ಬದ್ರಿಯಾ ಕಾಲೇಜಿನಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ

ಮಂಗಳೂರು, ಜೂ.28: ಮಾದಕ ದ್ರವ್ಯವು ವ್ಯಕ್ತಿಯನ್ನು ಬಲಿಪಡೆಯುವುದರ ಜೊತೆಗೆ ಕೌಟುಂಬಿಕ, ಆರ್ಥಿಕ ಹಾಗೂ ಸಾಮಾಜಿಕ ಹಾನಿಗೆ ಕಾರಣವಾಗುತ್ತದೆ. ಆದ್ದರಿಂದ ಯುವಕರು ಮಾದಕ ದ್ರವ್ಯದ ಬಗ್ಗೆ ಜಾಗೃತರಾಗಿ ಇದನ್ನು ತಮ್ಮ ಪರಿಸರದಲ್ಲೂ ಜಾಗೃತಿ ಮೂಡಿಸಬೇಕೆಂದು ಅಲ್ ಬದ್ರಿಯಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಮುಹಮ್ಮದ್ ಶರೀಫ್ ಎಮ್.ಎಸ್. ಹೇಳಿದರು.
ಅವರು ಅಲ್ ಬದ್ರಿಯಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ್ದ ಮಾದಕ ದ್ರವ್ಯ ವಿರೋಧಿ ಜಾಥಾವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಚಾಲಕ ಮುಹಮ್ಮದ್ ಇಸ್ಮಾಯೀಲ್, ಯುವಕರು ಮಾದಕ ದ್ರವ್ಯಗಳಿಗೆ ದಾಸರಾಗದೆ ಸಂಘಟಿತರಾಗಿ ಇದರ ವಿರುದ್ಧ ಹೋರಾಡಬೇಕಾಗಿದೆ ಎಂದು ಹೇಳಿದರು.
ಜಾಗೃತಿ ಜಾಥಾದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಫ್ತಿಕಾರ್ ಅಹ್ಮದ್, ಬದ್ರಿಯಾ ಜುಮಾ ಮಸೀದಿಯ ಪದಾಧಿಕಾರಿಗಳು, ಪ್ರಾಂಶುಪಾಲ ಸಂದೀಪ್ ಆಚಾರ್ಯ, ಉಪಪ್ರಾಂಶುಪಾಲೆ ಗುಣವತಿ ರಮೇಶ್, ಮುಖ್ಯೋಪಾಧ್ಯಾಯ ಸತೀಶ್ ಎನ್. ಉಪಸ್ಥಿತರಿದ್ದರು. 300 ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿದ್ದರು.







