ಕೋಪಾ ಅಮೆರಿಕ: ಚಿಲಿ ಮತ್ತೊಮ್ಮೆ ಚಾಂಪಿಯನ್

ಈಸ್ಟ್ ರುದರ್‌ಫೋರ್ಡ್(ಅಮೆರಿಕ), ಜೂ.27: ಹಾಲಿ ಚಾಂಪಿಯನ್ ಚಿಲಿ ತಂಡ 100ನೆ ಆವೃತ್ತಿಯ ಕೋಪಾ ಅಮೆರಿಕ ಟೂರ್ನಿಯಲ್ಲಿ ಅರ್ಜೆಂಟೀನವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸುವ ಮೂಲಕ ಪ್ರಶಸ್ತಿಯನ್ನೇ ತನ್ನಲ್ಲೇ ಉಳಿಸಿಕೊಂಡಿದೆ. ಲಿಯೊನೆಲ್ ಮೆಸ್ಸಿ ಸತತ ಎರಡನೆ ಪ್ರಯತ್ನದಲ್ಲೂ ಪ್ರಶಸ್ತಿ ವಂಚಿತರಾದರು.
ಕಳೆದ ವರ್ಷದ ಕೋಪಾ ಅಮೆರಿಕ ಫೈನಲ್ ಪಂದ್ಯದ ಫಲಿತಾಂಶ ರವಿವಾರ ಪುನರಾವರ್ತನೆಯಾಯಿತು. ಸತತ ಎರಡನೆ ವರ್ಷವೂ 120 ನಿಮಿಷಗಳ ಆಟ ಗೋಲುರಹಿತ ಡ್ರಾ ಗೊಂಡಾಗ ಪೆನಾಲ್ಟಿ ಶೂಟೌಟ್‌ಗೆ ಮೊರೆ ಹೋಗಲಾಯಿತು. ಪೆನಾಲ್ಟಿಯಲ್ಲಿ ಮೆಸ್ಸಿ ಗೋಲು ಬಾರಿಸಲು ಎಡವಿದರು.
ಅರ್ಜೆಂಟೀನದ ಆಟಗಾರರು ಈ ಸೋಲಿನಿಂದ ಭಾರೀ ನಿರಾಸೆ ಅನುಭವಿಸಿದರು. 2014ರ ವಿಶ್ವಕಪ್ ಹಾಗೂ ಕಳೆದ ವರ್ಷದ ಕೋಪಾ ಅಮೆರಿಕ ಸೇರಿದಂತೆ ಮೂರನೆ ಬಾರಿ ಫೈನಲ್‌ನಲ್ಲಿ ಎಡವಿದ ಅರ್ಜೆಂಟೀನ ರನ್ನರ್-ಅಪ್‌ಗೆ ತೃಪ್ತಿಪಟ್ಟುಕೊಂಡಿತು.
ಅರ್ಜೆಂಟೀನ ಕಳೆದ 23 ವರ್ಷಗಳಿಂದ ಎದುರಿಸುತ್ತಿದ್ದ ಪ್ರಶಸ್ತಿಯ ಬರ ಇನ್ನೂ ನೀಗಲಿಲ್ಲ. ಐದು ಬಾರಿ ವಿಶ್ವದ ಆಟಗಾರ ಪ್ರಶಸ್ತಿ ವಿಜೇತ ಮೆಸ್ಸಿ ವೃತ್ತಿಬದುಕಿನಲ್ಲಿ ಪ್ರಮುಖ ಪ್ರಶಸ್ತಿ ಜಯಿಸಲಾಗದ ನೋವಿನಲ್ಲೇ ವಿದಾಯ ಹೇಳಿದ್ದಾರೆ.





