ಯುರೋ ಕಪ್: ಸ್ಪೇನ್ ಪಾರಮ್ಯಕ್ಕೆ ಅಂತ್ಯಹಾಡಿದ ಇಟಲಿ
ಸತತ ಮೂರನೆ ಪ್ರಶಸ್ತಿ ಗೆಲ್ಲುವ ಕನಸು ಕೈಗೂಡಲಿಲ್ಲ

ಪ್ಯಾರಿಸ್, ಜೂ.28: ಸತತ ಮೂರನೆ ಯುರೋಪಿಯನ್ ಚಾಂಪಿಯನ್‌ಶಿಪ್‌ನ ಮೇಲೆ ಕಣ್ಣಿಟ್ಟಿದ್ದ ಸ್ಪೇನ್ ತಂಡ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಇಟಲಿಯ ವಿರುದ್ಧ 2-0 ಗೋಲುಗಳ ಅಂತರದಿಂದ ಸೋತಿದೆ. ಈ ಸೋಲಿನೊಂದಿಗೆ ಯುರೋ ಕಪ್‌ನಲ್ಲಿ ಸ್ಪೇನ್‌ನ ಪಾರಮ್ಯ ಕೊನೆಗೊಂಡಿದೆ.
ಸೋಮವಾರ ಇಲ್ಲಿ ನಡೆದ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಇಟಲಿ ತಂಡ 22 ವರ್ಷಗಳ ಬಳಿಕ ಸ್ಪೇನ್ ವಿರುದ್ಧ ಗೆಲುವಿನ ನಗೆ ಬೀರಿತು. ಕಳೆದ 11 ಪಂದ್ಯಗಳ ಪೈಕಿ ಮೊದಲ ಗೆಲುವು ಸಾಧಿಸಿ ಸತತ ಸೋಲಿನಿಂದ ಹೊರ ಬಂದಿತು. ಮಾತ್ರವಲ್ಲ 2012ರ ಯುರೋ ಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿತು.
ಇಟಲಿಯ ಜಿಯೋರ್ಜಿಯೊ ಚಿಲೆನಿ(33 ನಿಮಿಷ) ಮೊದಲಾರ್ಧದಲ್ಲಿ ಇಟಲಿಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಕೊನೆಯ ಕ್ಷಣದಲ್ಲಿ(90+) ಗೋಲು ಬಾರಿಸಿದ ಗ್ರ್ರೈೆಝಿಯಾನೊ ಪೆಲೆ ಇಟಲಿಗೆ 2-0 ಗೋಲುಗಳ ಅಂತರದ ಗೆಲುವು ತಂದುಕೊಟ್ಟರು. ಇಟಲಿ ಶನಿವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ತಂಡವನ್ನು ಎದುರಿಸಲಿದೆ.
ಇಟಲಿ ತಂಡ 1994ರ ವಿಶ್ವಕಪ್‌ನ ಬಳಿಕ ಸ್ಪೇನ್ ವಿರುದ್ಧ ಆಡಿರುವ ಒಂದೂ ಸ್ಪರ್ಧಾತ್ಮಕ ಪಂದ್ಯವನ್ನು ಜಯಿಸಿಲ್ಲ. 2012ರಲ್ಲಿ ನಡೆದ ಯುರೋ ಕಪ್‌ನ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ 4-0 ಗೋಲುಗಳ ಅಂತರದಿಂದ ಹೀನಾಯವಾಗಿ ಸೋತಿತ್ತು.
ಸೋಮವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಇಟಲಿ 33ನೆ ನಿಮಿಷದಲ್ಲಿ ಮೊದಲ ಗೋಲು ಬಾರಿಸಿತು.
ಯುರೋಪ್‌ನಲ್ಲಿ ಪ್ರಬಲ ತಂಡವಾಗಿರುವ ಸ್ಪೇನ್ 2008ರಲ್ಲಿ ನಡೆದ ಯರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಆಗಿತ್ತು. ಆ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಇಟಲಿಯನ್ನು ಮಣಿಸಿತ್ತು. 2012ರ ಯುರೋ ಕಪ್‌ನಲ್ಲೂ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿತ್ತು. ಈಬಾರಿ ಮೂರನೆ ಪ್ರಶಸ್ತಿಯ ನಿರೀಕ್ಷೆಯಲ್ಲಿತ್ತು.
ಸ್ಪೇನ್ ತಂಡದ ಯರೋ ಕಪ್‌ನಲ್ಲಿನ ಸತತ 15 ಪಂದ್ಯಗಳ ಗೆಲುವಿನ ಓಟಕ್ಕೆ ಕ್ರೊಯೇಷಿಯಾ ಕಡಿವಾಣ ಹಾಕಿತ್ತು. ಕಳೆದ ವಾರ ನಡೆದಿದ್ದ ಅಂತಿಮ ಗ್ರೂಪ್ ಪಂದ್ಯದಲ್ಲಿ ಕ್ರೊಯೇಷಿಯಾ ತಂಡ ಸ್ಪೇನ್ ತಂಡವನ್ನು 2-1 ಅಂತರದಿಂದ ಮಣಿಸಿತ್ತು.







