ಚಾಲಕನಿಲ್ಲದೆ 15 ಕಿ.ಮೀ. ಚಲಿಸಿದ ರಾಜಧಾನಿ ರೈಲು ?

ಹೊಸದಿಲ್ಲಿ, ಜೂ.28: ಮಡಗಾಂವ್-ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲು ತಾಂತ್ರಿಕ ದೋಷದಿಂದಾಗಿ ಸುಮಾರು 15 ಕಿ.ಮೀ. ದೂರ ಚಾಲಕನಿಲ್ಲದೆ ಚಲಿಸಿದ ಘಟನೆ ಸೋಮವಾರ ನಡೆದಿದ್ದು ರೈಲು ಪ್ರಯಾಣಿಕರೆಲ್ಲರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹಿಂದುಸ್ತಾನ್ ಟೈಮ್ಸ್ ವರದಿಗಾರರೊಬ್ಬರ ಪ್ರಕಾರ ರತ್ನಗಿರಿ ನಿಲ್ದಾಣದ ಸಮೀಪವಿರುವ ದೊಡ್ಡ ಸುರಂಗವೊಂದರೊಳಗೆ ಸಂಜೆ ಸುಮಾರು 5:50 ರ ಹೊತ್ತಿಗೆ ರೈಲು ಒಮ್ಮೆಗೇ ನಿಂತಿತ್ತು. ತಾಂತ್ರಿಕ ಸಿಬ್ಬಂದಿ ದೋಷವನ್ನು ಸರಿಪಡಿಸಲು ಯತ್ನಿಸುತ್ತಿರುವಂತೆಯೇ ರೈಲು ಚಲಿಸಲಾರಂಭಿಸಿತ್ತು. ಆಗ ಗಾರ್ಡ್ ಕ್ಯಾಬಿನ್ನಿನಲ್ಲಿದ್ದ ರೈಲಿನ ಚಾಲಕ ರೈಲು ನಿಧಾನಗೊಳ್ಳುತ್ತಿದ್ದಂತೆಯೇ ಇಂಜಿನ್ ಬಳಿ ತೆರಳಿ ರೈಲನ್ನು ನಿಯಂತ್ರಿಸಿದ ಎಂದು ತಿಳಿದುಬಂದಿದೆ.
ರೈಲು ಚಾಲಕನಿಲ್ಲದೆ ಸ್ವಲ್ಪದೂರ ಚಲಿಸಿದ್ದನ್ನು ಹಿರಿಯ ಅಧಿಕಾರಿಗಳು ಒಪ್ಪಿಕೊಂಡರೂ ಕೊಂಕಣ್ ರೈಲ್ವೆ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಂಜಯ್ ಗುಪ್ತಾ ಈ ವರದಿಗಳು ತಪ್ಪೆಂದು ಹೇಳಿದ್ದಾರೆ. ಆದರೆ ತಾಂತ್ರಿಕ ತೊಂದರೆ ಉಂಟಾಗಿದ್ದನ್ನು ಒಪ್ಪಿಕೊಂಡಿರುವ ಅವರು ಈ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ರೈಲಿನ ಇಂಜಿನಿನ ವ್ಯಾಕ್ಯೂಮ್ ಬ್ರೇಕ್ ಡಿ-ಆ್ಯಕ್ಟಿವೇಟ್ ಆಗಿದ್ದರಿಂದ ಸಮಸ್ಯೆ ಉದ್ಭವಿಸಿತೆಂದು ತಿಳಿದು ಬಂದಿದೆ. ಇನ್ನೊಂದು ಇಂಜಿನ್ ಆಗಮಿಸಿ ರೈಲನ್ನು ಚಿಪ್ಲುನ್ ನಿಲ್ದಾಣದ ತನಕ ಎಳೆದುಕೊಂಡು ಹೋಯಿತು.







