ಜಾನುವಾರು ಸಾಗಾಟಗಾರರಿಗೆ ಹಲ್ಲೆ ಮಾಡಿ ಸಗಣಿ ತಿನ್ನಿಸಿದ ‘ಗೋರಕ್ಷಕರು’

ಹೊಸದಿಲ್ಲಿ/ಚಂಡೀಗಢ, ಜೂ.28: ಗೋ ರಕ್ಷಕ ದಳದ ಕಾರ್ಯಕರ್ತರು ಶಂಕಿತ ಗೋಮಾಂಸ ಸಾಗಾಟಗಾರರಿಬ್ಬರನ್ನು ಸೆರೆ ಹಿಡಿದು ಹಲ್ಲೆ ನಡೆಸಿದ್ದಲ್ಲದೆ ಬಲವಂತವಾಗಿ ಸಗಣಿ ತಿನ್ನಿಸಿದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗೋರಕ್ಷಕ ದಳದವರು ಇಬ್ಬರು ಅಮಾಯಕರಿಗೆ ಸಗಣಿ ತಿನ್ನಿಸುವ ದೃಶ್ಯ ವಿಡಿಯೋಯೊಂದರಲ್ಲಿ ಸೆರೆಯಾಗಿದೆ.
ಜೂ.10 ರಂದು ವಾಹನವನ್ನು ಹೆದ್ದಾರಿಯಲ್ಲಿ ತಡೆ ಹಿಡಿದ ಗೋ ರಕ್ಷಕ ದಳದ ಸ್ವಯಂಸೇವಕರು ವಾಹನದಲ್ಲಿದ್ದ ರಿಝ್ವಾನ್ ಹಾಗೂ ಮುಖ್ತಿಯಾರ್‌ರನ್ನು ಹೊರಗೆಳೆದು ಪಂಚಗವ್ಯ(ದನದ ಸಗಣಿಯಿಂದ ತಯಾರಿಸಿದ ವಸ್ತು)ವನ್ನು ಬಲವಂತವಾಗಿ ತಿನ್ನಿಸಿರುವ ಘಟನೆ ನಡೆದಿದೆ.
‘‘ಮೆವಾತ್‌ನಿಂದ ದಿಲ್ಲಿಗೆ ಹೋಗುತ್ತಿದ್ದ ಕಾರನ್ನು 7 ಕಿ.ಮೀ.ದೂರ ಬೆನ್ನಟ್ಟಿ ಕೊನೆಗೂ ಭದ್ರಾಪುರ ಬಾರ್ಡರ್‌ನಲ್ಲಿ ಕಾರನ್ನು ತಡೆ ಹಿಡಿದಿದ್ದೇವೆ. ಕಾರಿನಲ್ಲಿ 700 ಕೆಜಿ ಗೋ ಮಾಂಸವಿತ್ತು. ಗೋ ಮಾಂಸ ಸಾಗಾಟಕಾರರಿಗೆ ಪಾಠ ಕಲಿಸುವ ಉದ್ದೇಶದಿಂದ ಅವರಿಗೆ ಪಂಚಗವ್ಯವನ್ನು ತಿನ್ನಿಸಿದ್ದೇವೆ.ಬಳಿಕ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ’’ ಎಂದು ಗೋರಕ್ಷಕ್ ದಳದ ಅಧ್ಯಕ್ಷ ಧಮೇಂದ್ರ ಯಾದವ್ ಹೇಳಿಕೊಂಡಿದ್ದಾರೆ.
ಕಾರನ್ನು ತಡೆದು ಇಬ್ಬರು ವ್ಯಕ್ತಿಗಳನ್ನು ರೋಡ್‌ನಲ್ಲಿ ಕೂರಿಸಲಾಗುತ್ತದೆ. ಇಬ್ಬರ ಮುಖದ ಮೇಲೆ ನೀರು ಹಾಕಿದ ಬಳಿಕ ದನದ ಸೆಗಣಿಯನ್ನು ಅವರ ಮುಖಕ್ಕೆ ಬಲವಂತವಾಗಿ ಮೆತ್ತಲಾಗುತ್ತದೆ. ‘ಗೋ ಮಾತಾ ಕಿ ಜೈ’ ಹಾಗೂ ‘ಜೈ ಶ್ರೀರಾಮ್’ ಎಂಬ ಘೋಷಣೆ ಕೂಗುತ್ತಿದ್ದ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.







