ನನ್ನನ್ನು ಪಾಸ್ ಮಾಡಿಸಿ ಎಂದು ಅಪ್ಪನಿಗೆ ಹೇಳಿದ್ದೆ, ಅವರು ಟಾಪರ್ ಮಾಡಿಸಿಬಿಟ್ಟರು !
ಬಿಹಾರದಲ್ಲಿ ಬಂಧಿತ ರೂಬಿ ರಾಯ್

ಪಾಟ್ನಾ, ಜೂ.28: ‘‘ನನ್ನನ್ನು ಪಾಸ್ ಮಾಡಿಸಿ ಎಂದು ಅಪ್ಪನಿಗೆ ಹೇಳಿದ್ದೆ, ಅವರು ಟಾಪರ್ ಮಾಡಿಸಿಬಿಟ್ಟರು,’’ ಹೀಗೆಂದು ತನಿಖಾಧಿಕಾರಿಗಳ ಬಳಿ ಹೇಳಿದ್ದು ಮತ್ಯಾರೂ ಅಲ್ಲ, ಬಿಹಾರ 12ನೆ ತರಗತಿ ಟಾಪರ್ಸ್ ಹಗರಣದಲ್ಲಿ ಬಂಧಿತೆಯಾಗಿರುವ ರೂಬಿ ರಾಯ್.
ಬಿಹಾರ ಬೋರ್ಡ್ ನಡೆಸಿದ 12ನೆ ತರಗತಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ರೂಬಿ ರಾಯ್ ಫಲಿತಾಂಶವನ್ನು ಮರುಪರೀಕ್ಷೆಯ ನಂತರ ರದ್ದು ಪಡಿಸಲಾಗಿದ್ದು ಆಕೆ ಈಗ ಬಂಧನದಲ್ಲಿದ್ದಾಳೆ. ‘‘ತನಗೆ ಟಾಪರ್ ಆಗುವ ಅರ್ಹತೆಯಿಲ್ಲವೆಂದು ಹೇಳುವಲ್ಲಿ ರೂಬಿಗೆ ವಿಚಾರಣೆ ಸಂದರ್ಭ ಯಾವುದೇ ಹಿಂಜರಿಕೆಯಿರಲಿಲ್ಲ,’’ ಎಂದು ಈ ಹಗರಣದ ತನಿಖೆಯ ನೇತೃತ್ವ ವಹಿಸಿರುವ ವಿಶೇಷ ತನಿಖಾ ದಳದ ಮುಖ್ಯಸ್ಥ ಹಾಗೂ ಪಾಟ್ನಾದ ವಿಶೇಷ ಎಸ್ಪಿಮನು ಮಹಾರಾಜ್ ಹೇಳಿದ್ದಾರೆ.
‘‘ಆಕೆಗೆ ತಾನು ಎರಡನೆ ದರ್ಜೆಯಲ್ಲಿ ತೇರ್ಗಡೆಯಾಗುವ ವಿಶ್ವಾಸವಿತ್ತು. ಈಗ ಆಕೆ ತನ್ನ ಹೆತ್ತವರನ್ನು ಹಾಗೂ ವಿಷ್ಣು ರಾಯ್ ಕಾಲೇಜು ಪ್ರಿನ್ಸಿಪಾಲ್ ಬಚ್ಚಾ ರಾಯ್ ಅವರನ್ನು ದೂರುತ್ತಿದ್ದಾಳೆ,’’ ಎಂದು ಅವರು ಮಾಹಿತಿ ನೀಡಿದ್ದಾರೆ. ಆದರೆ ರೂಬಿಗೆ ಹಗರಣದ ಬಗ್ಗೆ ಯಾವುದೇ ವಿಚಾರ ಪರೀಕ್ಷೆಯ ಸಮಯ ಗೊತ್ತಿರಲಿಲ್ಲವೆಂಬುದನ್ನು ಅವರು ಒಪ್ಪುವುದಿಲ್ಲ. ಆಕೆಯ ತಿದ್ದಲ್ಪಟ್ಟ ಉತ್ತರ ಪತ್ರಿಕೆಯಲಿ ್ಲಆಕೆ ಮತ್ತೆ ಉತ್ತರಗಳನ್ನು ಬರೆದಂತಿತ್ತು,’’ ಎಂದು ಅವರು ಹೇಳಿದ್ದಾರೆ.
ಈತನ್ಮಧ್ಯೆ ರೂಬಿಯ ವಯಸ್ಸಿನ ಬಗ್ಗೆಯೂ ತಕರಾರೆದ್ದಿದ್ದು, ಸ್ಥಳೀಯ ಎನ್‌ಜಿಒ ಒಂದು ಆಕೆ ಅಕ್ಟೋಬರ್ 1998 ರಲ್ಲಿ ಹುಟ್ಟಿದ್ದರಿಂದ ಅಪ್ರಾಪ್ತೆ ಎಂದು ವಾದಿಸಿದೆ. ಆದರೆ ರೂಬಿ ಯಾ ಆಕೆಯ ಕುಟುಂಬ ಈ ವಿಚಾರದಲ್ಲಿ ಏನೂ ಹೇಳಿಲ್ಲ. ಪ್ರಸಕ್ತ ಪಾಟ್ನಾದ ನ್ಯಾಯಾಲಯವೊಂದು ಆಕೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ರೂಬಿ ಟಾಪರ್ ಎಂದು ಘೋಷಿಸಲ್ಪಟ್ಟ ನಂತರ ಪೊಲಿಟಿಕಲ್ ಸೈನ್ಸನ್ನು ‘ಪ್ರಾಡಿಗಲ್ ಸೈನ್ಸ್’ ಎಂದು ಉಚ್ಛರಿಸಿ ಸಾಕಷ್ಟು ಅಚ್ಚರಿ ಮೂಡಿಸಿದ್ದಳಲ್ಲದೆ, ಇತ್ತೀಚೆಗೆ ಬಿಹಾರ ರಾಜ್ಯ ಶಿಕ್ಷಣ ಮಂಡಳಿ ಆಕೆಗೆ ಮರು ಪರೀಕ್ಷೆಯಲ್ಲಿ ಕವಿ ತುಲಸೀದಾಸ್ ಬಗ್ಗೆ ಕೆಲ ವಾಕ್ಯಗಳನ್ನು ಬರೆಯಲು ಹೇಳಿದಾಗ ‘ತುಳಸೀದಾಸ್‌ಜೀ ಕೋ ಪ್ರಣಾಮ್’ ಎಂದಷ್ಟೇ ಬರೆದಿದ್ದಳು.
ಈ ಹಗರಣದ ಸಂಬಂಧ ಬಿಹಾರ ಶಿಕ್ಷಣ ಮಂಡಳಿ ಕಾರ್ಯದರ್ಶಿ ಹರಿಹರನಾಥ್ ಝಾ ಅವರನ್ನು ಕೂಡ ಸೋಮವಾರ ಬಂಧಿಸಲಾಗಿದ್ದು, ಅವರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.







