ಎರಡು ಬಾರಿ ಶಾಸಕ, ಈಗ ಬೀದಿ ಬದಿ ಟಾರ್ಪಾಲುಗಳಡಿ ಬದುಕು!

ಪಂಜಾಬಿನ ಹೋಶಿಯಾರ್ಪುರದ ಗೃಹಶಂಕರ್ ಪಟ್ಟಣಕ್ಕೆ ಮುಂಗಾರು ಪೂರ್ವ ಸೂಚನೆ ಸಿಕ್ಕಿದೆ. ಮಳೆ ಹನಿಯುತ್ತಿರುವಂತೆ ಇಲ್ಲಿ ಕುಟುಂಬವೊಂದು ರಸ್ತೆಬದಿಯ ಟರ್ಪಾಲಿನ್ ಕವರ್ ಅಡಿಯಲ್ಲಿ ಆಶ್ರಯ ಪಡೆದುಕೊಂಡಿದೆ. ಒದ್ದೆನೆಲದಲ್ಲಿ ಶೀಟುಗಳ ಅಡಿಯಲ್ಲಿ ನೆಲೆಸಿದ ಶಾಹುಂಗರಾ ಕುಟುಂಬವನ್ನು ಕಂಡಾಗ ಒಂದು ಕಾಲದಲ್ಲಿ ಆತ ಎರಡು ಬಾರಿ ಪಂಜಾಬಿನಿಂದ ಬಿಎಸ್ಪಿ ಶಾಸಕನಾಗಿ ಆಯ್ಕೆಯಾಗಿದ್ದ ಎಂದು ಹೇಳಲೂ ಕಷ್ಟವಾಗುತ್ತದೆ.
ಕಳೆದ ಐದು ವರ್ಷಗಳಿಂದ ಈ ಕುಟುಂಬ ನೀರಾವರಿ ಇಲಾಖೆಯ ಮನೆಯಲ್ಲಿ ಅಕ್ರಮವಾಗಿ ನೆಲೆಸಿದೆ. ಭಾನುವಾರ ಸರ್ಕಾರ ಕೊನೆಗೂ ಅವರನ್ನು ಹೊರಹಾಕಲು ನಿರ್ಧರಿಸಿತ್ತು. ಪಂಜಾಬಿನಂತಹ ಶ್ರೀಮಂತ ರಾಜ್ಯದಲ್ಲಿ ಮಾಜಿ ಶಾಸಕ ಈ ವರ್ಷಗಳಲ್ಲಿ ತನಗಾಗಿ ಒಂದು ದುಬಾರಿ ಮನೆ ಕಟ್ಟಿಕೊಂಡಿಲ್ಲ. ಮಾಸಿಕ ರು. 20,000 ಸಿಗುವ ಶಾಸಕ ಪಿಂಚಣಿಯಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದೇನೆ. ಆದರೆ ಅಲ್ಲಿವರೆಗೆ ಸೂರಿಲ್ಲ ಎನ್ನುತ್ತಾರೆ ಶಾಹುಂಗರಾ. ರಸ್ತೆಯಲ್ಲಿಯೇ ಪತ್ನಿ ಚಪಾತಿ ಮಾಡುತ್ತಿದ್ದರೆ ಇಬ್ಬರು ಮಕ್ಕಳು ಅದಕ್ಕೆ ಸಹಕರಿಸುತ್ತಿದ್ದರು. ನೆರೆಹೊರೆಯ ಮನೆಯ ಬಚ್ಚಲನ್ನೇ ಈ ಕುಟುಂಬ ಸದ್ಯಕ್ಕೆ ಬಳಸುತ್ತಿದೆ.
ಶಾಹುಂಗರ ದಲಿತ ವರ್ಗದವರಾಗಿದ್ದರೂ ಗೃಹಶಂಕರ್ ಸಾಮಾನ್ಯವರ್ಗದಿಂದ 1992 ಮತ್ತು 1997ರಲ್ಲಿ ಶಾಸಕರಾಗಿದ್ದರು. ನಾನು ಕಾನ್ಷಿರಾಂ ಕುಟುಂಬದ ಪರವಾಗಿದ್ದ ಕಾರಣ ಬಿಎಸ್ಪಿ ನನ್ನನ್ನು ಹೊರ ಹಾಕಿದೆ. ಕೆಳವರ್ಗದವರನ್ನು ಅಭಿವೃದ್ಧಿ ಮಾಡುವ ಕಾನ್ಷಿರಾಂ ಅವರ ಉದ್ದೇಶವನ್ನು ಬೆಂಬಲಿಸಿ ನಾನು ರಾಜಕೀಯಕ್ಕೆ ಬಂದೆ. ಹೀಗಾಗಿ ಎಂದೂ ಹಣ ಮಾಡಲು ಪ್ರಯತ್ನಿಸಲಿಲ್ಲ. ಭ್ರಷ್ಟಾಚಾರಕ್ಕೆ ವಿರೋಧಿಸಿದ ಕಾರಣ ನಾನು ಈ ದಿನಗಳನ್ನು ಕಾಣುತ್ತಿದ್ದೇನೆ. ನಾನು ಶಾಸಕನಾಗಿದ್ದಾಗ ಸಿಗುವ ವೇತನ ಮನೆ ಕಟ್ಟುವಷ್ಟು ಇರಲಿಲ್ಲ ಎನ್ನುತ್ತಾರೆ ಶಾಹುಂಗರಾ. ಆದರೆ ಅವರ ಸಹೋದರ ದಿನಗೂಲಿ ಕಟ್ಟಡ ಕಾರ್ಮಿಕ ಮತ್ತು ಮತ್ತೊಬ್ಬ ಸಹೋದರ ಗ್ರೀಸ್ ನಲ್ಲಿ ಕಾರ್ಮಿಕ
ನೀರಾವರಿ ಇಲಾಖೆಗೆ ಈ ಹಿಂದೆಯೇ ಕುಟುಂಬವನ್ನು ಹೊರ ಹಾಕುವ ಆದೇಶ ಬಂದಿತ್ತು. ಆದರೆ ಶಾಹುಂಗರ ಮನೆ ಬಿಟ್ಟಿರಲಿಲ್ಲ. ಕೊನೆಗೆ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ನೆರವಿನಿಂದ ಹೊರ ಹಾಕಲಾಯಿತು ಎಂದು ಕಾಂಧಿ ಕೆನಾಲ್ ಕಾರ್ಯಕಾರಿ ಇಂಜಿನಿಯರ್ ವಿಜಯ್ ಗಿಲ್ ಹೇಳುತ್ತಾರೆ.







