ಮೂಡುಬಿದಿರೆ: ಉಳುಮೆ ಮಾಡುತ್ತಿದ್ದ ವೇಳೆ ಟಿಲ್ಲರ್ ಪಲ್ಟಿಯಾಗಿ ರೈತ ಮೃತ್ಯು

ಮೂಡುಬಿದಿರೆ, ಜೂ.28: ಟಿಲ್ಲರ್‌ನಲ್ಲಿ ಜಮೀನು ಉಳುಮೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಟಿಲ್ಲರ್ ಪಲ್ಟಿ ಹೊಡೆದು ಟಿಲ್ಲರ್ ಚಲಾಯಿಸುತ್ತಿದ್ದ ರೈತ ಸಾವನಪ್ಪಿದ ಘಟನೆ ಕಲ್ಲಮುಂಡ್ಕೂರಿನಲ್ಲಿ ರವಿವಾರ ನಡೆದಿದೆ.
ಮೃತ ರೈತರನ್ನು ಕಲ್ಲಮುಂಡ್ಕೂರು ಗ್ರಾಮದ ತಾನಮನೆಯ ದಿನೇಶ್ ಪೂಜಾರಿ (50)ಎಂದು ಗುರುತಿಸಲಾಗಿದೆ. ಅವರು ರವಿವಾರ ಬೆಳಗ್ಗೆ ತನ್ನ ಕೃಷಿ ಜಮೀನಿನಲ್ಲಿ ಟಿಲ್ಲರ್‌ನಲ್ಲಿ ಉಳುಮೆ ಮಾಡುತ್ತಿದ್ದರು. ಉಳುಮೆ ಮಾಡುತ್ತಾ ಟಿಲ್ಲರನ್ನು ಗದ್ದೆಯ ಅಂಚಿಗೆ ಕೊಂಡೊಯ್ದು ತಿರುಗಿಸುವಾಗ ಗದ್ದೆಯ ಅಂಚಿನ ಮಣ್ಣು ಕುಸಿದು ಟಿಲ್ಲರ್ ಪಲ್ಟಿ ಹೊಡೆಯಿತು. ಟಿಲ್ಲರ್ ಚಲಾಯಿಸುತ್ತಿದ್ದ ದಿನೇಶ್ ಟಿಲ್ಲರ್ ಯಂತ್ರದ ಮೇಲೆ ಬಿದ್ದರೆನ್ನಲಾಗಿದೆ. ತಿರುಗುತ್ತಿದ್ದ ಟಿಲ್ಲರ್‌ಯಂತ್ರದ ಬ್ಲೇಡ್ ದಿನೇಶ್ ಅವರ ಎದೆ ಮತ್ತು ಇತರ ಅಂಗಾಂಗಗಳಿಗೆ ತಾಗಿ ತೀವ್ರ ಸ್ವರೂಪದ ಗಾಯಗಳುಂಟಾಗಿತ್ತು.
ಗಂಭೀರ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story





