ಕೃತಕ ಕಾಲು ಅಳವಡಿಕೆ: ಎಂಡೋಸಲ್ಫಾನ್ ಪೀಡಿತೆಗೆ ಕೇರಳ ಸರಕಾರದ ನೆರವು
.gif)
ಕಾಸರಗೋಡು, ಜೂ.27: ಎಂಡೋ ಸಲ್ಫಾನ್ ಮಹಾಮಾರಿಗೆ ಸಿಲುಕಿ ವೈಕಲ್ಯತೆಗೆ ತುತ್ತಾಗಿರುವ ಕಾಸರ ಗೋಡು ಎಣ್ಮಕಜೆಯ ಶ್ರುತಿಗೆ ಹೈಟೆಕ್ ಕೃತಕ ಕಾಲು ಒದಗಿಸಲು ಕೇರಳ ಸರಕಾರ ಮುಂದಾಗಿದ್ದು, ಕಾಲು ಅಳವಡಿಸಲು ಅಗತ್ಯವಿರುವ ಎಲ್ಲ ಮೊತ್ತವನ್ನು ಭರಿಸಲು ತೀರ್ಮಾನಿಸಿದೆ ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ಶ್ರುತಿ ಯನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಕೃತಕ ಕಾಲು ಅಳವಡಿಕೆಗೆ ಅಗತ್ಯ ಇರುವ ಎಲ್ಲ ನೆರವು ನೀಡು ವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಕೃತಕ ಕಾಲು ಅಳವಡಿಕೆಗೆ ಲಕ್ಷಾಂತರ ರೂ.ವೆಚ್ಚ ತಗಲುತ್ತಿದ್ದು, ಇದನ್ನು ಭರಿಸಲು ಸಾಧ್ಯವಾಗದೆ ಶ್ರುತಿಯವರ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಎಂಡೋಸಲ್ಫಾನ್ ಪೀಡಿತೆಯಾದರೂ ತನ್ನ ಛಲದಿಂದಲೇ ವೈದ್ಯೆಯಾಗುವ ಕನಸು ಹೊತ್ತಿರುವ ಶ್ರುತಿ ಬೆಂಗಳೂರಿನಲ್ಲಿ ಹೋಮಿಯೋ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಪಡೆಯಲು ಸೀಟು ದಕ್ಕಿದರೂ ಶುಲ್ಕ ಪಾವತಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದ ಶ್ರುತಿಯ ಶಿಕ್ಷಣ ಮುಂದುವರಿಸಲು ಸರಕಾರ ಈ ಹಿಂದೆ ಅನುದಾನ ಮಂಜೂರು ಮಾಡಿತ್ತು. ಎಂಡೋಸಲ್ಫಾನ್ನ ದುಷ್ಪರಿಣಾಮದಿಂದ ಶ್ರುತಿಯ ಬಲಗಾಲು ಊನವಾಗಿದೆ. ಸಮಸ್ಯೆಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದ ಶ್ರುತಿ ಎಣ್ಮಕಜೆ ಗ್ರಾಮದ ಅಭಿಮಾನದ ಸಂಕೇತವಾಗಿ ಬೆಳೆದು ನಿಂತಿದ್ದಾರೆ.





