ಬೆಳ್ತಂಗಡಿ: ‘ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ’ ಕೃಷಿ ಅಭಿಯಾನ

ಬೆಳ್ತಂಗಡಿ, ಜೂ.27: ರೈತರು ನಮ್ಮ ಅನ್ನದಾತರಾಗಿದ್ದು, ಸರಕಾರ ಸಬ್ಸಿಡಿ ಹೆಸರಿನಲ್ಲಿ ವಂಚಿಸುವ ಕಾರ್ಯ ಮಾಡುತ್ತಿದೆ. ರೈತರಿಗೆ ಸರಿಯಾಗಿ ಸಹಾಯಧನ ಸಿಗುತ್ತಿಲ್ಲ. ಯಾವುದೇ ಸರಕಾರವಾಗಲಿ ಕೃಷಿಕರನ್ನು ಕಡೆಗಣಿಸಿದರೆ ರೈತರೇ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕೃಷಿ ಅಭಿಯಾನ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಬೆಳೆಯದಿದ್ದರೆ ನಮಗೆ ಆಹಾರವಿಲ್ಲ. ಸರಕಾರ, ಜನಪ್ರತಿನಿಧಿಗಳು, ಸಾರ್ವಜನಿಕರು, ಅಧಿಕಾರಿಗಳು ರೈತರನ್ನು ದೇವರಂತೆ ಕಾಣಬೇಕು. ಸರಕಾರದ ಸಹಾಯಧನ ರೈತರಿಗೆ ಸಿಗುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಶಕ್ತಿ ಮೀರಿ ಪ್ರಯತ್ನಿಸಬೇಕು. ಕೃಷಿ ಇಲಾಖೆಯಲ್ಲಿ ಅಧಿಕಾರಿಗಳ, ಸಿಬ್ಬಂದಿಯ ಕೊರತೆ ಇದೆ. ಕೃಷಿಗೆ ಸಂಬಂಧಪಟ್ಟ ಸಚಿವರು ರೈತರ ನಿಜವಾದ ಸಮಸ್ಯೆಗಳನ್ನು ಆಲಿಸಿ ಅವರಿಗೆ ಬೇಕಾದ ಯೋಜನೆಯನ್ನು ರೂಪಿಸಬೇಕು ಎಂದರು. ನಪಂ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಮಾತನಾಡಿದರು.
ತಾಪಂ ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಮಮತಾ ಎಂ. ಶೆಟ್ಟಿ, ಸೌಮ್ಯಲತಾ ಜಯಂತ್ ಗೌಡ, ತಾಪಂ ಉಪಾಧ್ಯಕ್ಷೆ ವೇದಾವತಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಹಾವೀರ ಜೈನ್, ತಾಪಂ ಕಾರ್ಯ ನಿರ್ವಾಹಣಾಧಿಕಾರಿ ನರೇಂದ್ರ ಸಿ.ಆರ್., ಶ್ರೀ ಧ.ಗ್ರಾ. ಯೋಜನೆಯ ತಾಲೂಕು ಯೋಜನಾಧಿಕಾರಿ ರೂಪಾ ಜಿ. ಜೈನ್, ಮಂಗಳೂರು ಕೃಷಿ ಇಲಾಖಾ ಜಂಟಿ ನಿರ್ದೇಶಕ ಡಾ.ಕೆಂಪೇಗೌಡ, ಪುತ್ತೂರು ಕೃಷಿ ಇಲಾಖಾ ನಿರ್ದೇಶಕ ಡಾ.ಡಿ. ಮಂಜುನಾಥ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಭಾಕರ ಮಯ್ಯರನ್ನು ಗೌರವಿಸಲಾಯಿತು. ಜಲಾನಯನ ಅಧಿಕಾರಿ ನಾರಾಯಣ ಪೂಜಾರಿ ಸ್ವಾಗತಿಸಿ ಸಹಾಯಕ ಕೃಷಿ ನಿರ್ದೇಶಕ ಎನ್. ತಿಲಕ್ ಪ್ರಸಾದ್ ಜಿ. ವಂದಿಸಿದರು.







