ಹಸುಳೆ ಸಾವಿಗೆ ವೈದ್ಯರ ನಿರ್ಲಕ್ಷ್ಯಆರೋಪ: ಪೊಲೀಸರಿಗೆ ದೂರು

ಪುತ್ತೂರು, ಜೂ.28: ಜ್ವರದಿಂದ ಬಳಲುತ್ತಿದ್ದ ಏಳೂವರೆ ತಿಂಗಳ ಮಗುವೊಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ ಹಾಗೂ ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿದ ಘಟನೆ ಮಂಗಳವಾರ ಪುತ್ತೂರಿನಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕೋಡಪದವು ಹೊಸಮನೆ ನಿವಾಸಿ ಪದ್ಮನಾಭ ಮತ್ತು ವಿದ್ಯಾ ದಂಪತಿಯ ಪುತ್ರಿ ಏಳೂವರೆ ತಿಂಗಳು ಪ್ರಾಯದ ಚೈತನ್ಯ ಮೃತಪಟ್ಟ ಹಸುಳೆ. ಪುಟಾಣಿ ಚೈತನ್ಯಾಗೆ ಕಾಲು ಊತ, ಜ್ವರ ಮತ್ತು ವಾಂತಿ ಕಂಡು ಬಂದ ಕಾರಣ 2 ದಿನಗಳ ಹಿಂದೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಲ್ಲಿ ಸ್ಪಲ್ಪಮಟ್ಟಿಗೆ ಚೇತರಿಸಿಕೊಂಡಿದ್ದ ಚೈತನ್ಯಗೆ ಮಂಗಳವಾರ ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ಮತ್ತೆ ವಾಂತಿಯಾಗಿತ್ತು. ಇದಕ್ಕಾಗಿ ಆಸ್ಪತ್ರೆಯ ದಾದಿ 2 ಇಂಜೆಕ್ಷನ್ ನೀಡಿದ್ದರು. ಇದಾದ ಸ್ವಲ್ಪಹೊತ್ತಿನಲ್ಲಿಯೇ ಮಗು ಮೃತಪಟ್ಟಿದ್ದು, ಮಗುವಿನ ಸಾವಿಗೆ ದಾದಿಯು ನೀಡಿರುವ ಇಂಜೆಕ್ಷನ್ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಗು ಮೃತಪಟ್ಟಿರುವ ಮಾಹಿತಿ ಅರಿತು ಕುಟುಂಬಸ್ಥರು ಆಸ್ಪತ್ರೆಯಲ್ಲಿ ಜಮಾಯಿಸಿದ್ದರು. ಅಲ್ಲದೆ ಪೊಲೀಸರಿಗೂ ದೂರು ನೀಡಿದ್ದರು.
ಆಸ್ಪತ್ರೆಗೆ ಶಾಸಕಿ ಭೇಟಿ
ಆಸ್ಪತ್ರೆಗೆ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ ನೀಡಿ ಮೃತ ಮಗುವಿನ ಕುಟುಂಬಸ್ಥರೊಂದಿಗೆ ಹಾಗೂ ಆಸ್ಪತ್ರೆಯ ವೈದ್ಯರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕಿ ಮೃತ ಮಗುವಿನ ಕುಟುಂಬಸ್ಥರಿಗೆ ಸಾಂತ್ವನ ನೀಡಿದರು.
ಆಸ್ಪತ್ರೆಯಿಂದ ತಪ್ಪಾಗಿಲ್ಲ: ವೈದ್ಯರ ಸ್ಪಷ್ಟನೆ
ಕಳೆದ 2 ದಿನಗಳ ಹಿಂದೆ ಜ್ವರ ಮತ್ತು ವಾಂತಿಯೆಂದು ಮಗುವನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಫಲವಾಗಿ 48 ಗಂಟೆಗಳ ಬಳಿಕ ಮಗುವಿನ ಆರೋಗ್ಯದಲ್ಲಿ ಸುಧಾರಣೆಯಾಗಿತ್ತು. ಇಂದು ಮುಂಜಾನೆ ಮತ್ತು ಆನಾರೋಗ್ಯ ಉಲ್ಬಣಗೊಂಡು ಮಗು ಮೃತಪಟ್ಟಿದೆ. ಆಸ್ಪತ್ರೆಯಿಂದ ಯಾವುದೇ ತಪ್ಪಾಗಿಲ್ಲ ಎಂದು ಆಸ್ಪತ್ರೆಯ ಮಕ್ಕಳ ತಜ್ಞ ಹಾಗೂ ಚೈತನ್ಯಾಗೆ ಚಿಕಿತ್ಸೆ ನೀಡಿದ ಡಾ. ಶ್ರೀಕಾಂತ್ ರಾವ್ ಸ್ಪಷ್ಟನೆ ನೀಡಿದ್ದಾರೆ.
ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ಕಡೆಗಳಿಂದ ತನ್ನಲ್ಲಿಗೆ ಚಿಕಿತ್ಸೆಗಾಗಿ ಮಕ್ಕಳನ್ನು ಕರೆತರುತ್ತಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಒಂದು ಮಗು ಮೃತಪಟ್ಟಿತ್ತು. ಆ ಬಳಿಕ ಇಂತಹ ಯಾವುದೇ ಘಟನೆ ನಡೆದಿಲ್ಲ. ನಾವು ಎಲ್ಲಾ ರೋಗಿಗಳ ಬಗ್ಗೆಯೂ ತುಂಬಾ ಕಾಳಜಿ ವಹಿಸಿ ರೋಗ ಶಮನಕ್ಕೆ ಯತ್ನಿಸುತ್ತೇವೆ. ಈ ಮಗುವಿನ ಚಿಕಿತ್ಸೆಯಲ್ಲಿಯೂ ಆಸ್ಪತ್ರೆಯಿಂದ ಯಾವುದೇ ತಪ್ಪಾಗಿಲ್ಲ ಎಂದು ಅವರು ತಿಳಿಸಿದ್ದಾರೆ.







