತದೆ.
* * *
ಮನಪಾ ರಸ್ತೆ ಹಗರಣ: ಹಲವರ ಬಂಧನ
ಮುಂಬಯಿ ಮನಪಾದ ಕುಖ್ಯಾತ ರಸ್ತೆ ಹಗರಣದಲ್ಲಿ ನಾಲ್ವರು ಗುತ್ತಿಗೆದಾರರನ್ನು ಮತ್ತು ಇಂಜಿನಿಯರ್‌ಗಳನ್ನು ಪೊಲೀಸರು ಬಂಧಿಸಿದರು. ಕಳೆದ ವಾರದಲ್ಲಿ ಪೊಲೀಸರು ಈ ಹಗರಣದಲ್ಲಿ ಹತ್ತು ಆಡಿಟರ್‌ಗಳನ್ನು ಬಂಧಿಸಿದ್ದರು. ಇವರೆಲ್ಲ ರಸ್ತೆ ಹಗರಣಗಳಿಗೆ ಸಂಬಂಧಿಸಿದ ಆಡಿಟ್‌ನ್ನು ತಪ್ಪಾಗಿ ಮಾಡಿದ್ದರು. ಈ ಹಗರಣ ಸುಮಾರು 432 ಕೋಟಿ ರೂಪಾಯಿಯದ್ದಾಗಿದೆ. ವಲಯ ಒಂದರ ಪೊಲೀಸ್ ಉಪಾಯುಕ್ತ (ಡಿಸಿಪಿ) ಡಾ. ಮನೋಜ್ ಶರ್ಮಾ ತಿಳಿಸಿದಂತೆ ಈ ನಾಲ್ವರು ಆರೋಪಿಗಳು ಬಿಎಂಸಿಯ ಪ್ರಮುಖ ಇಂಜಿನಿಯರ್, ಗುತ್ತಿಗೆದಾರರ ವತಿಯಿಂದ ಖಾತೆ ಮತ್ತು ದಸ್ತಾವೇಜುಗಳ ಮೇಲೆ ಹಸ್ತಾಕ್ಷರ ಮಾಡಿ ಬಿಎಂಸಿಯ ಹಣ ನುಂಗಿ ಹಾಕಿದ್ದರಂತೆ. ಮುಂಬೈ ಮಹಾನಗರ ಪಾಲಿಕೆಯ ರಸ್ತೆ ಹಗರಣದಲ್ಲಿ ಇಷ್ಟು ದೊಡ್ಡ ಬಂಧನ ಇದೇ ಮೊದಲ ಬಾರಿಗೆ ಆಗಿದೆ. ಶೀಘ್ರವೇ ಇನ್ನೂ ಕೆಲವರ ಬಂಧನ ಸಾಧ್ಯವಿದೆ. ಈ ಹಗರಣದಲ್ಲಿ ಮಹಾನಗರ ಪಾಲಿಕೆ ಮೊದಲೇ ತನ್ನ ಇಬ್ಬರು ವರಿಷ್ಠ ಇಂಜಿನಿಯರ್‌ಗಳನ್ನು ಅಮಾನತು ಮಾಡಿತ್ತು. ಬಂಧಿತ ಆಡಿಟರ್‌ಗಳು ರಸ್ತೆ ಹಗರಣದ ಗುತ್ತಿಗೆದಾರರ ಜೊತೆ ಸೇರಿದ್ದರು ಎಂದಿದ್ದಾರೆ ಡಿ.ಸಿ.ಪಿ ಡಾ. ಮನೋಜ್ ಶರ್ಮಾ.

ಮುಂಬೈಯಲ್ಲಿ ಮಳೆಗಾಲದಲ್ಲಿ ರಸ್ತೆಗಳಲ್ಲಿ ದೊಡ್ಡ ದೊಡ್ಡ ಹೊಂಡಗಳು ಬೀಳುವುದರಿಂದ ಹೆಚ್ಚಿನ ಸಂಖ್ಯೆಯ ದುರ್ಘಟನೆಗಳಿಗೂ ಕಾರಣವಾಗುತ್ತಿವೆ. * * *

ರಮಝಾನ್ ತಿಂಗಳಲ್ಲಿ ವೈಭವ ಹೆಚ್ಚಿಸುವ ಮುಂಬೈ ನಗರದ ಮಸೀದಿ-ದರ್ಗಾಗಳ ಪರಿಸರ
ಈ ದಿನಗಳಲ್ಲಿ ರಮಝಾನ್‌ನ ವಿಶೇಷ ಸಂಭ್ರಮಗಳನ್ನು ಮುಂಬೈಯ ಹೆಚ್ಚಿನ ಮಸೀದಿ ಪರಿಸರಗಳಲ್ಲಿ ಕಾಣಬಹುದು. ಮುಂಬೈಯಲ್ಲಿ ಎಲ್ಲಕ್ಕಿಂತ ಹಳೆಯ ಕೆಲವು ಮಸೀದಿಗಳ ಪರಿಸರವಂತೂ ಸಂಜೆಯ ನಂತರ ತನ್ನದೇ ಆದ ವಿಶೇಷ ಆಕರ್ಷಣೆಗಳನ್ನು ಹೊಂದಿದೆ. ಮುಂಬೈಯಲ್ಲಿ ಮುಸ್ಲಿಂ ಸಮುದಾಯದ ಸುಮಾರು 89ರಷ್ಟು ದೊಡ್ಡ ಮಸೀದಿಗಳಿವೆ. ಇವುಗಳಲ್ಲಿ ಜಾಮಾ ಮಸೀದಿ, ಮಿನಾರಾ ಮಸೀದಿ, ಮುಘಲ್ ಯಾ ಇರಾನಿ ಮಸೀದಿ, ಗೋಲ್ ಮಸೀದಿ ಇವನ್ನೆಲ್ಲ ಉದಾಹರಿಸಬಹುದು.
ಜಾಮಾ ಮಸೀದಿ: ಮುಂಬೈಯ ಶೇಖ್ ಮೆಮನ್ ಸ್ಟ್ರೀಟ್‌ನ ಜಾಮಾ ಮಸೀದಿಯು ಆರಂಭದಲ್ಲಿ ಡೊಂಗ್ರಿಯಲ್ಲಿತ್ತು. ಕ್ರಾಫರ್ಡ್ ಮಾರ್ಕೆಟ್ ಮತ್ತು ಜವೇರಿ ಬಝಾರ್‌ನ ಸಮೀಪದ ಈಗಿನ ಮಸೀದಿ ಯಾವ ಸ್ಥಳದಲ್ಲಿದೆಯೋ ಅಲ್ಲಿ 18ನೆ ಶತಮಾನದಲ್ಲಿ ಉದ್ಯಾನ ಮತ್ತು ಕೆರೆ ಇತ್ತು. ಈ ಜಮೀನು ಕೊಂಕಣಿ ಮುಸಲ್ಮಾನರೊಬ್ಬರ ಅಧೀನದಲ್ಲಿತ್ತು. 1775ರಲ್ಲಿ ಆರಂಭವಾದ ಒಂದು ಮಾಳಿಗೆಯ ಮಸೀದಿಯ ನಿರ್ಮಾಣ 1802 ರಲ್ಲಿ ಪೂರ್ಣಗೊಂಡಿತು. ಈಗಿನ ಮಾರ್ಬಲ್ ಮತ್ತು ಕಪ್ಪುಶಿಲೆಯಲ್ಲಿ ನಿರ್ಮಾಣದ ಸುಂದರ ಬಹುಮಹಡಿಯ ಚತುಷ್ಕೋನ ವಾಸ್ತುಶಿಲ್ಪ ನಂತರದ ವರ್ಷಗಳಲ್ಲಿನ ಕೊಡುಗೆ ಆಗಿದೆ. ವಿಶಾಲ ಕಿಟಕಿ, ಮರದ ಕಂಬಗಳು, 16 ಮಿನಾರಗಳು..... ಎಲ್ಲವೂ ಆಕರ್ಷಣೀಯ. ಹೈಕೋರ್ಟ್ 1897ರಲ್ಲಿ ತಯಾರಿಸಿದ ಒಂದು ಯೋಜನೆಯ ಅನುಸಾರ ಮದರಸಾ ಮುಹಮ್ಮದೀಯ ಮತ್ತು ಹಾಸ್ಟೆಲ್ ಸಹಿತ ಅದರ ಜಮೀನು ಇತ್ಯಾದಿಗಳ ಮೇಲ್ವಿಚಾರಣೆಗಳೆಲ್ಲ ಕೊಂಕಣಿ ಮುಸ್ಲಿಂ ಜಮಾತ್ ನಿಯುಕ್ತಿಗೊಳಿಸಿದ 11 ನಿರ್ದೇಶಕರ ಬೋರ್ಡ್ ನೋಡಿಕೊಳ್ಳುತ್ತಿದೆ.
ಮೀನಾರ್ ಮಸೀದಿ: 

ದಕ್ಷಿಣ ಮುಂಬೈಯ ಪ್ರಖ್ಯಾತ ಮುಹಮ್ಮದ್ ಅಲಿ ರೋಡ್‌ನ ಮಿನಾರ ಮಸೀದಿಯ ವೈಭವ ಕಾಣಬೇಕಾದರೆ ರಮಝಾನ್‌ನ ಈ ದಿನಗಳಲ್ಲೇ ಅತ್ತ ಹೋಗಬೇಕು. ಹಬ್ಬದ ಅಡ್ವಾನ್ಸ್ ಖರೀದಿ ಮಾಡುವವರ ಸಾಲು ಸಾಲು ಇಲ್ಲೇ ನೋಡಬೇಕು. ಮುಘಲ್ ಯಾ ಇರಾನಿ ಮಸೀದಿ: ನೂರೈವತ್ತು ವರ್ಷಕ್ಕೂ ಹಳೆಯ ಈ ಮಸೀದಿ ತನ್ನ ವಾಸ್ತುಶಿಲ್ಪದಿಂದಾಗಿ ಬಹು ಪ್ರಸಿದ್ಧಿ. ಸ್ಫಟಿಕ-ಗ್ರಾನೈಟ್‌ನ ಗೋಡೆಗಳು, ಮೊಸೈಕ್ ಟೈಲ್ಸ್ ಹೌಸ್, ತೋಟ..... ಇವೆಲ್ಲವನ್ನೊಳಗೊಂಡ ಮುಘಲ್ ಮಸೀದಿ ಇರಾನ್‌ನ ಶಿರಾಜ್ ನಗರದಿಂದ ಬಂದಿರುವ ಇರಾನಿ ವ್ಯಾಪಾರಿ ಹಾಜಿ ಮುಹಮ್ಮದ್ ಹುಸೈನ್ ಶಿರಾಜಿ ಅವರು 1860ರಲ್ಲಿ ಇದರ ನಿರ್ಮಾಣ ಮಾಡಿದ್ದರು. ಇದನ್ನು ಶಿರಾಜ್‌ನ ವಾಸ್ತುಶಿಲ್ಪದ ಆಧಾರದಲ್ಲಿ ಕಟ್ಟಿಸಿದ್ದಾರೆ. ಇದರ ಪಂಚಾಂಗ ಕರ್ಬಲಾ(ಇರಾಕ್)ದ ಮಣ್ಣಿನದ್ದು. 1996ರಲ್ಲಿ ಪುನರ್‌ನವೀಕರಣದ ನಂತರ ಇನ್ನಷ್ಟು ಶೋಭೆ ಎದ್ದು ಕಾಣಿಸಿದೆ. ಅದೇ ರೀತಿ ಗೋಲ್‌ಮಸೀದಿ (ಮರೀನ್ ಲೈನ್ಸ್ ರಸ್ತೆ ಪಕ್ಕ) ಮಹೀಮ್‌ನ ಹಳೆ ಮಸೀದಿ, ಮಾಂಡ್ವಿಯ ಝಕಾರಿಯಾ ಮಸೀದಿ, ಮಸ್ಜೀದ್ ಸ್ಟೇಶನ್‌ನ ಬಳಿಯ ಸತ್ತಾರ್ ಮಸೀದಿ, ಮೆಮನ್‌ವಾಡಾದ ಇಸ್ಮಾಈಲ್ ಹಬೀಬ್ ಮಸೀದಿ, ಅದೇ ರೀತಿ ಖೋಜಾ ಆಶಾನಾ ಆಶಾರಿ ಮಸೀದಿ, ಬೋಹ್ರಾ ಮಸೀದಿ, (ಜಾಮಾ ಮಸೀದಿ ಬಳಿ) ಸಾತ್ ಮಿನಾರ್ ಇರುವ ಅಲ್ ತಯ್ಯಾಬಿ ಮಸೀದಿ, ದಾವೂದಿ ಬೊಹ್ರಾ ಮಸೀದಿ (ಮಸ್ಜೀದ್ ಬಂದರ್ ಸ್ಟೇಷನ್ ಬಳಿ), ಬಾಂದ್ರಾದ ಶಿಯಾ (ಖೋಝಾ ಮಸೀದಿ) ಜಾಮಾ ಮಸೀದಿ, ಬಾಂದ್ರಾ ಬಡೀ ಮಸೀದಿ (ಎಸ್.ವಿ.ರೋಡ್, ಬಾಂದ್ರಾ ಪಶ್ಚಿಮ) ಇವನ್ನೆಲ್ಲ ಗುರುತಿಸಬಹುದು. ಮುಂಬೈಯ ಒಟ್ಟು ದೊಡ್ಡ 89 ಮಸೀದಿಗಳಲ್ಲಿ ಬೊಹ್ರಾ ಮುಸ್ಲಿಮರ ಎಂಟು, ಖೋಜಾವೋಗಳ ಎರಡು ಮತ್ತು ಇರಾನಿಯರ ಒಂದು ಮಸೀದಿ ಸೇರಿವೆ.

ಅದೇ ರೀತಿ ರಮಝಾನ್ ಸಮಯ ದರ್ಗಾಗಳ ಆಕರ್ಷಣೆಗಳೂ ಗಮನಿಸಬೇಕು. ಮಹೀಮ್‌ನ ಹಜ್ರತ್ ಮಖ್‌ದೂಮ್ ಫಕೀರ್‌ಅಲೀ ಮಾಹಿಮೀ ಮತ್ತು ವರ್ಲಿಯ ಸುಮಾರು ಆರು ಶತಮಾನಗಳ ಹಳೆಯ ಹಾಜಿ ಅಲಿ ದರ್ಗಾ ಇವೆಲ್ಲ ಬಹುಪ್ರಖ್ಯಾತಿ. ಇನ್ನೊಂದೆಡೆ ಡೊಂಗ್ರಿಯಲ್ಲಿ ಸೂಫಿ ಸಂತ ಸೈಯ್ಯದ್ ಹಾಜಿ ಅಬ್ದುಲ್ ರಹಮಾನ್ ಶಾಹ ಬಾಬಾ, ಕ್ರಾಫರ್ಡ್ ಮಾರ್ಕೆಟ್‌ನಲ್ಲಿ ಸೈಯ್ಯದ್ ಅಬ್ದುಲ್ಲಾಹ ಶಾಹ ಖಾದರೀ ಉರ್ಫ್ ಪೆಡ್ರೋಶಾಹ ಮತ್ತು ಬಾಂಬೆ ಆಸ್ಪತ್ರೆಯ ಸಮೀಪದ ದರ್ಗಾ.... ಇಲ್ಲೆಲ್ಲ ಭಾರೀ ಜನಸಂದಣಿ ಇರುವುದನ್ನು ಗಮನಿಸಬಹುದು. ಅದೇ ರೀತಿ ಮೆಟ್ರೋಸಿನೆಮಾದ ಬಳಿಯ ರಸ್ತೆಗಳ ನಡುವೆ ಇರುವ ದರ್ಗಾ ಕೂಡಾ ಮುಂಬೈಯ ಹಳೆಯ ದರ್ಗಾಗಳಲ್ಲಿ ಒಂದು. ಇದು 14-15ನೆಯ ಶತಮಾನದ ಮುಸ್ಲಿಂ ಶಾಸನಕಾಲದ್ದು ಎನ್ನಲಾಗಿದೆ. ಮುಂಬೈ ಮಹಾನಗರದಲ್ಲಿ ರಮಝಾನ್ ತಿಂಗಳಲ್ಲಿ ಸಂಜೆಯ ಸೊಬಗನ್ನು ಈ ಮಸೀದಿ - ದರ್ಗಾ ಪರಿಸರಗಳು ಇನ್ನಷ್ಟು ಹೆಚ್ಚಿಸುತ್ತವೆ.

share
ಶ್ರೀನಿವಾಸ್ ಜೋಕಟ್ಟೆ
ಶ್ರೀನಿವಾಸ್ ಜೋಕಟ್ಟೆ
Next Story
X