‘ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಮೌನ ಬೇಡ’

ಮಂಗಳೂರು,ಜೂ.28: ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ವೌನಕ್ಕೆ ಶರಣಾಗದೆ, ಪೋಷಕರು ಕಾನೂನಿನ ಮೂಲಕ ನ್ಯಾಯಕ್ಕೆ ಮುಂದಾದಾಗ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವ ಜತೆಗೆ, ಸಮಾಜದಲ್ಲಿ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ಹಿರಿಯ ನ್ಯಾಯವಾದಿ ಉದಯಾನಂದ ಅಭಿಪ್ರಾಯಿಸಿದ್ದಾರೆ.
ಅವರು ಇಂದು ನಗರದ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಜಿಲ್ಲಾ ಕಾನೂನು ಸವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಕಾರ್ಯಾಗಾರದಲ್ಲಿ ಪೊಕ್ಸೊ ಕಾಯ್ದೆ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳ ಮೇಲಿನ ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಪೋಷಕರು ವೌನಕ್ಕೆ ಶರಣಾಗುವುದೇ ಹೆಚ್ಚು. ಸಮಾಜದಲ್ಲಿ ಮಗುವಿನ ಮುಂದಿನ ಭವಿಷ್ಯ ಹಾಗೂ ಗೌರವದ ಅಂಜಿಕೆಯಿಂದ ಈ ರೀತಿ ವೌನಕ್ಕೆ ಶರಣಾಗುವುದು ಸಹಜವಾದರೂ, ಇದರಿಂದ ಇಂತಹ ದುಷ್ಕೃತ್ಯಗಳು ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗಾಗಿ ಪೋಷಕರು ನ್ಯಾಯಕ್ಕಾಗಿ ಧ್ವನಿ ಎತ್ತಬೇಕು. ಜೊತೆಯಲ್ಲೇ ತಮ್ಮ ಮಕ್ಕಳ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳ ಬಗ್ಗೆಯೂ ಕಾಳಜಿ ವಹಿಸುವ ಮೂಲಕ ಅವರು ತಪ್ಪು ದಾರಿಗೆ ಹೋಗುವುದನ್ನು ತಡೆಯುವುದು ಕೂಡಾ ಅತೀ ಅಗತ್ಯ ಎಂದವರು ಅಭಿಪ್ರಾಯಿಸಿದರು.
ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿ ಕಾನೂನು ಅತ್ಯಂತ ಕಠಿಣವಾಗಿದ್ದು, ಇಂತಹ ಪ್ರಕರಣಗಳಲ್ಲಿ ದೌರ್ಜನ್ಯವೆಸಗಿದವರು ಅದೆಷ್ಟೇ ಪ್ರಭಾವಶಾಲಿ ಆಗಿದ್ದರೂ ಪೊಕ್ಸೊ ಕಾನೂನಿನಡಿ ಕಠಿಣ ಶಿಕ್ಷೆಗೆ ಒಳಗಾಗುತ್ತಾರೆ ಎಂದು ಅವರು ಸಲಹೆ ನೀಡಿದರು.
ಕಾರ್ಯಾಗಾರವನ್ನು 2ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸರ್ವೋದಯ ಶೆಟ್ಟಿಗಾರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ದುರ್ಘಟನೆ ಆದ ಬಳಿಕ ಕಾನೂನಿನ ಮೊರೆ ಹೋಗುವುದಕ್ಕಿಂತಲೂ ದುರ್ಘಟನೆ ಆಗದಂತೆ ಎಚ್ಚರಿಕೆ ವಹಿಸುವುದು ಅತೀ ಅಗತ್ಯ ಎಂದು ಅಭಿಪ್ರಾಯಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ನ್ಯಾಯವಾದಿ ಅನಿತಾ ಕಿಣಿ ಮಹಿಳೆಯರ ಕುರಿತಾದ ಕಾನೂನುಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೂರ್ಣಿಮಾ ಕೆ.ಯವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕಿ ಚಂದ್ರಿಕಾರವರು ಮಾನವ ಸಾಗಾಣಿಕೆಯಿಂದ ತೊಂದರೆಗೊಳಗಾದವರಿಗೆ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ, ಮಹಿಳಾ ಮತ್ತು ಮಕ್ಕಳ ಅಭಿವನದ್ದಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂರಕ್ಷಣಾಧಿಕಾರಿ ಉಸ್ಮಾನ್ ಎ. ಉಪಸ್ಥಿತರಿದ್ದರು.







